

ಶಿವಮೊಗ್ಗ: ಓದಿನ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಸಾಧಿಸಿ ಸಮಗ್ರ ಬೆಳವಣಿಗೆ ಸಾಧಿಸುವುದೇ ಶಿಕ್ಷಣದ ನಿಜವಾದ ಗುರಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು.
ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಹಂತದ ನಂತರ ಮುಂದಿನ ಶಿಕ್ಷಣ ಆಯ್ಕೆ ಮಾಡಿಕೊಳ್ಳುವಾಗ, ಬಲವಂತದ ಅಥವಾ ಗೊಂದಲದ ಆಯ್ಕೆಗಿಂತ ಆಸಕ್ತಿಯಿರುವ ವಿಷಯದಲ್ಲಿ ಅಧ್ಯಯನಶೀಲರಾಗಬೇಕು ಎಂದರು.
ಶಿವಮೊಗ್ಗ ಬಿಇಒ ರಮೇಶ್ ಮಾತನಾಡಿ, ವಿದ್ಯೆಯ ಪರಿಪೂರ್ಣತೆಗೆ ಇಚ್ಛಾಶಕ್ತಿಯ ಅವಶ್ಯಕತೆಯಿದೆ. ಹಿರಿಯರ ಜೀವನ ಚರಿತ್ರೆ ಗಮನಿಸಿದಾಗ, ಅವರ ಯಶಸ್ಸಿನ ಹಿಂದೆ ಕಲಿತ ವಿದ್ಯೆ, ಪಡೆದ ಸಂಸ್ಕಾರ ಪ್ರಮುಖ ಪಾತ್ರ ವಹಿಸಿರುತ್ತದೆ ಎಂದು ಹೇಳಿದರು.
ಭದ್ರಾವತಿಯ ಸೆಂಟ್ ಜೋಸೆಫ್ ಶಾಲೆಯ ಪ್ರಾಚಾರ್ಯೆ ಲತಾ ರಾಬರ್ಟ್ ಮಾತನಾಡಿ, ಪ್ರೌಢಶಾಲಾ ಶಿಕ್ಷಣ ಬದುಕಿಗೆ ಭದ್ರ ಬುನಾದಿ. ಈ ಹಂತದಲ್ಲಿ ಶ್ರಮವಹಿಸಿ ಕಲಿಯುವುದು ಅವಶ್ಯ. ವಿದ್ಯಾಸಂಸ್ಥೆಗಳು ಔಪಚಾರಿಕ ಶಿಕ್ಷಣ ನೀಡಿದರೆ, ಅನೌಪಚಾರಿಕ ಶಿಕ್ಷಣ ಮನೆಯಲ್ಲಿ ಸಿಗುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರಗಳನ್ನು ಪಾಲಕರು ನೀಡಬೇಕು ಎಂದು ಹೇಳಿದರು.
ನ್ಯಾಷನಲ್ ಪಬ್ಲಿಕ್ ಶಾಲೆ ಪ್ರಾಚಾರ್ಯೆ ನವೀನ ಎಂ. ಪಾಯಸ್, ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ವಾರ್ಷಿಕೋತ್ಸವದ ಸಂದರ್ಭದಲ್ಲಿ ಸನ್ಮಾನಿಸಲಾಯಿತು.