

ಶಿವಮೊಗ್ಗ: ಗಮಕ ಕಲಾವಿದ, 2022ನೇ ಸಾಲಿನ ಪದ್ಮಶ್ರೀ ಪುರಸ್ಕೃತ ಎಚ್.ಆರ್.ಕೇಶವಮೂರ್ತಿ(88) ಅವರು ಬುಧವಾರ ನಿಧನರಾದರು.
ಪತ್ನಿ, ಪುತ್ರಿಯನ್ನು ಅಗಲಿದ್ದು, ಗುರುವಾರ ಬೆಳಗ್ಗೆ ಸ್ವಗ್ರಾಮ ಹೊಸಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಕೇಶವಮೂರ್ತಿ ಅವರಿಗೆ 2022ರ ಜ.25ರಂದು ಕಲಾ ವಿಭಾಗದಲ್ಲಿ ಕೇಂದ್ರ ಸರ್ಕಾರ ನೀಡುವ ಶ್ರೇಷ್ಠ ಪುರಸ್ಕಾರ ಸಂದಿತ್ತು.
ಗಮಕ ಕ್ಷೇತ್ರದಲ್ಲಿ ಪರಿಣಿತಿ ಪಡೆದಿದ್ದ ಎಚ್.ಆರ್.ಕೇಶವಮೂರ್ತಿ ಅವರು ಹೊಸಹಳ್ಳಿಯಲ್ಲಿರುವ ಗಮಕ ಕಲಾ ಪರಿಷತ್‌ನಿಂದ (ಗಮಕ ಆರ್ಟ್ ಅಕಾಡೆಮಿ) ಲಭ್ಯವಿರುವ ಗಮಕದ ಧ್ವನಿ ಹಾಡುಗಳಲ್ಲಿ ಕಾಣಿಸಿಕೊಂಡ ಕಲಾವಿದರಲ್ಲಿ ಒಬ್ಬರಾಗಿದ್ದರು. ಗಮಕ ಕಲಾ ಸಾಧಕರಿಗೆ ನೀಡಲಾಗುವ ಕುಮಾರವ್ಯಾಸ ಪ್ರಶಸ್ತಿಯು ಮೊದಲ ಬಾರಿಗೆ ಒಲಿದಿತ್ತು. ವಾಚನದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿದ್ದರು. ಜತೆಗೆ ಸಾಕಷ್ಟು ರಾಜ್ಯಮಟ್ಟದ ಪ್ರಶಸ್ತಿಗಳೂ ಅವರನ್ನು ಹರಸಿಬಂದಿದ್ದವು.
ವೇದಬ್ರಹ್ಮ ರಾಮಸ್ವಾಮಿ ಶಾಸ್ತ್ರಿ ಮತ್ತು ಲಕ್ಷ್ಮೀದೇವಪ್ಪ ದಂಪತಿ ಪುತ್ರರಾಗಿ ಕೇಶವಮೂರ್ತಿ ಅವರು 1934ರ ಫೆ.22ರಂದು ಹೊಸಳ್ಳಿಯಲ್ಲಿ ಜನಿಸಿದ್ದರು. ಬಾಲ್ಯದಿಂದಲೂ ತಂದೆಯಂತೆಯೇ ಗಮಕ ಕಲೆ ಬಗ್ಗೆ ಆಸಕ್ತರಾಗಿದ್ದ ಅವರು ಗಮಕ ಕಲೆಯನ್ನು ಉಳಿಸಿ ಬೆಳೆಸಲು ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು.