

ಬೆಂಗಳೂರು: ಅಕ್ಟೋಬರ್ 4ರಂದು ಮೆಜೆಸ್ಟಿಕ್ನ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಯುವಕನ ರುಂಡಕ್ಕೀಗ ಟ್ವಿಸ್ಟ್ ಸಿಕ್ಕಿದೆ.
ಅಂದು ರಾಜಧಾನಿ ಎಕ್ಸ್‌ಪ್ರೆಸ್ ಇಂಜಿನ್ ಕೆಳ ಭಾಗದಲ್ಲಿ ದೇಹ ಇಲ್ಲದ ರುಂಡ ಮಾತ್ರ ಪತ್ತೆಯಾಗಿತ್ತು. ಇದರ ದೇಹ ಸಾವಿರಾರು ಕಿಲೋ ಮೀಟರ್ ಅಂತರದಲ್ಲಿ ಅಂದರೆ ಮಧ್ಯಪ್ರದೇಶದಲ್ಲಿ ಸಿಕ್ಕಿದೆ!
ಅ.4ರಂದು ರಾಜಧಾನಿ ಎಕ್ಸ್‌ಪ್ರೆಸ್ ರೈಲನ್ನು ಸ್ವಚ್ಛ ಮಾಡುತ್ತಿದ್ದ ವೇಳೆ ಸಿಬ್ಬಂದಿಗೆ ವ್ಯಕ್ತಿಯೊಬ್ಬನ ರುಂಡ ಸಿಕ್ಕಿತ್ತು. ಗಾಬರಿಯಾದ ರೈಲ್ವೆ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. 12 ದಿನಗಳ ಕಾಲ ತಲೆಯನ್ನು ಸಂರಕ್ಷಣೆ ಮಾಡಿದ್ದ ರೈಲ್ವೆ ಪೊಲೀಸರು ಕೂಡಲೇ ದೇಶದ ಎಲ್ಲ ರೈಲ್ವೆ ಪೊಲೀಸ್ ಠಾಣೆಗಳಿಗೆ ಮಾಹಿತಿ ಕೊಟ್ಟಿದ್ದರು. ಮಧ್ಯಪ್ರದೇಶದ ಅಮ್ಲ ರೈಲ್ವೆ ಪೊಲೀಸರಿಗೆ ಅ.3ರಂದು ಮುಂಡ ಪತ್ತೆಯಾಗಿತ್ತು. ಈ ಬಗ್ಗೆ ಅವರು ಮಾಹಿತಿ ನೀಡುತ್ತಿದ್ದಂತೆ ಬೆಂಗಳೂರು ರೈಲ್ವೆಯ ಇಬ್ಬರು ಸಿಬ್ಬಂದಿ ತಲೆ ಭಾಗದ ಫೋಟೋ ತೆಗೆದುಕೊಂಡು ಅಮ್ಲ ಪೊಲೀಸ್ ಠಾಣೆಗೆ ತೆರಳಿದ್ದರು.
ಅಮ್ಲ ಪೊಲೀಸರು ರುಂಡ-ಮುಂಡದ ಪೋಟೋವನ್ನ ಜೋಡಿಸಿದಾಗ ತಿಳಿಯಿತು ಅದು ಮಧ್ಯಪ್ರದೇಶದ ಬೇತುಲ್ ನಗರದ ನಿವಾಸಿ ರವಿ ಮರ್ಕಾಮ್ (28) ಎಂಬಾತ ಎಂದು. ಕೂಡಲೇ ಮೃತನ ಪೋಷಕರನ್ನು ಪೊಲೀಸರು ಸಂಪರ್ಕ ಮಾಡಿದ್ದರು. ಆದರೆ, ರವಿ ಮರ್ಕಾಮ್ ಪೋಷಕರು ಆರ್ಥಿಕ ಸಂಕಷ್ಟದ ನೆಪವೊಡ್ಡಿ ಮುಂಡಕ್ಕೆ ಮಾತ್ರವೇ ಅಂತ್ಯಸಂಸ್ಕಾರ ನೆರವೇರಿಸಿದರು. ರುಂಡಕ್ಕೆ ಪೊಲೀಸರೇ ಮುಕ್ತಿ ನೀಡಿದ್ದಾರೆ.
ರವಿ ಮರ್ಕಾಮ್ ಮಾನಸಿಕ ಅಸ್ವಸ್ಥನಾಗಿದ್ದ. ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಸಂಬಂಧಿಕರು ಹೇಳಿದ್ದಾರೆ. ಮಧ್ಯಪ್ರದೇಶದ ಅಮ್ಲ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.