

ದಾವಣಗೆರೆ (ಮಲೇಬೆನ್ನೂರು): ಮಹಾರಾಷ್ಟ್ರದಿಂದ ಕರೆತಂದವರನ್ನು ನಮ್ಮೂರಲ್ಲಿ ಕ್ವಾರಂಟೈನ್ ಮಾಡಲು ಬಿಡಲ್ಲ ಎಂದು ಹರಿಹರ ತಾಲೂಕಿನ ನಂದಿಗುಡಿ ಮತ್ತು ವಾಸನ ಗ್ರಾಮಸ್ಥರು ಗುರುವಾರ ಬೆಳಗ್ಗೆಯಿಂದ ಸಂಜೆವರೆಗೂ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಬೆಳಗ್ಗೆ 11ರ ಸುಮಾರಿಗೆ ಹರಿಹರ ತಾಲೂಕಿಗೆ ಮಹಾರಾಷ್ಟ್ರದಿಂದ 13 ಜನರು ಬಸ್ನಲ್ಲಿ ಬಂದಿದ್ದರು. ಅವರಿಗೆ ಇಲ್ಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 14 ದಿನ ಕ್ವಾರಂಟೈನ್ ಮಾಡಲು ವ್ಯವಸ್ಥೆಯಾಗಿತ್ತು. ಇದಕ್ಕೆ ವಿರೋಧಿಸಿದ ನಂದಿಗುಡಿ ಮತ್ತು ವಾಸನ ಗ್ರಾಮಸ್ಥರು, ಕರ್ನಾಟಕದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣ ಮುಂಬೈ ನಂಟು. ಹಾಗಾಗಿ ಅಲ್ಲಿಂದ ಬಂದವರನ್ನು ನಮ್ಮೂರಲ್ಲಿ ಕ್ವಾರಂಟೈನ್ ಮಾಡಬಾರದು. ಅವರನ್ನು ಬೇರೆಡೆಗೆ ಕರೆದೊಯ್ಯಬೇಕು ಎಂದು ಬಸ್ ತಡೆದು ನೂರಾರು ಮಂದಿ ಧರಣಿ ಕುಳಿತರು. ಬಸ್ನಲ್ಲಿದ್ದ ಕಾರ್ಮಿಕರನ್ನು ಕೆಳಗೆ ಇಳಿಯಲೂ ಬಿಡಲಿಲ್ಲ.
ಇದನ್ನೂ ಓದಿರಿ 109 ವರ್ಷದ ಸಾಲುಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು
ಸ್ಥಳಕ್ಕೆ ಬಂದ ತಹಸೀಲ್ದಾರ್ ರಾಮಚಂದ್ರ ಮತ್ತು ಸಿಪಿಐ ಶಿವಪ್ರಸಾದ್, ಈಗ ಕ್ವಾರಂಟೈನ್ಗೆಂದು ಬಂದಿರುವ 14 ಜನರೂ ಹರಿಹರ ತಾಲೂಕಿನವರೆ. ಉದ್ಯೋಗ ಅರಸಿ ನಿಪ್ಪಾಣಿ ಮತ್ತು ಮಹಾರಾಷ್ಟ್ರಕ್ಕೆ ತೆರಳಿದ್ದರು. ಈಗ ವಾಪಸ್ ಬಂದಿದ್ದಾರೆ. ಪ್ರತಿಭಟನೆ ಬಿಟ್ಟು ಕ್ವಾರಂಟೈನ್ಗೆ ಸಹಕರಿಸಿ ಎಂದು ಮನವಿ ಮಾಡಿದರೂ ಗ್ರಾಮಸ್ಥರು ಒಪ್ಪಲಿಲ್ಲ.
ಸಂಜೆ 4ರ ವರೆಗೂ ಗ್ರಾಮಸ್ಥರ ಮನವೊಲಿಸಲು ನಡೆಸಿದ ಯತ್ನ ವಿಫಲವಾಯಿತು. ಕೊನೆಗೆ ಸಿಪಿಐ ಶಿವಪ್ರಸಾದ್ ನೇತೃತ್ವದ ತಂಡ ಗ್ರಾಮಸ್ಥರನ್ನು ಚದುರಿಸಿ ಪೊಲೀಸ್ ಬಂದೋಬಸ್ತ್ ಮೂಲಕ 5 ತಾಸುಗಳ ಬಳಿಕ ಕ್ವಾರಂಟೈನ್ ಕೇಂದ್ರಕ್ಕೆ ಕಾರ್ಮಿಕರನ್ನು ಸೇರಿಸಿತು. ಇದಾದ ಬಳಿಕವೂ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.