

ಸಾಗರ: ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಸರ್ಕಾರದ ಸಂಕಲ್ಪ. ಈ ಹಿನ್ನೆಲೆಯಲ್ಲಿ ಸಾಗರದಲ್ಲಿ ಕುಡಿಯುವ ನೀರಿನ ತಪಾಸಣಾ ಘಟಕ ಸ್ಥಾಪಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಗಾಂಧಿನಗರದಲ್ಲಿ ಭಾನುವಾರ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಟ್ಟಡ ಹಾಗೂ ಕುಡಿಯುವ ನೀರಿನ ತಪಾಸಣಾ ಘಟಕ ಉದ್ಘಾಟಿಸಿ ಮಾಡಿ ಮಾತನಾಡಿದರು.ಸಾಗರ, ಸೊರಬ ಮತ್ತು ಶಿಕಾರಿಪುರ ವ್ಯಾಪ್ತಿಗೆ ಒಳಗೊಂಡ ಈ ಘಟಕದಲ್ಲಿ ಕುಡಿಯುವ ನೀರಿನ ಶುದ್ಧತೆಯನ್ನು ಮಳೆಗಾಲಕ್ಕೂ ಮೊದಲು ಹಾಗೂ ಮಳೆಗಾಲದ ನಂತರ ಪರೀಕ್ಷೆ ಮಾಡಲಾಗುತ್ತದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ನೀರು ಪ್ರಮುಖ ಪಾತ್ರ ವಹಿಸುತ್ತದೆ. ನೀರಿಗೆ ಸಂಬಂಧಿಸಿ 16 ಪರಿಮಾಣವನ್ನು ಪರೀಕ್ಷೆ ನಡೆಸಿ ವರದಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಮನೆಮನೆಗೆ ಗಂಗೆ ಕಾರ್ಯಕ್ರಮ ಸಾಗರ ತಾಲೂಕಿನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಒಟ್ಟು 46,500 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಉದ್ದೇಶವಿದೆ. ಈವರೆಗೆ 6,700 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಉಳಿದ ಕಾರ್ಯ ಪ್ರಗತಿಯಲ್ಲಿದೆ. ತಾಳಗುಪ್ಪ ಹೋಬಳಿಯಲ್ಲಿ ಶೇ.60 ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ಮುಗಿದಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೂರ್ಣಗೊಂಡಿದ್ದು ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ ಎಂದರು. ಆವಿನಹಳ್ಳಿ ಮತ್ತು ಕಸಬಾ ಹೋಬಳಿಯ 13 ಗ್ರಾಮ ಪಂಚಾಯಿತಿಗಳಿಗೆ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಕೆ ಮಾಡಲು 100 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧವಾಗಿದ್ದು, ಕಾಮಗಾರಿ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಯೋಜನೆಗಳು ಸಮರ್ಪಕವಾಗಿ ಪೂರೈಸಲು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತ ಬಿ.ಪಿ.ಬಲರಾಮ ದುಬೆ ಮತ್ತು ತಂಡ ಉತ್ತಮ ಕಾರ್ಯನಿರ್ವಹಿಸಿದೆ. ಸೋಮವಾರ ನಿವೃತ್ತರಾಗುತ್ತಿದ್ದು ಮುಂದಿನ ಬದುಕು ಯಶಸ್ವಿಯಾಗಲಿ ಎಂದರು.ಅಭಿಯಂತ ಗುರುಕೃಷ್ಣ ಶೆಣೈ, ಪ್ರಮುಖರಾದ ಚೇತನರಾಜ್ ಕಣ್ಣೂರು, ಸೋಮಶೇಖರ, ಮನೋಜ್, ಗಣಪತಿ, ಮನೋಜ್ ಇತರರಿದ್ದರು.