

ಗದಗ: ನರಗುಂದ ತಾಲೂಕಿನ ಹದಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಯನ್ನು ಹತ್ಯೆಗೈದು ಇಬ್ಬರು ಶಿಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಶಿಕ್ಷಕಿ ಮೇಲಿನ ಅತಿರೇಕದ ಪ್ರೇಮವೇ ಕೊಲೆಗೆ ಕಾರಣ ಎಂಬ ಶಂಕೆಯೂ ವ್ಯಕ್ತವಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಶಿವಪ್ರಕಾಶ ದೇವರಾಜು, ಕೊಲೆ ಆರೋಪಿ ಅದೇ ಮುತ್ತು ಎಂಬಾತ ಹದಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದ. ಮೃತ ಬಾಲಕನ ತಾಯಿ ಗೀತಾ ಬಾರಕೇರ ಮೇಲೆ ಹೊಂದಿದ್ದ ಅತಿರೇಕದ ಪ್ರೇಮವೇ ಕೊಲೆಗೆ ಕಾರಣ ಆಗಿರಬಹುದು. ಅವರಿಬ್ಬರ ವಾಟ್ಸ್ಆ್ಯಪ್ ಸಂದೇಶಗಳಿಂದ ಇಂಥದೊಂದು ಅನುಮಾನ ವ್ಯಕ್ತವಾಗುತ್ತಿದೆ ಎಂದರು.
ಸರ್ಕಾರಿ ಶಾಲೆಯಲ್ಲಿ ಗೀತಾ ಬಾರಕೇರ, ಮುತ್ತು ಹಡಗಲಿ ಅತಿಥಿ ಶಿಕ್ಷಕರು. ಸಂಗನಗೌಡ ಪಾಟೀಲ ಸಹ ಶಿಕ್ಷಕ. ಗೀತಾ ಬಾರಕೇರ ಪುತ್ರ ಭರತ್ ಬಾರಕೇರ ಅದೇ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಗೀತಾ ಬಾರಕೇರ ಮತ್ತು ಮುತ್ತು ಹಡಗಲಿ ನಡುವೆ ವಾಟ್ಸ್ಆ್ಯಪ್ನಲ್ಲಿ ಸಂದೇಶಗಳು ವಿನಿಮಯ ಆಗಿವೆ. ಸಂಗನಗೌಡ ಪಾಟೀಲ ಜತೆಗೂ ಗೀತಾ ಸಲುಗೆ ಹೊಂದಿದ್ದಳು. ಇತ್ತೀಚೆಗೆ ಶಾಲೆ ವತಿಯಿಂದ ಶೈಕ್ಷಣಿಕ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಗೀತಾ ಮತ್ತು ಸಂಗನಗೌಡ ನಡುವಿನ ಸಲುಗೆ ವಿಷಯ ಮುತ್ತು ಹಡಗಲಿಗೆ ಗೊತ್ತಾಗಿ ಕ್ಯಾತೆ ತೆಗೆದಿದ್ದ ಎನ್ನುವುದು ಈವರೆಗಿನ ತನಿಖೆಯಿಂದ ಗೊತ್ತಾಗಿದೆ ಎಂದು ಎಸ್ಪಿ ತಿಳಿಸಿದರು.
ಶೈಕ್ಷಣಿಕ ಪ್ರವಾಸದ ನಂತರದ ದಿನಗಳಲ್ಲಿ ಮುತ್ತು ಹಡಗಲಿಯು ಗೀತಾ ಮತ್ತು ಸಂಗನಗೌಡ ಮೇಲೆ ಕತ್ತಿ ಮಸೆಯುತ್ತಿದ್ದ. ಸೋಮವಾರ ಬೆಳಗ್ಗೆ ಶಾಲೆಯ ಕೊಠಡಿಯಿಂದ ಬಾಲಕ ಭರತನನ್ನು ಹೊರಗೆ ಕರೆದು ಹಲ್ಲೆ ನಡೆಸಿ, ಎತ್ತಿ ತೂರಾಡಿ ಗೋಡೆಗೆ ಎಸೆದು ತೀವ್ರ ಗಾಯಪಡಿಸಿ, ಕೆಳಕ್ಕೆ ಬಿದ್ದ ಬಾಲಕನನ್ನು ಮತ್ತೆ ಎತ್ತಿ ಕೊಠಡಿಯಿಂದ ಕೆಲವು ಅಡಿ ಕೆಳಗಿನ ನೆಲಕ್ಕೆ ಎಸೆದಿದ್ದನು. ತೀವ್ರ ರಕ್ತಸಾವ್ರದಿಂದ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ಚೀರಾಟ ಕೇಳಿ ತಪ್ಪಿಸಲು ಓಡಿಬಂದ ಗೀತಾಳನ್ನು ಬೆದರಿಸಿ ಬೆನ್ನತ್ತಿ ತಲೆಗೆ ಸಲಿಕೆಯಿಂದ ಹೊಡೆದಿದ್ದಾನೆ. ಸಂಗನಗೌಡ ಪಾಟೀಲ್ ಮೇಲೂ ಹಲ್ಲೆ ಮಾಡಿದ್ದಾನೆ. ಪ್ರಶ್ನಿಸಲು ಬಂದ ಮುಖ್ಯಶಿಕ್ಷಕ ಬಸವರಾಜ ಯಾವಗಲ್ ಮೇಲೂ ಹಲ್ಲೆಗೆ ಮುಂದಾಗಿದ್ದ. ಅಷ್ಟರಲ್ಲಿ ಮುಖ್ಯಶಿಕ್ಷಕರು ತಪ್ಪಿಸಿಕೊಂಡಿದ್ದಾರೆ ಎಂದು ಘಟನೆ ಕುರಿತು ಎಸ್ಪಿ ವಿವರಿಸಿದರು.
ಬಾಲಕನ ಕೊಂದು ಪರಾರಿಯಾಗಿದ್ದ ಮುತ್ತು ಹಡಗಲಿಯ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ನರಗುಂದ ಹೊರವಲಯದಲ್ಲಿ ಮಂಗಳವಾರ ಮಧ್ಯಾಹ್ನ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಎಸ್ಪಿ ವಿವರಿಸಿದರು.