

ಚಿಕ್ಕಮಗಳೂರು: ಗಣೇಶ ಚತುರ್ಥಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಹಬ್ಬದಾಚರಣೆಗೆ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿವೆ. ವಿವಿಧ ಸಮಿತಿಗಳು ನಗರ, ಗ್ರಾಮೀಣ ಪ್ರದೇಶದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಯುವಕರು ಮುಂದಾಗಿದ್ದು, ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಿಷೇಧಿಸಲಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಜೇಡಿ ಮಣ್ಣು ಮತ್ತು ರಟ್ಟಿನಿಂದ ತಯಾರಿಸಿದ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.
ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಕಾರ್ಯಕ್ರಮದ ರೂಪುರೇಷೆ ಸಿದ್ಧಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ 1700ಕ್ಕೂ ಹೆಚ್ಚು ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಹಬ್ಬದ ದಿನ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಪ್ರತಿ ತಾಲೂಕು, ಠಾಣೆವಾರು ಶಾಂತಿ ಸಭೆಗಳನ್ನು ನಡೆಸಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ನಗರದ ಐ.ಜಿ. ರಸ್ತೆ, ಬಸವನಹಳ್ಳಿ, ಮಲ್ಲಂದೂರು ರಸ್ತೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಗಣೇಶ ಮತ್ತು ಗೌರಿಯ ಮೂರ್ತಿಗಳನ್ನು ಅಲ್ಲಲ್ಲಿ ಮಾರಾಟಕ್ಕೆ ಇಡಲಾಗಿದೆ. ಹಬ್ಬ ಸಮೀಪಿಸುತ್ತಿದ್ದಂತೆ ದೊಡ್ಡ ಪ್ರಮಾಣದಲ್ಲಿ ಮೂರ್ತಿಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಹಾವಿನಾಕೃತಿ, ಶಿವತಾಂಡವ, ನಾಗರಾಜ, ಸಿಂಹ, ಸಾಯಿ ಬಾಬಾ ಗಣಪತಿ ಹೀಗೆ ವಿವಿಧ ಭಂಗಿಯ ಮೂರ್ತಿಗಳು ನಗರದ ಮಾರುಕಟ್ಟೆಯಲ್ಲಿ ಕಾಣಿಸುತ್ತಿವೆ. ಹಬ್ಬ ಹತ್ತಿರವಾದಂತೆ ವಿಭಿನ್ನ ಮೂರ್ತಿಗಳು ಮಾರುಕಟ್ಟೆಗೆ ಆಗಮಿಸಲಿವೆ.
ಜೇಡಿ ಮಣ್ಣು ಮತ್ತು ರಟ್ಟಿನಿಂದ ತಯಾರಿಸಿದ ಗಣೇಶ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇದೆ. ಅದಕ್ಕಾಗಿ ಮುಂಚಿತವಾಗಿ ತಿಳಿಸಿ ಮೂರ್ತಿಗಳನ್ನು ಮಾಡಿಸುತ್ತಿದ್ದಾರೆ.
ಈ ಬಾರಿ ಆಫರ್‌ಗಳಿಲ್ಲ: ರಾಜಕಾರಣಿಗಳು ಬಡಾವಣೆಗಳಿಗೆ ಮತ್ತು ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ತಾವೇ ಮೂರ್ತಿಗಳನ್ನು ಕೊಡಿಸುವುದಾಗಿ ಆಫರ್ ನೀಡುತ್ತಿದ್ದರು. ಹೊರಗಿನಿಂದ ಸಗಟು ರೂಪದಲ್ಲಿ ಮೂರ್ತಿಗಳನ್ನು ತರಿಸಿ ಹಂಚುತ್ತಿದ್ದರು. ಇದರಿಂದ ಸ್ಥಳೀಯ ಮೂರ್ತಿ ತಯಾರಕರ ಬದುಕಿಗೆ ಪೆಟ್ಟು ಬೀಳುತ್ತಿತ್ತು. ಉಚಿತ ವಿತರಣೆಯಿಂದ ಕುಶಲಕರ್ಮಿಗಳು ಸಿದ್ಧಗೊಳಿಸಿದ ಮೂರ್ತಿಗಳು ಮಾರಾಟ ಆಗುತ್ತಿರಲಿಲ್ಲ. ಆದರೆ ಈ ಬಾರಿ ರಾಜಕೀಕಾರಣಿಗಳು ಗಣೇಶ ಮೂರ್ತಿಗಳನ್ನು ಕೊಡಿಸುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ವ್ಯಾಪಾರಿಗಳ ಮುಖದಲ್ಲಿ ಸಂತಸ ಮೂಡಿದೆ. ಜಿಲ್ಲೆಯಲ್ಲಿ ಹಲವು ಕುಟುಂಬಗಳು ಮೂರ್ತಿ ತಯಾರಿಕೆಯಲ್ಲಿ ತೊಡಗಿವೆ.
17 ಕೇಂದ್ರಗಳಲ್ಲಿ ಏಕಗವಾಕ್ಷಿ: ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ಪಡೆಯಲು 17 ಕೇಂದ್ರಗಳಲ್ಲಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ಮೂರ್ತಿ ತಯಾರಿಕೆಗೆ ರಾಸಾಯನಿಕ ಬಣ್ಣ, ಥರ್ಮಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್‌ಗಳನ್ನು ಬಳಸಬಾರದು. ಈ ರೀತಿಯ ವಸ್ತುಗಳನ್ನು ಬಳಸಿ ತಯಾರಿಸುವ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಳ್ಳಲು ನಗರಸಭೆ, ಗ್ರಾಮ ಸಭೆ, ಪರಿಸರ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಈಗಾಗಲೇ ಡಿಸಿ ಮೀನಾ ನಾಗರಾಜ್ ನಿರ್ದೇಶನ ನೀಡಿದ್ದಾರೆ. ಆಯೋಜಕರು ಅಯಾ ವ್ಯಾಪ್ತಿಯ ಏಕಗವಾಕ್ಷಿ ಕೇಂದ್ರದಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಜತೆಗೆ ಎಷ್ಟು ಎತ್ತರದ ಮೂರ್ತಿ, ಎಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು.
ಹಿರೇಮಗಳೂರು ಕೆರೆಯಲ್ಲಿ ವಿಸರ್ಜನೆ: ಗಣೇಶ ಮೂರ್ತಿಗಳ ವಿಸರ್ಜನೆಗೆ ಪ್ರತಿ ವರ್ಷ ನಗರದ ದಂಟರಮಕ್ಕಿ ಕೆರೆಯಲ್ಲಿ ತಾತ್ಕಾಲಿಕವಾಗಿ ಕಲ್ಯಾಣಿ ನಿರ್ಮಿಸಿ ಅವಕಾಶ ಮಾಡಿಕೊಡಲಾಗುತ್ತಿತ್ತು. ಕೆರೆಯಲ್ಲಿ ಈಗ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಪರ್ಯಾಯವಾಗಿ ಹಿರೇಮಗಳೂರು ಕೆರೆಯಲ್ಲಿ ಕಲ್ಯಾಣಿ ನಿರ್ಮಿಸಿ ಮೂರ್ತಿಗಳ ವಿಸರ್ಜನೆಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ.
ಮುಂಗಡ ಬುಕಿಂಗ್: ಚಿಕ್ಕಮಗಳೂರು ತಾಲೂಕಿನ ಮಡಕೆ ಹೊಸಳ್ಳಿ ಗ್ರಾಮದ ಕುಂಬಾರ ಗುಂಡಯ್ಯ ಸಮುದಾಯವು ಪರಿಸರ ಸ್ನೇಹಿ ಮೂರ್ತಿಗಳನ್ನು ತಯಾರಿಸುವ ಕಾಯಕದಲ್ಲಿ ಸುಮಾರು ವರ್ಷಗಳಿಂದ ತೊಡಗಿಸಿಕೊಂಡಿದೆ. ಈ ಕುಟುಂಬಗಳು ಅನೇಕ ವರ್ಷಗಳಿಂದ ವ್ಯವಸಾಯದ ಜತೆಗೆ ಪ್ರತಿವರ್ಷವೂ ಮಣ್ಣಿನ ಗಣಪತಿ ಮೂರ್ತಿ ನಿರ್ಮಿಸಿ ಜಿಲ್ಲೆಯ ವಿವಿಧೆಡೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿವೆ. ಅಲ್ಲದೆ ಹಲವು ಕಡೆಯಿಂದ ಗ್ರಾಮಕ್ಕೆ ಭೇಟಿ ನೀಡಿ ಮುಂಗಡವಾಗಿ ಬುಕಿಂಗ್ ಮಾಡಿ ಹೋಗುತ್ತಾರೆ ಎಂದು ಕುಶಲಕರ್ಮಿ ರೇಣುಕಪ್ಪ ತಿಳಿಸಿದರು.
ಪಿಒಪಿ ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಪೂಜಿಸಿದ ನಂತರ ಕೆರೆ, ಕಲ್ಯಾಣಿ, ಪುಷ್ಕರಿಣಿಯಲ್ಲಿ ವಿಸರ್ಜಿಸುವುದರಿಂದ ಜಲಮೂಲಗಳು ಕಲುಷಿತಗೊಳ್ಳುತ್ತವೆ. ಪ್ರಾಣಿ, ಪಕ್ಷಿ ಹಾಗೂ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ. ಪಿಒಪಿ ಮೂರ್ತಿಗಳ ಮಾರಾಟದ ಬಗ್ಗೆ ನಿಗಾವಹಿಸಲಾಗಿದೆ. ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಸಿ.ಎನ್.ಮೀನಾ ನಾಗರಾಜ್ ಎಚ್ಚರಿಸಿದ್ದಾರೆ.