ತಲಾದಾಯದಲ್ಲಿ ಕಂದಕ, ಅಭಿವೃದ್ಧಿಗೆ ಆತಂಕ!

Income
Published on

ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ತಲಾದಾಯ ನಾಡಿನ ಆರ್ಥಿಕ ಪ್ರಗತಿಯ ತಲೆಬಾಗಿಲೂ ಹೌದು. ಸದ್ಯದ ಸನ್ನಿವೇಶದಲ್ಲಿ ಬೆಂಗಳೂರಿನ ತಲಾದಾಯ ವರ್ಷದಿಂದ ವರ್ಷಕ್ಕೆ ಜಿಗಿತ ಕಾಣುತ್ತಿದೆ. ಇದರ ಪರಿಣಾಮ ಜಿಲ್ಲೆಗಳ ನಡುವಿನ ಅಂತರ ಕೂಡ ಗಣನೀಯ ಏರಿಕೆ ಆಗುತ್ತಿದೆ. ಜಿಲ್ಲಾವಾರು ತಲಾದಾಯದಲ್ಲಿ ಬೆಂಗಳೂರು ಅಗ್ರಸ್ಥಾನಿಯಾದರೆ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ನಂತರದಲ್ಲಿವೆ. ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿ ಜಿಲ್ಲೆ ಒಳಗೊಂಡ ಕಲಬುರಗಿ ವಿಭಾಗದ ತಲಾದಾಯ ಕೊನೇ ಸ್ಥಾನದಲ್ಲಿದೆ.

ಲೆಕ್ಕಾಚಾರ ಹೇಗೆ?: ಪ್ರಸಕ್ತ ಬೆಲೆಗಳಲ್ಲಿನ ರಾಜ್ಯದ ನಿವ್ವಳ ಆಂತರಿಕ ಉತ್ಪನ್ನವನ್ನು ವಿತ್ತೀಯ ವರ್ಷದ ನಟ್ಟ ನಡುವಿನ ಅಂದಾಜು ಜನಸಂಖ್ಯೆಯಿಂದ ಅಂದರೆ ಪ್ರತಿ ವರ್ಷದ ಅಕ್ಟೋಬರ್ 1ರಂದು ಇರಬಹುದಾದ ಜನಸಂಖ್ಯೆಯಿಂದ ಭಾಗಿಸಿ ತಲಾದಾಯ ಲೆಕ್ಕಹಾಕಲಾಗುತ್ತದೆ. ತಲಾದಾಯ ಒಂದು ಲೆಕ್ಕಾಚಾರ ಅಷ್ಟೇ. ಸರಾಸರಿಯ ಒಂದು ಚಿತ್ರಣ. ಬೆಂಗಳೂರಿನ ತಲಾದಾಯ ಹೆಚ್ಚಿದೆ ಎಂದ ಕೂಡಲೇ ಎಲ್ಲರ ಆದಾಯ ಹೆಚ್ಚಿದೆ ಎಂದರ್ಥವಲ್ಲ. ರಾಜಧಾನಿಯಲ್ಲೂ ಕೂಲಿ ಮಾಡುವವರು ಇರುತ್ತಾರೆ.ಆದರೆ, ಸಮಾನವಾಗಿ ಹಂಚಿದರೆ ಆ ಸರಾಸರಿ ಬರಬಹುದೆಂಬ ಲೆಕ್ಕಾಚಾರವೂ ಇದೆ. ಇದರ ಹೊರತಾಗಿ ಹೆಚ್ಚು ಆದಾಯ ಗಳಿಸುವವರ ಸಂಖ್ಯೆ ಹೆಚ್ಚಿರುತ್ತದೆ ಎಂಬ ಇನ್ನೊಂದು ವಾದವೂ ಇದೆ.

ಚೇತರಿಕೆ ಹಾದಿ: 2 ವರ್ಷದ ಹಿಂದೆ ಕೋವಿಡ್​ನಿಂದ ಕುಸಿದಿದ್ದ ಆರ್ಥಿಕತೆ ಸಹಜ ಸ್ಥಿತಿಗೆ ಮರಳಿದೆ. 2022-23ನೇ ಸಾಲಿನಲ್ಲಿ ರಾಜ್ಯದ ನಿವ್ವಳ ತಲಾದಾಯ 3,04,747 ರೂ. ಇತ್ತು. 2023-24ನೇ ಸಾಲಿಗೆ ಶೇ.9.3 ಹೆಚ್ಚಳ ದೊಂದಿಗೆ 3,32,926 ರೂ. ಆಗಬಹುದೆಂದು ಅಂದಾಜಿಸ ಲಾಗಿದೆ. ವಿಶೇಷವೆಂದರೆ ಕರ್ನಾಟಕ ರಾಜ್ಯದ ತಲಾದಾಯವು (3,32,926) ರಾಷ್ಟ್ರೀಯ ತಲಾದಾಯಕ್ಕಿಂತಲೂ (1,85,854) ಹೆಚ್ಚಾಗಿದೆ.

per capita

ಅಂತರ ಹೆಚ್ಚಳ: ಜಿಲ್ಲಾ ಆದಾಯ ಜಿಲ್ಲಾ ಮಟ್ಟದಲ್ಲಿನ ಆರ್ಥಿಕ ಬೆಳವಣಿಗೆಯ ಅಳತೆಗೋಲಾಗಿದೆ. ರಾಜ್ಯ ಮಟ್ಟದ ಆರ್ಥಿಕ ಪ್ರಗತಿಯ ಪ್ರಕ್ರಿಯೆಯಲ್ಲಿ ಅಂತರ ಜಿಲ್ಲಾ ವ್ಯತ್ಯಾಸಗಳ ಹಾಗೂ ಅಸಮತೋಲನೆಯ ಗುಣ ಲಕ್ಷಣಗಳ ಬಗ್ಗೆ ಗಮನ ಹರಿಸಲು ಇದೊಂದು ಉಪಯುಕ್ತ ನೀತಿ ಸೂಚಕವಾಗಿರುತ್ತದೆ. ತಲಾದಾಯ ಕಡಿಮೆ ಇರುವ ಕಡೆ ಕೈಗಾರಿಕೆ ಮತ್ತು ಸೇವಾ ವಲಯದ ಉದ್ಯಮಗಳು ಕಡಿಮೆ ಇರುವುದು ಈ ಪ್ರವೃತ್ತಿಗೆ ಕಾರಣ ಎಂದು ಸರ್ಕಾರ ಅಂದಾಜಿಸಿದೆ. ಆದ್ದರಿಂದ ಕೈಗಾರಿಕೆ ಮತ್ತು ಸೇವಾ ವಲಯದ ಉದ್ಯಮಗಳ ಸ್ಥಾಪನೆಯಲ್ಲಿ ಖಾಸಗಿ ವಲಯದವರನ್ನು ಪ್ರೋತ್ಸಾಹಿಸಬೇಕೆಂಬ ಶಿಫಾರಸು ಕೂಡ ಸರ್ಕಾರದ ಮುಂದೆ ಇದೆ.

ಬೆಳವಣಿಗೆ ವೇಗ: ರಾಜ್ಯ, ದೇಶದ ತಲಾದಾಯ ತುಲನೆ ಮಾಡುವುದಾದರೆ ಕರ್ನಾಟಕದ ಬೆಳವಣಿಗೆ ವೇಗ ದೇಶದ ಬೆಳವಣಿಗೆ ವೇಗಕ್ಕಿಂತ ಹೆಚ್ಚಿದೆ. 2014-15ರಲ್ಲಿ ಕರ್ನಾಟಕದ ತಲಾ ಆದಾಯ 1,30,024 ರೂ. ಇದ್ದರೆ, ಭಾರತದ ಸರಾಸರಿ 86,647 ರೂ. ಇತ್ತು. 2020ರ ವೇಳೆಗೆ ಕರ್ನಾಟಕದ ಬೆಳವಣಿಗೆ 2,22,141 ರೂ.ಗೆ ಮುಟ್ಟಿದರೆ, ಭಾರತದ್ದು 1,25,946ಕ್ಕೆ ತಲುಪಿತು. 2021ರಿಂದೀಚೆಗೆ ರಾಜ್ಯದ ಬೆಳವಣಿಗೆ ಬಹಳ ಹೆಚ್ಚಾಗಿದೆ. 2023-24ರಲ್ಲಿ ದೇಶದ್ದು 1,85,854 ರೂ.ಗಳಾದರೆ, ಕರ್ನಾಟಕದ್ದು 3,32,926 ರೂ. ತಲುಪುವ ಮೂಲಕ ದುಪ್ಪಟ್ಟಾಗುವ ಹಾದಿಯಲ್ಲಿದೆ.

ತಜ್ಞರ ಸಲಹೆಗಳೇನು?

  • ಆರ್ಥಿಕತೆ ಸಮತೋಲನ ಕಳೆದುಕೊಳ್ಳುತ್ತಿರುವ ಬೆಳವಣಿಗೆ ಬಗ್ಗೆ ಸರ್ಕಾರ ತುರ್ತು ಗಮನ ಕೊಡಲಿ
  • ಕೇಂದ್ರೀಕೃತ ಆರ್ಥಿಕತೆ ಆರೋಗ್ಯಕರವಲ್ಲ. ವಿಕೇಂದ್ರೀಕರಣ ಆದರಷ್ಟೇ ಎಲ್ಲೆಡೆ ಆರ್ಥಿಕತೆ ವೃದ್ಧಿ ಸಾಧ್ಯ
  • ವೃದ್ಧಿ ಆಗುತ್ತಿರುವ ರಸ್ತೆ, ರೈಲು, ವಿಮಾನ ಸೇರಿ ಮೂಲಸೌಕರ್ಯ ಬಳಸಿ ಕೈಗಾರಿಕೆಗಳನ್ನು ಸೆಳೆಯಬೇಕು
  • ಬೆಂಗಳೂರು ಹೊರತಾದ ಬೆಳವಣಿಗೆ ಬಾಯಿ ಮಾತಲ್ಲಿ ಹೇಳಿದರೆ ಸಾಲದು. ಮಿಷನ್ ಮೋಡ್ ಅಗತ್ಯ

ಇದು ಆರೋಗ್ಯಕರ ಬೆಳವಣಿಗೆಯಲ್ಲ. ಕರ್ನಾಟಕ ಆರ್ಥಿಕ ಚಟುವಟಿಕೆ ಬೆಂಗಳೂರನ್ನು ಕೇಂದ್ರೀಕರಿಸುತ್ತಿದೆ. ಅಭಿವೃದ್ಧಿ ಸಾಗುತ್ತಿರುವ ಮುಂಚೂಣಿ ರಾಜ್ಯಗಳಲ್ಲಿ ಕರ್ನಾಟಕ ಇದೆ. ಬೆಂಗಳೂರು ಹೊರತುಪಡಿಸಿ ನೋಡಿದರೆ ಏನು ಕತೆ?

| ಪ್ರೊ.ಬಿ.ಎಂ.ಕುಮಾರಸ್ವಾಮಿ ಅರ್ಥಶಾಸ್ತ್ರಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net