

ಹಾಸನ: ಅನಾರೋಗ್ಯದಿಂದ ಬಳಲುತ್ತಿರುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ (109) ಅವರನ್ನು ಗುರುವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾಕ್ಡೌನ್ ಘೋಷಣೆಗೂ ಮುನ್ನ ಬೇಲೂರಿನ ಬಳ್ಳೂರಿಗೆ ಬಂದಿದ್ದ ಅವರು ಪುತ್ರನ ಮನೆಯಲ್ಲೇ ಇದ್ದರು. ಗುರವಾರ ಬೆಳಗ್ಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ತಿಮ್ಮಕ್ಕ ಅವರನ್ನು ದತ್ತು ಪುತ್ರ ಉಮೇಶ್ ಆಸ್ಪತ್ರೆಗೆ ಕರೆತಂದಿದ್ದಾರೆ. ತಿಮ್ಮಕ್ಕರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತಿಮ್ಮಕ್ಕ ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದವರು. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಹುಟ್ಟಿದ ತಿಮ್ಮಕ್ಕ, ಮಾಗಡಿಯ ತಾಲೂಕಿನ ಚಿಕ್ಕಯ್ಯ ಅವರನ್ನು ಮದುವೆಯಾಗಿದ್ದರು. ಮಕ್ಕಳಿಲ್ಲದ ಕಾರಣಕ್ಕೆ ಮಾಗಡಿ ತಾಲೂಕಿನ ಕುದೂರಿನಿಂದ ಹುಲಿಕಲ್ವರೆಗೂ ರಸ್ತೆ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿದ ಪರಿಸರವಾದಿ.