

ಎನ್.ಆರ್. ಪುರ: ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ವೇಳೆ ಕೆಮ್ಮು, ಜ್ವರದ ಲಕ್ಷಣಗಳು ಕಾಣಿಸಿಕೊಳ್ಳದಂತೆ ಕಾಪಾಡಿಕೊಳ್ಳುವುದಕ್ಕಾಗಿ ಇಡೀ ಕುಟುಂಬವೊಂದು ನಿರಂತರವಾಗಿ ಸಿರಪ್ ಕುಡಿಯುತ್ತಿದ್ದ ಪ್ರಸಂಗ ಬಯಲಾಗಿದೆ.
ಎನ್.ಆರ್. ಪುರ ತಾಲೂಕಿನ ಕೆರೆಗದ್ದೆ ಕುಟುಂಬ ಮುಂಬೈನಲ್ಲಿ ನೆಲೆಸಿದ್ದು, ಅಲ್ಲಿ ಸ್ವಂತ ಮನೆ ಹೊಂದಿದೆ. ಅಲ್ಲೇ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಊರಿಗೆ ಬಾರದೆ ಹಲವಾರು ವರ್ಷಗಳೇ ಕಳೆದಿವೆ.
ಮುಂಬೈನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದ್ದರಿಂದ ಈ ಕುಟುಂಬ ಸ್ವಗ್ರಾಮಕ್ಕೆ ವಾಪಸ್ ಬರಲು ನಿರ್ಧರಿಸಿತ್ತು. ಮುಂಬೈನಿಂದ ಹೊರ ರಾಜ್ಯಕ್ಕೆ ಹೋಗಲು ಇತ್ತೀಚೆಗೆ ಲಾಕ್‌ಡೌನ್ ಸಡಿಲಿಸಿದ್ದರಿಂದ ಇವರೆಲ್ಲ ಎನ್.ಆರ್. ಪುರ ತಾಲೂಕಿಗೆ ಬರುತ್ತಿದ್ದರು.
ತಮಗೆ ಸೋಂಕಿರುವ ಬಗ್ಗೆ ಈ ಕುಟುಂಬದವರಿಗೆ ಮೊದಲೇ ಅನುಮಾನವಿತ್ತು. ಮುಂಬೈನಿಂದ ಆಗಮಿಸಿದ ಈ ಕುಟುಂಬದವರು ಎಲ್ಲೆಡೆ ಚೆಕ್‌ಪೋಸ್ಟ್ ಹತ್ತಿರವಾಗುತ್ತಿದ್ದಂತೆ ಸಿರಪ್ ಸೇವಿಸುತ್ತಿದ್ದರು. ಇದರಿಂದ ಚೆಕ್‌ಪೋಸ್ಟ್‌ನಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿದಾಗ ದೇಹದ ತಾಪಮಾನ ಕಡಿಮೆ ತೋರಿಸುತ್ತಿತ್ತು.
ಕೊನೆಗೆ ಇಲ್ಲಿಗೆ ಸಮೀಪದ ಚೆಕ್‌ಪೋಸ್ಟ್‌ನಲ್ಲಿಯೇ ಇವರನ್ನು ತಡೆದು ಪೊಲೀಸರು ತಪಾಸಣೆ ಮಾಡಿದಾಗ ಅವರ ವಾಹನದಲ್ಲಿ ಸಿರಪ್ ಬಾಟಲಿಗಳು ಸಿಕ್ಕಿವೆ. ಅವರೆಲ್ಲರನ್ನೂ ತರೀಕೆರೆ ಮಾರ್ಗವಾಗಿ ಚಿಕ್ಕಮಗಳೂರು ತೇಗೂರಿಗೆ ಹೋಗಿ ಸ್ಕ್ರೀನಿಂಗ್ ಮಾಡಿಸಿಕೊಂಡು ಬರುವಂತೆ ಸೂಚಿಸಿ ಅಲ್ಲಿಂದ ಕೂಡಲೇ ಕೊಪ್ಪದ ಹರಂದೂರು ಗ್ರಾಮದ ಬಾಲಕಿಯರ ಹಾಸ್ಟೆಲ್‌ಗೆ ಕರೆದೊಯ್ದು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಈ ಪೈಕಿ ಮೂರು ಮಕ್ಕಳಿಗೆ ಜ್ವರ ಬಂದಿದ್ದರಿಂದ ಅನುಮಾನಗೊಂಡ ವೈದ್ಯರು ಮೂರೂ ಮಕ್ಕಳ ಗಂಟಲ ದ್ರವ ತೆಗೆದು ಪರೀಕ್ಷೆಗೆ ಕಳುಹಿಸಿಕೊಟ್ಟರು. ಪರೀಕ್ಷೆಯಲ್ಲಿ ಕರೊನಾ ಇರುವುದು ದೃಢಪಟ್ಟಿತು. ಒಂದು ವೇಳೆ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಾಪಸ್ ಕಳುಹಿಸದಿದ್ದರೆ ಎನ್.ಆರ್. ಪುರ ತಾಲೂಕಿಗೂ ಹರಡುವ ಸಾಧ್ಯತೆ ಇತ್ತು.