24 ಗಂಟೆಯಲ್ಲೇ ಎಲ್ಲಾ ಬದಲಾಯ್ತು!...ಸೋಶಿಯಲ್ ಮೀಡಿಯಾದಲ್ಲಿ ಆಘಾತಕಾರಿ ಪೋಸ್ಟ್​ ಹಂಚಿಕೊಂಡ ಉನ್ಮುಕ್ತ್ ಚಾಂದ್ | Unmukt Chand

Unmukt Chand: ಯುಎಸ್‌ಎಯಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರ ಸಮಯದಲ್ಲಿ ಭಾರತದ ಅಂಡರ್-19 ವಿಶ್ವಕಪ್ ವಿಜೇತ ನಾಯಕ ಉನ್ಮುಕ್ತ್ ಚಾಂದ್ ಮುಖಕ್ಕೆ ತೀವ್ರ ಗಾಯಗಳಾಗಿದ್ದು, ಈ ಕುರಿತು ಅವರು ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.
2012ರ ಅಂಡರ್-19 ವಿಶ್ವಕಪ್ ವಿಜೇತ ನಾಯಕ ಉನ್ಮುಕ್ತ್ ಚಾಂದ್
2012ರ ಅಂಡರ್-19 ವಿಶ್ವಕಪ್ ವಿಜೇತ ನಾಯಕ ಉನ್ಮುಕ್ತ್ ಚಾಂದ್
Published on

Unmukt Chand: ಯುಎಸ್‌ಎಯಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರ ಸಮಯದಲ್ಲಿ ಭಾರತದ ಅಂಡರ್-19 ವಿಶ್ವಕಪ್ ವಿಜೇತ ನಾಯಕ ಉನ್ಮುಕ್ತ್ ಚಾಂದ್ ಮುಖಕ್ಕೆ ತೀವ್ರ ಗಾಯಗಳಾಗಿದ್ದು, ಈ ಕುರಿತು ಅವರು ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.

ಉನ್ಮುಕ್ತ್ ಚಾಂದ್ ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತಮ್ಮ ಮುಖದ ಗಾಯದ ಜೊತೆಗೆ, ಕ್ರೀಡಾ ಜೀವನದಲ್ಲಿ ಈ ಹಿಂದೆ ತಮಗಾದ ವಿವಿಧ ಗಾಯಗಳ ಫೋಟೋಗಳನ್ನೂ ಪೋಸ್ಟ್ ಮಾಡಿದ್ದಾರೆ. ಅದೃಷ್ಟವಶಾತ್ ಮುಖದ ಮೂಳೆ ಮುರಿದಿಲ್ಲ (ಫ್ರ್ಯಾಕ್ಚರ್ ಆಗಿಲ್ಲ) ಎಂದು ಸ್ಪಷ್ಟಪಡಿಸಿರುವ ಅವರು, ಅಭಿಮಾನಿಗಳಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ:ರಾತ್ರಿ ನಿದ್ರೆ ಬಾರದಿದ್ದಾಗ ರೋಹಿತ್ ತಿನ್ನುವ ಸ್ಪೆಷಲ್ ಸ್ನ್ಯಾಕ್ಸ್ ಯಾವ್ದು ಗೊತ್ತಾ..? ಅಮ್ಮ ಮಾಡಿದ ಈ ಸರಳ ರೆಸಿಪಿ ನಿಮಗೂ ಇಷ್ಟವಾಗುತ್ತೆ!

ಮುಖದ ಗಾಯದ ಬಗ್ಗೆ ವಿವರಿಸಿದ ಉನ್ಮುಕ್ತ್ ಚಾಂದ್

ಕ್ಯಾಚ್ ಹಿಡಿಯುವಾಗ ಮೈದಾನದಲ್ಲಿದ್ದ ಇನ್ನೊಬ್ಬ ಆಟಗಾರನಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಗಾಯವಾಗಿದೆ ಎಂದು ಚಾಂದ್ ತಿಳಿಸಿದ್ದಾರೆ. ಇದರಿಂದಾಗಿ ಅವರ ಮುಖ ತೀವ್ರವಾಗಿ ಊದಿಕೊಂಡಿದ್ದು, ಕೆನ್ನೆ ಮತ್ತು ದವಡೆಯ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದು ಫೋಟೋದಲ್ಲಿ ಕಾಣಿಸುತ್ತಿದೆ. ಇದರ ಜೊತೆಗೆ, ತಮ್ಮ ವೃತ್ತಿಜೀವನದಲ್ಲಿ ಈ ಹಿಂದೆ ಆಗಿದ್ದ ಎರಡು ಗಾಯಗಳ ಫೋಟೋಗಳನ್ನೂ ಹಂಚಿಕೊಂಡು ಕ್ರೀಡೆಯಲ್ಲಿ ಎದುರಾದ ಹಿನ್ನಡೆಗಳನ್ನು ನೆನಪಿಸಿಕೊಂಡಿದ್ದಾರೆ.

ಆದರೂ ಎದೆಗುಂದದ ಚಾಂದ್, ಸಕಾರಾತ್ಮಕ ಯೋಚನೆಯೊಂದಿಗೆ ಮುಂದೆ ಸಾಗುವಂತೆ ಮಾತನಾಡಿದ್ದಾರೆ. ಇದೇ ಕ್ರೀಡೆ, ಇಲ್ಲಿ ಕ್ಷಣಾರ್ಧದಲ್ಲಿ ಎಲ್ಲವೂ ಬದಲಾಗುತ್ತದೆ. ಮತ್ತೆ ಎದ್ದು ನಿಲ್ಲು, ಮುನ್ನುಗ್ಗು, ಯಾವುದಕ್ಕೂ ಹಿಂಜರಿಯಬೇಡ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಶತಕ ಸಿಡಿಸಿದ ಮರುದಿನವೇ ಗಾಯ!

ಮೈನರ್ ಲೀಗ್ ಕ್ರಿಕೆಟ್‌ನಲ್ಲಿ ಚಾಂದ್ ಅದ್ಭುತ ಇನ್ನಿಂಗ್ಸ್ ಆಡಿದ ಬೆನ್ನಲ್ಲೇ ಈ ಗಾಯದ ಹಿನ್ನಡೆ ಎದುರಾಗಿದೆ. ಸೆಪ್ಟೆಂಬರ್ 19 ರಂದು ನಡೆದ ಪಂದ್ಯದಲ್ಲಿ ಲೋನ್ ಸ್ಟಾರ್ ಅಥ್ಲೆಟಿಕ್ಸ್ ತಂಡದ ಪರ ಆಡಿದ್ದ ಚಾಂದ್, ಆಲ್ ಸ್ಟಾರ್ಸ್ ವಿರುದ್ಧ 67 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ ಅಜೇಯ 100 ರನ್ ಸಿಡಿಸಿದ್ದರು. ಲೋನ್ ಸ್ಟಾರ್ ಅಥ್ಲೆಟಿಕ್ಸ್ ತಂಡವು 219/1 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ 94 ರನ್‌ಗಳ ಜಯ ಸಾಧಿಸಿತ್ತು. ಈ ಗೆಲುವಿನಲ್ಲಿ ಚಾಂದ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗೆ ಸ್ಮರಣೀಯ ವೈಯಕ್ತಿಕ ಪ್ರದರ್ಶನ ನೀಡಿದ ಕೇವಲ ಒಂದೇ ದಿನದಲ್ಲಿ ಅವರು ಈ ಮುಖದ ಗಾಯಕ್ಕೆ ತುತ್ತಾಗಿದ್ದಾರೆ.

Also Read
ಒಬ್ಬರಿಗೆ 10 ಮತ, ಇನ್ನಿಬ್ಬರಿಗೆ ಸೊನ್ನೆ!....ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಕಿಡಿ |Election Commission
2012ರ ಅಂಡರ್-19 ವಿಶ್ವಕಪ್ ವಿಜೇತ ನಾಯಕ ಉನ್ಮುಕ್ತ್ ಚಾಂದ್

ಅಂಡರ್-19 ವೈಭವದಿಂದ ಅಮೆರಿಕ ಕ್ರಿಕೆಟ್‌ವರೆಗೆ

2012 ರಲ್ಲಿ ಭಾರತಕ್ಕೆ ಅಂಡರ್-19 ವಿಶ್ವಕಪ್ ತಂದುಕೊಟ್ಟ ನಾಯಕನಾಗಿ ಉನ್ಮುಕ್ತ್ ಚಾಂದ್ ಮನೆಮಾತಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಫೈನಲ್‌ನಲ್ಲಿ ಅವರು ಅಜೇಯ 111 ರನ್ ಬಾರಿಸಿ ಭಾರತ ಟ್ರೋಫಿ ಎತ್ತಿಹಿಡಿಯಲು ಕಾರಣರಾಗಿದ್ದರು. ತದನಂತರ ಅವರು ಹಲವಾರು ಐಪಿಎಲ್ ತಂಡಗಳ ಪರ ಆಡಿದ್ದರು ಮತ್ತು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಪುರುಷ ಕ್ರಿಕೆಟಿಗ ಎನಿಸಿಕೊಂಡರು.

2021 ರಲ್ಲಿ ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ, ಚಾಂದ್ ಅಮೆರಿಕಗೆ ತೆರಳಿ ವೃತ್ತಿಪರ ಕ್ರಿಕೆಟ್ ಮುಂದುವರಿಸಿದರು. ಅಂದಿನಿಂದ ಅವರು ಮೈನರ್ ಲೀಗ್ ಕ್ರಿಕೆಟ್ ಮತ್ತು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ (ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಸೇರಿದಂತೆ) ಸಕ್ರಿಯರಾಗಿದ್ದಾರೆ. ಅವರ ಇತ್ತೀಚಿನ ಸೋಶಿಯಲ್ ಮೀಡಿಯಾ ಪೋಸ್ಟ್, ಮತ್ತೊಮ್ಮೆ ಗಾಯಗೊಂಡಿದ್ದರೂ ಮೈದಾನಕ್ಕೆ ಮರಳಲು ಅವರು ಮತ್ತೆ ಸಜ್ಜಾಗಿದ್ದಾರೆ ಎಂಬುದನ್ನು ತೋರಿಸುತ್ತದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net