ತೈಲ ಬೆಲೆ ಏರಿಕೆಗೆ ಲಗಾಮು; ಮೀಸಲು ಸಂಗ್ರಹದಿಂದ ಕಚ್ಚಾ ತೈಲ ಬಿಡುಗಡೆಯ ಕಾರ್ಯತಂತ್ರ

Front
ಉಡುಪಿ ಜಿಲ್ಲೆಯ ಪಾದೂರಿನಲ್ಲಿರುವ ಕಚ್ಚಾ ತೈಲ ಸಂಗ್ರಹಾಗಾರ
Published on

ನವದೆಹಲಿ: ಗಗನಮುಖಿಯಾಗುತ್ತಿರುವ ಕಚ್ಚಾ ತೈಲ ದರ ಹೆಚ್ಚಳಕ್ಕೆ ಮೂಗುದಾರ ಹಾಕುವ ನಿಟ್ಟಿನಲ್ಲಿ ಭಾರತವು ಅಮೆರಿಕ, ಚೀನಾ, ಜಪಾನ್, ಬ್ರಿಟನ್ ಸೇರಿ ಪ್ರಮುಖ ರಾಷ್ಟ್ರಗಳ ಸಹಕಾರದೊಂದಿಗೆ ಮಹತ್ವದ ಕಾರ್ಯತಂತ್ರ ರೂಪಿಸಿದೆ. ಮೀಸಲು ಸಂಗ್ರಹದಿಂದ ಮಾರುಕಟ್ಟೆಗೆ ತೈಲ ಬಿಡುಗಡೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ತಗ್ಗಿಸುವುದು ಈ ನಿರ್ಧಾರದ ಹಿಂದಿನ ಉದ್ದೇಶ.

ಈ ತೀರ್ವನದಂತೆ ಅಮೆರಿಕ 5 ಕೋಟಿ ಬ್ಯಾರೆಲ್, ಭಾರತ 50 ಲಕ್ಷ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಕ್ಕೆ ಆದೇಶ ಹೊರಡಿಸಿವೆ. ಈ ಕುರಿತು ಪೆಟ್ರೋಲಿಯಂ ಸಚಿವಾಲಯ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಲಿಕ್ವಿಡ್ ಹೈಡ್ರೋಕಾರ್ಬನ್ ದರ ಸಮಂಜಸವಾಗಿರಬೇಕು. ಅಲ್ಲದೆ ಬೆಲೆ ನಿಗದಿ ಮಾಡುವ ಪ್ರಕ್ರಿಯೆ ಕೂಡ ಹೊಣೆಗಾರಿಕೆಯುತವಾಗಿರಬೇಕು. ಇದನ್ನು ಮಾರುಕಟ್ಟೆ ಶಕ್ತಿಗಳು ನಿರ್ಧರಿಸಬೇಕು. ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಪೂರೈಕೆಯನ್ನು ತೈಲ ಉತ್ಪಾದಕ ರಾಷ್ಟ್ರಗಳು ನಿಯಂತ್ರಿಸು ತ್ತಿವೆ. ಇದು ಬೆಲೆ ಏರಿಕೆ ಮತ್ತು ಅದರಿಂದ ಉಂಟಾಗುವ ಋಣಾತ್ಮಕ ಪರಿಣಾಮಗಳಿಗೆ ಕಾರಣವಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ತೈಲ ಉತ್ಪಾದಕ ದೇಶಗಳ ಇಂತಹ ಅಸಹಕಾರಕ್ಕೆ ಸೆಡ್ಡು ಹೊಡೆಯಲು ಮುಂದಾದ ಅಮೆರಿಕವು ಮೀಸಲು ಸಂಗ್ರಹದಿಂದ ತೈಲ ಬಿಡುಗಡೆ ಮಾಡುವಂತೆ ಭಾರತ, ಚೀನಾ, ಜಪಾನ್ ಸೇರಿ ಜಗತ್ತಿನ ಪ್ರಮುಖ ತೈಲ ಬಳಕೆದಾರ ರಾಷ್ಟ್ರಗಳಿಗೆ ಕರೆ ಮಾಡಿ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿ ಭಾರತ ಈ ಬೆಳವಣಿಗೆಯ ಮುಂದಾಳತ್ವ ವಹಿಸಿದೆ. ಜಾಗತಿಕ ತೈಲ ಬೆಲೆ ನಿಯಂತ್ರಣಕ್ಕೆ ಸದ್ಯ ಇರುವ ದಾರಿ ಇದೊಂದೇ ಎಂಬ ಅಭಿಪ್ರಾಯಕ್ಕೆ ಎಲ್ಲ ರಾಷ್ಟ್ರಗಳೂ ಬಂದಿವೆ. 

ತೈಲೋತ್ಪಾದನೆ ಡೇಟಾ ಹೀಗಿದೆ..: ಒಪೆಕ್ + ರಾಷ್ಟ್ರಗಳು ಸದ್ಯದ ಪರಿಸ್ಥಿತಿಯಲ್ಲಿ ಕಚ್ಚಾ ತೈಲ ಉತ್ಪಾದನೆಯನ್ನು ನಿತ್ಯ 70 ಲಕ್ಷ ಬ್ಯಾರೆಲ್​ಗೆ ನಿಯಂತ್ರಿಸುತ್ತಿವೆ. ಇದು ಕರೊನಾ ಸಂಕಷ್ಟ ಶುರುವಾಗುವುದಕ್ಕಿಂತ ಮೊದಲಿನ ಪೂರೈಕೆಗೆ ಹೋಲಿಸಿದರೆ ಶೇಕಡ 7 ಪೂರೈಕೆ ಹೆಚ್ಚಳವಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಿಂದೀಚೆಗೆ ಬ್ರೆಂಟ್ ಸೂಚ್ಯಂಕ ಶೇಕಡ 80 ಏರಿಕೆಯಾಗಿದೆ. ಸೌದಿ ಅರೇಬಿಯಾ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಹೆಚ್ಚುವರಿ 10 ಲಕ್ಷ ಬ್ಯಾರೆಲ್ ಉತ್ಪಾದನೆಯನ್ನು ಕಡಿತಗೊಳಿಸುವ ಸ್ವಯಂ ತೀರ್ವನವನ್ನು ಮಾಡಿಕೊಂಡಿದ್ದವು.

ಬ್ರೆಂಟ್ ಬೆಲೆ ಇಳಿಕೆ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಈ ವಾರ ಬ್ಯಾರೆಲ್​ಗೆ 78 ಡಾಲರ್​ಗೆ ಕುಸಿದಿದೆ. ಇದು ಅಕ್ಟೋಬರ್ 26ಕ್ಕೆ 86.40 ಡಾಲರ್ ಇತ್ತು. ಮಂಗಳವಾರದ ಬೆಲೆ 79.24 ಡಾಲರ್ ಇದೆ.

ಭಾರತದಲ್ಲೇ 35 ದಶಲಕ್ಷ ಟನ್ ಉತ್ಪಾದನೆ: ದೇಶೀಯ ಕಚ್ಚಾ ತೈಲ ಉತ್ಪನ್ನದ ಮೂಲಕ ಭಾರತ 35.2 ಮಿಲಿಯನ್ ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಭಾರತ 204.9 ಮಿಲಿಯ ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುತ್ತಿದ್ದು, ಕಚ್ಚಾ ತೈಲ ಆಮದಿನಲ್ಲಿ ಚೀನಾದ ನಂತರ ಎರಡನೇ ಸ್ಥಾನದಲ್ಲಿದೆ.

ಮೂರನೇ ಅತಿದೊಡ್ಡ ಆಮದು ರಾಷ್ಟ್ರ: ಜಗತ್ತಿನಲ್ಲಿ ಅತಿ ಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ ಭಾರತಕ್ಕೆ ಮೂರನೇ ಸ್ಥಾನವಿದೆ. ಭಾರತ ತನ್ನ ತೈಲ ಬೇಡಿಕೆ ಈಡೇರಿಸಿಕೊಳ್ಳಲು ಶೇ. 85 ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು, ಅಂತಾರಾಷ್ಟ್ರೀಯ ದರಕ್ಕೆ ಅನುಗುಣವಾಗಿ ದೇಶದಲ್ಲೂ ದರ ವ್ಯತ್ಯಾಸವಾಗುವ ವ್ಯವಸ್ಥೆಯನ್ನು ಜಾರಿಯಲ್ಲಿರಿಸಿದೆ. ಪ್ರತಿ ಬ್ಯಾರೆಲ್​ಗೆ ಫೆಬ್ರವರಿಯಲ್ಲಿ ಸರಾಸರಿ 61.22 ಡಾಲರ್, ಜನವರಿಯಲ್ಲಿ ಸರಾಸರಿ 54.79 ಡಾಲರ್ ಪಾವತಿಸಿ ಕಚ್ಚಾ ತೈಲವನ್ನು ಭಾರತ ಆಮದು ಮಾಡಿಕೊಂಡಿದೆ. ಕಳೆದ ವರ್ಷ ಏಪ್ರಿಲ್​ನಲ್ಲಿ ಇದು 19.90 ಡಾಲರ್​ಗೆ ಇಳಿಕೆಯಾಗಿತ್ತು. ನಂತರ ಜೂನ್ ಮತ್ತು ಡಿಸೆಂಬರ್​ನಲ್ಲಿ ತೈಲದರ 40 ಮತ್ತು 49 ಡಾಲರ್ ನಡುವೆ ಇತ್ತು.

ಭಾರತದ ಟಾಪ್ ನಾಲ್ಕು ತೈಲ ಪೂರೈಕೆ ರಾಷ್ಟ್ರಗಳು

  • ರಾಷ್ಟ್ರ - ತೈಲ ಪೂರೈಕೆ (ಬ್ಯಾರೆಲ್/ದಿನಕ್ಕೆ)
  • ಇರಾಕ್ - 8,67,500
  • ಅಮೆರಿಕ - 5,45,300
  • ನೈಜೀರಿಯಾ - 4,72,300
  • ಸೌದಿ ಅರೇಬಿಯಾ - 4,45,200

ಇರಾಕ್ ಅಗ್ರಸ್ಥಾನಿ: ಒಪೆಕ್ ರಾಷ್ಟ್ರಗಳ ಪೈಕಿ ಇರಾಕ್ ಎರಡನೇ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರ. ಭಾರತಕ್ಕೆ ತೈಲ ಪೂರೈಸುವ ರಾಷ್ಟ್ರಗಳ ಪೈಕಿ ಇರಾಕ್​ಗೆ ನಂಬರ್ ಒನ್ ಪಟ್ಟ. ಆದಾಗ್ಯೂ, ಕಳೆದ ಐದು ತಿಂಗಳ ಅವಧಿಯಲ್ಲಿ ಇರಾಕ್​ಗೆ ಭಾರತ ಸಲ್ಲಿಸಿದ ತೈಲ ಬೇಡಿಕೆ ಪ್ರಮಾಣ ಇಳಿಕೆಯಾಗಿದೆ.

85% ಕಚ್ಚಾ ತೈಲ ಆಮದು: ಭಾರತವು ತನ್ನ ತೈಲ ಬೇಡಿಕೆ ಈಡೇರಿಸಿಕೊಳ್ಳಲು ಶೇ.85 ತೈಲ ಆಮದು ಮಾಡಿಕೊಳ್ಳುತ್ತಿದ್ದು, ಅಂತಾರಾಷ್ಟ್ರೀಯ ದರಕ್ಕೆ ಅನುಗುಣವಾಗಿ ದೇಶದಲ್ಲೂ ದರ ವ್ಯತ್ಯಾಸವಾಗುವ ವ್ಯವಸ್ಥೆಯನ್ನು ಜಾರಿಯಲ್ಲಿರಿಸಿದೆ. ಪ್ರತಿ ಬ್ಯಾರೆಲ್​ಗೆ ಫೆಬ್ರವರಿಯಲ್ಲಿ ಸರಾಸರಿ 61.22 ಡಾಲರ್, ಜನವರಿಯಲ್ಲಿ ಸರಾಸರಿ 54.79 ಡಾಲರ್ ಪಾವತಿಸಿ ಕಚ್ಚಾ ತೈಲ ಬಾಸ್ಕೆಟ್ ಭಾರತ ಆಮದು ಮಾಡಿಕೊಂಡಿದೆ. ಕಳೆದ ವರ್ಷ ಏಪ್ರಿಲ್​ನಲ್ಲಿ ಇದು 19.90 ಡಾಲರ್​ಗೆ ಇಳಿಕೆಯಾಗಿತ್ತು. ನಂತರ ಜೂನ್ ಮತ್ತು ಡಿಸೆಂಬರ್​ನಲ್ಲಿ ತೈಲದರ 40 ಮತ್ತು 49 ಡಾಲರ್ ನಡುವೆ ಇತ್ತು.

ರಾಜ್ಯದಲ್ಲಿವೆ 2 ತೈಲ ಸಂಗ್ರಹಗಾರ

ಮಂಗಳೂರು: ಭಾರತೀಯ ಕಚ್ಚಾ ತೈಲಾಗಾರ ಸಂಗ್ರಹಣಾ ಯೋಜನೆಗೆ (ಐಎಸ್​ಪಿಆರ್​ಎಲ್) ಸಂಬಂಧಿಸಿ ಉಡುಪಿ ಜಿಲ್ಲೆಯ ಪಾದೂರು ಮತ್ತು ಮಂಗಳೂರಿನ ಪೆಮುದೆಯಲ್ಲಿ ತೈಲ ಸಂಗ್ರಹಾಗಾರಗಳಿವೆ. ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡುವ ಉದ್ದೇಶದಿಂದ ಈ ಸಂಗ್ರಹಾಗಾರಗಳನ್ನು ನಿರ್ವಿುಸಲಾಗಿದೆ. ಪಾದೂರಿನ ತೈಲ ಸಂಗ್ರಹಾಗಾರ 2.5 ಮಿಲಿಯನ್ ಮೆಟ್ರಿಕ್ ಟನ್ ಹಾಗೂ ಮಂಗಳೂರಿನ ಸಂಗ್ರಹಾಗಾರ 1.5 ಎಂಎಂಟಿ ಸಂಗ್ರಹ ಸಾಮರ್ಥ್ಯ ಹೊಂದಿವೆ. ಇವುಗಳು ಈಗಾಗಲೇ ಭರ್ತಿಯಾಗಿವೆ.

10 ದಿನದಲ್ಲಿ ದರ ಇಳಿಕೆ: ಮೀಸಲು ಸಂಗ್ರಹದಿಂದ 50 ಲಕ್ಷ ಬ್ಯಾರೆಲ್ ತೈಲವನ್ನು ಸರ್ಕಾರ ಯಾವ ದಿನಾಂಕ ಬಿಡುಗಡೆ ಮಾಡುತ್ತದೆ ಎಂಬ ವಿವರ ನೀಡಿಲ್ಲ. ಆದರೂ, 7ರಿಂದ 10 ದಿನಗಳ ಒಳಗೆ ಇದು ಬಿಡುಗಡೆಯಾಗಲಿದ್ದು, ಇದಾದ ಬಳಿಕ ತೈಲ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಒಪೆಕ್ ಉದ್ಧಟತನದ ಪರಿಣಾಮ: ತೈಲೋತ್ಪಾದನೆ ಹೆಚ್ಚಿಸಬೇಕೆಂದು ಮುಂಚೂಣಿ ತೈಲೋತ್ಪಾದಕ ರಾಷ್ಟ್ರ ಸೌದಿ ಅರೇಬಿಯಾಕ್ಕೆ ಭಾರತ ಮನವಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಸೌದಿ, ಕಳೆದ ವರ್ಷ ಕಡಿಮೆ ಬೆಲೆಗೆ ಖರೀದಿಸಿಟ್ಟುಕೊಂಡಿರುವ ತೈಲ ದಾಸ್ತಾನನ್ನು ಬಳಸಿಕೊಳ್ಳಿ ಎಂದು ಉದ್ಧಟ ಸಲಹೆ ನೀಡಿತ್ತು. ಇದರ ಬೆನ್ನಿಗೆ, ಉಳಿದ ಬಳಕೆದಾರ ರಾಷ್ಟ್ರಗಳಿಗೂ ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟ -ಒಪೆಕ್​ನ ನಿರ್ಲಕ್ಷ್ಯ ಮನೋಭಾವದ ಬಿಸಿ ತಟ್ಟಿದೆ. ಸದ್ಯ ಒಪೆಕ್ ರಾಷ್ಟ್ರಗಳು ನಿತ್ಯ 4 ಲಕ್ಷ ಬ್ಯಾರೆಲ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.

ಇದೇ ಮೊದಲ ಸಲ: ಭಾರತದಲ್ಲಿ ಇದೇ ಮೊದಲ ಬಾರಿಗೆ ಆಂಧ್ರ ಪ್ರದೇಶದ ವಿಶಾಖಪಟ್ಟಣ, ಕರ್ನಾಟಕದ ಪಾದೂರು ಮತ್ತು ಮಂಗಳೂರಿನ ವ್ಯೂಹಾತ್ಮಕ ಪೆಟ್ರೋಲಿಯಂ ಉಗ್ರಾಣದಲ್ಲಿರುವ ಮೀಸಲು ಸಂಗ್ರಹದಿಂದ 50 ಲಕ್ಷ ಬ್ಯಾರೆಲ್ ತೈಲವನ್ನು ಎಂಆರ್​ಪಿಎಲ್ ಮತ್ತು ಎಚ್​ಪಿಸಿಎಲ್​ಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಭೂಗತವಾಗಿರುವ ಮೂರು ವ್ಯೂಹಾತ್ಮಕ ತೈಲಾಗಾರದಲ್ಲಿ 38 ದಶಲಕ್ಷ ಬ್ಯಾರೆಲ್ (5.33 ದಶಲಕ್ಷ ಟನ್) ಕಚ್ಚಾ ತೈಲವನ್ನು ಸಂಗ್ರಹಿಸಿಡಲಾಗಿದೆ. ಪೂರ್ವ ಮತ್ತು ಪಶ್ಚಿಮ ಕರಾವಳಿಗಳಲ್ಲಿ ಈ ಸಂಗ್ರಹವಿದೆ. ಭಾರತದ ನಿತ್ಯ ತೈಲ ಬಳಕೆ 48 ಲಕ್ಷ ಬ್ಯಾರೆಲ್​ಗಳಾಗಿವೆ.

ಎಲ್ಲಿಂದ ಆಮದು?: ಇರಾಕ್, ಸೌದಿ ಅರೇಬಿಯಾ, ಇರಾನ್, ನೈಜೀರಿಯಾ, ಸಂಯುಕ್ತ ಅರಬ್ ಸಂಸ್ಥಾನಗಳು (ಯುಎಇ), ವೆನಿಜುವೆಲಾ, ಕುವೈತ್, ಮೆಕ್ಸಿಕೊ, ಅಂಗೋಲಾ, ಅಮೆರಿಕ, ಮಲೇಷ್ಯಾ, ಒಮನ್, ಬ್ರೆಜಿಲ್, ಕತಾರ್ ಮತ್ತು ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net