

ಶಿವಮೊಗ್ಗ: ಕ್ಯಾನ್ಸರ್ನಿಂದ ಮೃತಪಟ್ಟ ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಜಾಗ ಕೊಡುವಂತೆ ತಂದೆ ಬಳಿ ಮಗ ಗೋಗರೆಯುತ್ತ ರಾತ್ರಿಯಿಡೀ ಮನೆ ಬಾಗಿಲಲ್ಲೇ ಅಮ್ಮನ ಶವ ಇಟ್ಟುಕೊಂಡು ಕಣ್ಣೀರಿಟ್ಟ ಹೃದಯವಿದ್ರಾವಕ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಇಂತಹ ಅಮಾನವೀಯ ಘಟನೆ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಹೆದ್ದಾರಿ ಪುರ ಗ್ರಾಪಂ ವ್ಯಾಪ್ತಿಯ ಯಡಗುಡ್ಡೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಯಡಗುಡ್ಡೆ ಗ್ರಾಮದ ನಾಗರಾಜ್ ಜತೆ ನಾಗರತ್ನಗೆ 30 ವರ್ಷದ ಹಿಂದೆ ವಿವಾಹವಾಗಿ ಒಬ್ಬ ಮಗನೂ ಇದ್ದ. 10 ವರ್ಷ ಹಿಂದೆ ನಾಗರತ್ನ ಪತಿಯನ್ನು ತೊರೆದು ತವರು ಸೇರಿದ್ದಳು. ಕಳೆದ ಕೆಲ ವರ್ಷದಿಂದ ಕ್ಯಾನ್ಸರ್ಗೆ ತುತ್ತಾಗಿದ್ದ ನಾಗರತ್ನ ಶುಕ್ರವಾರ ಮೃತಪಟ್ಟಿದ್ದರು. ಮಗ ಗಣೇಶ ತಾಯಿಯ ಶವವನ್ನು ತನ್ನ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದ. ಆಗ ತಂದೆ ನಾಗರಾಜ ಜಮೀನಿನಲ್ಲಿ ಯಾವುದೇ ಕಾರಣಕ್ಕೂ ಅಂತ್ಯಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ.
ರಾತ್ರಿಯಿಡೀ ಮನೆ ಮುಂದೆ ಶವ ಇಟ್ಟುಕೊಂಡು ಮಗ ಕುಳಿತರೂ ತಂದೆಯ ಮನಸ್ಸು ಕರಗಲಿಲ್ಲ, ಬಾಗಿಲು ಹಾಕಿಕೊಂಡು ಒಳಗೆ ಇದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಿಪ್ಪನ್ಪೇಟೆ ಠಾಣೆಯ ಪೊಲೀಸರು ಭೇಟಿ ನೀಡಿ ಮನವೊಲಿಸಿದರೂ ನಾಗರಾಜ್ ಒಪ್ಪಲಿಲ್ಲ. ಶನಿವಾರ ಮಧ್ಯಾಹ್ನ 12ಗಂಟೆಯಾದರೂ ಶವ ಸಂಸ್ಕಾರಕ್ಕೆ ಅವಕಾಶ ಸಿಕ್ಕಿರಲಿಲ್ಲ. ರಾಜಿ ಪಂಚಾಯಿತಿ ನಡೆಯುತ್ತಲೇ ಇತ್ತು.
ಮಧ್ಯ ಪ್ರವೇಶಿಸಿದ ಊರಿನ ಪ್ರಮುಖರು ರಾಜಿಪಂಚಾಯಿತಿ ನಡೆಸಿ ನಾಗರಾಜ್ಗೆ ಬುದ್ಧಿ ಹೇಳಿದ ಬಳಿ ಅಂತ್ಯಸಂಸ್ಕಾರಕ್ಕೆ ಒಪ್ಪಿಗೆ ಸೂಚಿಸಿದ. ಮಧ್ಯಾಹ್ನ ನಾಗರಾಜ್ ಜಮೀನಿನಲ್ಲಿಯೇ ನಾಗರತ್ನರ ಅಂತ್ಯಸಂಸ್ಕಾರ ನೆರವೇರಿತು.