ಹೆಸರುಗಳ ಮೇಲಿನ ಆಕ್ರಮಣಕ್ಕೆ ಮುಕ್ತಿ!

Untitled design (1)
Published on

| ರವೀಂದ್ರ ಎಸ್.ದೇಶಮುಖ್

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಮುಸ್ತಫಾಬಾದ್ ಗ್ರಾಮದ ಹೆಸರನ್ನು ‘ಕಬೀರ್​ಧಾಮ್ ಎಂದು ಮರುನಾಮಕರಣ ಮಾಡಿ ಉತ್ತರ ಪ್ರದೇಶ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಸಂತ ಕಬೀರ್ ಅವರೊಂದಿಗೆ ನಂಟು ಹೊಂದಿರುವ ಪ್ರದೇಶದ ಇತಿಹಾಸ ಮತ್ತು ಸಾಂಸ್ಕೃತಿಕ ಗುರುತನ್ನು ಉಳಿಸಲು ಗ್ರಾಮದ ಹೆಸರನ್ನು ಮರುನಾಮಕರಣ ಮಾಡಿರುವುದಾಗಿ ಸರ್ಕಾರ ತಿಳಿಸಿದೆ. ಮತ್ತೊಂದೆಡೆ, ಆಕ್ರಮಣಕಾರರು ಮತ್ತು ಬ್ರಿಟಿಷರು ಇಟ್ಟ ಹೆಸರುಗಳನ್ನು ಕೇಂದ್ರ ಸರ್ಕಾರ ಕೂಡ ಹಂತ-ಹಂತವಾಗಿ ಬದಲಿಸುತ್ತಿದೆ. ಕಳೆದೊಂದು ದಶಕದಲ್ಲಿ ಈ ಪ್ರಕ್ರಿಯೆ ವೇಗ ಕಂಡುಕೊಂಡಿದ್ದು, ಈ ಕುರಿತಾದ ವಿವರ ಇಲ್ಲಿದೆ.

ಭಾರತೀಯತೆಯನ್ನು ನಾಶ ಮಾಡುವ ದೊಡ್ಡ ಹುನ್ನಾರದ ಭಾಗವಾಗಿ ಬ್ರಿಟಿಷರು ಈ ನೆಲದ ಮೇಲೆ ಮಾಡಿದ ಆಘಾತಗಳು ಅಷ್ಟಿಷ್ಟಲ್ಲ. ಇಲ್ಲಿನ ಧರ್ಮ, ಸಂಸ್ಕೃತಿ, ಇತಿಹಾಸ, ಪರಂಪರೆಯ ಮೇಲೆ ನಿರಂತರ ದಾಳಿ ನಡೆಸಿದರು. ಜೀವನದ ಪ್ರತಿಯೊಂದು ಕ್ಷೇತ್ರದ ಮೇಲೂ ಆಕ್ರಮಣ ನಡೆಸಿದ ಆಂಗ್ಲರು ಇಲ್ಲಿನ ಸಾಗರ, ನದಿ, ತೀರ್ಥಕ್ಷೇತ್ರ ಅಷ್ಟೇ ಏಕೆ ನಾವು ವಾಸಿಸುವ ನಗರಗಳ ಹೆಸರನ್ನೂ ಬದಲಿಸಿ ಅಲ್ಲಿ ಅರ್ಥ, ಸ್ವಾರಸ್ಯ, ಸಂಸ್ಕೃತಿಯೇ ಇಲ್ಲದ ಆಂಗ್ಲ ಹೆಸರುಗಳನ್ನಿಟ್ಟರು. ಭಾರತದಲ್ಲಿ ಯಾವುದೇ ನಗರ, ನದಿಯ ಹೆಸರನ್ನು ಸುಖಾಸುಮ್ಮನೆ ಇಟ್ಟಿದ್ದಲ್ಲ. ಆಯಾ ನೆಲದ ಶಕ್ತಿ, ಸಂಸ್ಕೃತಿಯ ಪ್ರಭೆಯನ್ನು ಗುರುತಿಸಿಯೇ ನಮ್ಮ ಪೂರ್ವಜರು ಆ ಹೆಸರುಗಳನ್ನು ಇಟ್ಟಿದ್ದರು. ಅದು ರಾಷ್ಟ್ರದ ಬಗ್ಗೆ ಪೂಜ್ಯಭಾವ ಬೆಳೆಯಲು ಕಾರಣವಾಗಿತ್ತು. ಇದ್ಯಾವುದೂ ಬ್ರಿಟಿಷರಿಗೆ ಸಹ್ಯವಿರಲಿಲ್ಲ. ಹಾಗಾಗಿಯೇ, ಹೆಸರುಗಳ ಮೇಲೂ ಆಕ್ರಮಣ ನಡೆಯಿತು. ಅರಬರು, ಫ್ರೆಂಚರು ಕೂಡ ಈ ಮುಂಚೆಯೇ ಇಂಥ ದಾರಿಯನ್ನು ತುಳಿದಿದ್ದರು.

ಉದಾಹರಣೆಗೆ, ಪ್ರಪಂಚದ ಅತ್ಯಂತ ಎತ್ತರದ ಪರ್ವತಶಿಖರ ಸಾಗರಮಾಥಾ. ಇದನ್ನು ನಮ್ಮ ಪೂರ್ವಿಕರು ಗೌರಿಶಂಕರ ಎಂದೂ ಕರೆದರು. ಆದರೆ, ಬ್ರಿಟಿಷರು ಇದಕ್ಕೆ ಕೊಟ್ಟ ಹೆಸರು ಮೌಂಟ್ ಎವರೆಸ್ಟ್! 26 ಸಾವಿರ ಅಡಿ ಎತ್ತರದ, ಹಿಮಾಲಯ ಪರ್ವತಶಿಖರಗಳಲ್ಲಿ ಮೂರನೇ ಎತ್ತರದ ಪರ್ವತ ಕಾಂಚನಗಂಗಾ ಹೆಸರನ್ನು ಉಚ್ಚಾರಣೆ ಮಾಡಲಾಗದೆ ಅದನ್ನು ಕಾಂಚನ್​ಚುಂಗಾ ಎಂದು ಕರೆದರು! ನದಿ, ನಗರಗಳ ಹೆಸರುಗಳೂ ಹೀಗೇ ಅಪಭ್ರಂಶಗೊಂಡವು. 1947ರಲ್ಲಿ ಸ್ವಾತಂತ್ರ ್ಯ ಪ್ರಾಪ್ತಿಯ ಬಳಿಕ ಇಂಥ ಆಂಗ್ಲ ಹೆಸರುಗಳನ್ನು ಬದಲಿಸಿ ಭಾರತೀಯ ಹೆಸರುಗಳನ್ನು ಇಡುವ ಪ್ರಕ್ರಿಯೆ ಆರಂಭವಾಯಿತಾದರೂ, ಬ್ರಿಟಿಷರನ್ನು ಓಲೈಸುವ ನಮ್ಮದೇ ಕೆಲ ರಾಜಕೀಯ ನಾಯಕರ ಕುತ್ಸಿತ ತಂತ್ರದಿಂದ ಅದು ಪೂರ್ತಿಯಾಗಲಿಲ್ಲ.

ಸಂಸ್ಕೃತಿಯ ಮೂಲ ಸೊಗಡನ್ನು ಹುಡುಕುತ್ತ ಹೋದ ಜನರಿಗೆ ವಾಸ್ತವದ ಅರಿವಾದಾಗ ಆಂಗ್ಲರು ಇಟ್ಟ ಹೆಸರುಗಳಲ್ಲಿ ಕೇವಲ ದಾಸ್ಯದ ಸಂಕೇತವಿದೆ ಎಂಬುದು ಸ್ಪಷ್ಟವಾಯಿತು. ಇದನ್ನು ಬದಲಿಸುವಂತೆ ಜನಾಗ್ರಹ ಜೋರಾದಾಗ ಅಲ್ಲಲ್ಲಿ ಕೆಲವು ಬದಲಾವಣೆಗಳಾಗಿವೆ. ಆದರೂ, ಇಂದಿಗೂ ಈ ದಾಸ್ಯದ ಹೊರೆಯನ್ನು ಹೊತ್ತಿಕೊಂಡು ನಿಂತ ನಗರ, ಪ್ರದೇಶಗಳಿಗೆ ಲೆಕ್ಕವಿಲ್ಲ. ಹಾಗಾಗಿ, ಆಯಾ ನೆಲದ ಶಕ್ತಿ, ಸಂಸ್ಕೃತಿಯ ಅನುಸಾರವಾಗಿ ಭಾರತೀಯ ಹೆಸರುಗಳನ್ನು ನೀಡಲು ಕೇಂದ್ರ ಸರ್ಕಾರ ಹಂತ-ಹಂತವಾಗಿ ಕ್ರಮ ಕೈಗೊಳ್ಳುತ್ತಿದೆ. ಹಲವು ರಾಜ್ಯ ಸರ್ಕಾರಗಳು ಈಗಾಗಲೇ ಈ ನಿಟ್ಟಿನಲ್ಲಿ ಕೆಲ ಕ್ರಮ ಕೈಗೊಂಡಿವೆ.

ಹೆಸರಲ್ಲೂ ರಾಜಕೀಯ

ಹೆಸರುಗಳ ಬದಲಾವಣೆ, ಮರುನಾಮಕರಣದಲ್ಲೂ ರಾಜಕೀಯ ಹೊಗೆಯಾಡುವ, ಆರೋಪ- ಪ್ರತ್ಯಾರೋಪಗಳಿಗೆ ಕಾರಣವಾಗುವ ನಿದರ್ಶನಗಳೂ ಹಲವು. ಉತ್ತರಪ್ರದೇಶದಲ್ಲಿ ಮಾಯಾವತಿ ಸರ್ಕಾರವಿದ್ದಾಗ ಕಾಸ್​ಗಂಜ್ ಹೆಸರನ್ನು ಕಾನ್ಷಿರಾಮ್ ನಗರವಾಗಿ ಬದಲಿಸಿದ್ದರು. ಆದರೆ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರದ ಅವಧಿಯಲ್ಲಿ ಕಾನ್ಷಿರಾಮ್ ನಗರ ಹೆಸರನ್ನು ಬದಲಿಸಿ ಮತ್ತೆ ಕಾಸ್​ಗಂಜ್ ಎಂದು ಮರು ನಾಮಕರಣ ಮಾಡಲಾಯಿತು. ಕಡಪಾವನ್ನು ವೈಎಸ್​ಆರ್ ನಗರವಾಗಿ ಬದಲಿಸಿದ ಘಟನೆಯೂ ವಿವಾದಕ್ಕೆ ಕಾರಣವಾಗಿತ್ತು.

ದೆಹಲಿಯಲ್ಲ ಇಂದ್ರಪ್ರಸ್ಥ!

ದೇಶದ ಬೇರೆ ಭಾಗಗಳ ಸ್ಥಿತಿ ಬಿಡಿ, ರಾಜಧಾನಿ ದೆಹಲಿಯೇ ದಾಸ್ಯದ ಹೆಸರನ್ನಿಟ್ಟುಕೊಂಡಿದೆ. ಅಷ್ಟಕ್ಕೂ, ದೆಹಲಿಯ ಮೂಲನಾಮ ಇಂದ್ರಪ್ರಸ್ಥ! ಅಂದರೆ ಇಂದ್ರದೇವನ ನಗರ ಅಂತ. ಇದು ಪಾಂಡವರ ರಾಜಧಾನಿಯಾಗಿತ್ತು. ಮಾತ್ರವಲ್ಲ, ದೇವಲೋಕದ ಶಿಲ್ಪಿ ಮಯನಿಂದ ಈ ನಗರ ನಿರ್ವಿುತವಾಗಿತ್ತು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಕ್ರಿಸ್ತಪೂರ್ವ 2000 ವರ್ಷಗಳ ಮುಂಚೆಯೂ ಈ ನಗರದ ಅಸ್ತಿತ್ವವಿತ್ತು ಹಾಗೂ ನಗರದ ಸುತ್ತಮುತ್ತ ಮಾನವರ ವಾಸವಿತ್ತು. ಮತಬ್ಯಾಂಕ್​ಗಳ ಮೇಲೆ ಕಣ್ಣಿಟ್ಟಿರುವ ಕೆಲ ರಾಜಕಾರಣಿಗಳು ದೆಹಲಿಯನ್ನು ಇಂದ್ರಪ್ರಸ್ಥವಾಗಿ ಮರುನಾಮಕರಣ ಮಾಡಿದರೆ ಇತರ ಧರ್ಮಗಳ ವಿರೋಧ ಎದುರಿಸಬೇಕಾಗುತ್ತದೆ ಎಂಬ ನೆಪವೊಡ್ಡಿ ‘ದೆಹಲಿ’ ಹೆಸರನ್ನೇ ಮುಂದುವರಿಸಲು ಕಾರಣರಾಗಿದ್ದಾರೆ.

ಗುರ್ಗಾಂವ್ ಗುರುಗ್ರಾಮವಾಗಿದ್ದು ಯಾಕೆ ಗೊತ್ತಾ?

ಈ ಊರಿಗೂ ಮಹಾಭಾರತಕ್ಕೂ ಅನನ್ಯ ನಂಟು. ಗುರು ದ್ರೋಣಾಚಾರ್ಯರು ಪಾಂಡವ ಮತ್ತು ಕೌರವ ರಾಜಕುಮಾರರಿಗೆ ಧನುರ್ವಿದ್ಯೆ ಕಲಿಸಿದ್ದು ಇದೇ ಜಾಗದಲ್ಲಿ. ಅರ್ಜುನನನ್ನು ಬಿಲ್ವಿದ್ಯೆ ಪ್ರವೀಣನನ್ನಾಗಿಸಲು ದ್ರೋಣಾಚಾರ್ಯರು ತರಬೇತಿ ನೀಡಿದ್ದು ಗುರುಗ್ರಾಮದಲ್ಲೇ. ಪಕ್ಷಿಯ ಕಣ್ಣನ್ನು ಗುರಿಯಾಗಿಸಿಕೊಂಡು ಬಾಣ ಹೊಡೆಯುವಂತೆ ಅರ್ಜುನನಿಗೆ ಹೇಳಿದ ಐತಿಹಾಸಿಕ ಘಟನೆ ಇಲ್ಲಿ ನಡೆಯಿತು. ಏಕಲವ್ಯ ರಾಜಕುಮಾರನಲ್ಲದ್ದಕ್ಕೆ ಅವನಿಗೆ ಧನುರ್ವಿದ್ಯೆ ಕಲಿಸಲು ನಿರಾಕರಿಸಿದಾಗ ದ್ರೋಣಾಚಾರ್ಯರ ಮೂರ್ತಿ ಮಾಡಿಕೊಂಡು ಅದನ್ನೇ ಗುರುವಾಗಿಸಿಕೊಂಡು ಏಕಲವ್ಯ ಧನುರ್ವಿದ್ಯೆ ಕಲಿಯತೊಡಗಿದ. ಆಗ ಗುರುದಕ್ಷಿಣೆ ರೂಪದಲ್ಲಿ ಆತನ ಬೆರಳನ್ನು ಪಡೆದುಕೊಂಡದ್ದು ಈ ತಾಣದಲ್ಲಿ. ಹಾಗಾಗಿ, ಗುರು-ಶಿಷ್ಯರ ವಿಶಿಷ್ಟ ಕಥಾನಕಗಳಿಗೆ ಇದು ಸಾಕ್ಷಿಯಾಗಿದ್ದರಿಂದ ‘ಗುರುಗ್ರಾಮ’ ಎಂಬ ಹೆಸರನ್ನು ಇಡಲಾಗಿದೆ. ನಗರದಲ್ಲಿ ಏಕಲವ್ಯನ ಪುರಾತನ ದೇಗುಲವಿದ್ದು, ಈಗಲೂ ಅಲ್ಲಿ ಪೂಜೆ ನಡೆಯುತ್ತಿದೆ.

ಕಾಳಿಘಾಟ್ ಕೋಲ್ಕತಾ ಆಯಿತು

ಐವತ್ತೊಂದು ಶಕ್ತಿಪೀಠಗಳ ಪೈಕಿ ಕೋಲ್ಕತದ ಕಾಳಿಘಾಟ್ ಕೂಡ ಒಂದು. 18ನೇ ಶತಮಾನದಲ್ಲಿ ಇಲ್ಲಿ ಕಾಳಿದೇವಿಯ ಮಂದಿರ ನಿರ್ವಣವಾಗಿದೆ. ಆದರೆ, ಅದಕ್ಕಿಂತಲೂ ಸಾಕಷ್ಟು ಮುಂಚೆಯೇ ಸ್ಥಳೀಯರು ಈ ಇಡೀ ನಗರವನ್ನು ಕಾಳಿಘಾಟ್ ಎಂದು ಕರೆಯುತ್ತಿದ್ದರು-ಇದರರ್ಥ ಕಾಳಿಯ ತಾಣ/ಸ್ಥಳ ಎಂಬುದು. ಹೀಗೆ ದೇವಿಯ ಈ ಪುಣ್ಯಸ್ಥಳವನ್ನು ಬ್ರಿಟಿಷರು ಕಲಕತ್ತಾ ಎಂದು ಕರೆದರು. 2001ರಲ್ಲಿ ಸರ್ಕಾರ ಕಲಕತ್ತಾವನ್ನು ಕೋಲ್ಕತಾ ಆಗಿಸಿತು. ಸ್ಥಳೀಯರು ಮಾತ್ರ ಮುಂಚೆ ಇದ್ದ ಕಾಳಿಘಾಟ್ ಹೆಸರೇ ಇಡುವಂತೆ ಆಗ್ರಹಿಸತೊಡಗಿದ್ದಾರೆ. ಈ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರಾದರೂ, ಯಾವುದೇ ಪ್ರಯೋಜನವಾಗಿಲ್ಲ.

ಶಿಮ್ಲಾ ಹೆಸರು ಬದಲಿಸಲು ಆಗ್ರಹ

ಹಿಮಾಚಲ ಪ್ರದೇಶದ ಶಿಮ್ಲಾ ನಗರದ ಹೆಸರನ್ನೂ ಬದಲಿಸಬೇಕು ಎಂಬ ಆಗ್ರಹ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಶಿಮ್ಲಾದ ಹೆಸರನ್ನು ಶ್ಯಾಮಲಾ ಆಗಿ ಬದಲಾಯಿಸುವಂತೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಶ್ಯಾಮಲಾ ಎಂಬುದು ಕಾಳಿಮಾತೆಯ ಇನ್ನೊಂದು ಹೆಸರು. ಇಲ್ಲಿ ಕಾಳಿಮಾತೆಯ ಐತಿಹಾಸಿಕ ಹಾಗೂ ಭವ್ಯ ದೇಗುಲ ಇರುವುದರಿಂದ ನಗರಕ್ಕೆ ಶ್ಯಾಮಲಾ ಎಂಬ ಹೆಸರಿಡುವುದು ಸೂಕ್ತ ಎಂದು ವಿಹಿಂಪ ಅಭಿಪ್ರಾಯಪಟ್ಟಿದೆ.

ಸಂಭಾಜಿಯ ಶೌರ್ಯದ ನೆನಪು

ಛತ್ರಪತಿ ಶಿವಾಜಿಯ ಉತ್ತರಾಧಿಕಾರಿಯಾಗಿ ವಿಜಾಪುರ (ಈಗಿನ ವಿಜಯಪುರ) ಮತ್ತು ಗೋಲ್ಕಂಡಾದಲ್ಲಿ ಮೊಘಲ್ ಆಡಳಿತ ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಮರಾಠಾ ಸಾಮ್ರಾಟ ಧರ್ಮವೀರ ಛತ್ರಪತಿ ಸಂಭಾಜಿ ರಾಜೇ ಸ್ಮರಣಾರ್ಥವಾಗಿ ಸಂಭಾಜಿನಗರ ಎಂಬ ಹೆಸರಿಡಲಾಗಿತ್ತು. ಈ ನಗರ ಮಹಾರಾಷ್ಟ್ರದ ಪ್ರವಾಸೋದ್ಯಮ ರಾಜಧಾನಿ ಎಂದೂ ಖ್ಯಾತವಾಗಿದೆ. ಮೊಘಲರ ರಾಜ ಔರಂಗಜೇಬ್ ತನ್ನ ಜೀವಿತದ ಉತ್ತರಾರ್ಧವನ್ನು ಈ ನಗರದಲ್ಲಿ ಕಳೆದನಲ್ಲದೇ ಇಲ್ಲೇ ಮೃತ್ಯುವಶನಾದನು. ಆಗ, ಸಂಭಾಜಿನಗರ ಹೆಸರನ್ನು ಔರಂಗಾಬಾದ್ (ಔರಂಗಜೇಬ್ ನೆನಪಿಗಾಗಿ) ಎಂದು ಬದಲಿಸಲಾಯಿತು. 2023ರಲ್ಲಿ ಎನ್​ಡಿಎ ಸರ್ಕಾರ ಈ ನಗರದ ಹೆಸರನ್ನು ಸಂಭಾಜಿನಗರ ಆಗಿ ಮರುನಾಮಕರಣಗೊಳಿಸಿದೆ.

ವಿಜೃಂಭಿಸಿದ ತೀರ್ಥರಾಜ ಪ್ರಯಾಗ್

ಗಂಗಾ, ಯಮುನಾ, ಸರಸ್ವತಿ- ಈ ಮೂರು ಪವಿತ್ರ ನದಿಗಳ ಸಂಗಮಸ್ಥಾನವೇ ತೀರ್ಥರಾಜ ಪ್ರಯಾಗ್. ಹೆಸರೇ ಸೂಚಿಸುವಂತೆ ಇದು ತೀರ್ಥಗಳ ರಾಜ. ಬ್ರಹ್ಮ ಸೃಷ್ಟಿಕಾರ್ಯದ ನಂತರ ಪ್ರಯಾಗದಲ್ಲಿ ಮೊದಲ ಯಜ್ಞ ನೆರವೇರಿಸಿದ್ದ. ಕುಂಭಮೇಳ ನಡೆಯುವ ನಾಲ್ಕು ಸ್ಥಳಗಳ ಪೈಕಿ ಪ್ರಯಾಗವೂ ಒಂದು. ಇಲ್ಲಿ ಪ್ರತೀ 12 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. 1526ರಲ್ಲಿ ಭಾರತದ ಮೇಲೆ ಮೊಘಲರು ಮತ್ತೆ ಆಕ್ರಮಣ ನಡೆಸಿ, ಸಂಸ್ಕೃತಿಯ ಮೇಲೆ ಪ್ರಹಾರ ನಡೆಸಿದರು. 1583ರಲ್ಲಿ ಅಕ್ಬರ್ ತೀರ್ಥರಾಜ ಪ್ರಯಾಗ್ ಹೆಸರನ್ನು ಅಲಹಾಬಾದ್ (ಅಲ್ಲಾಹ್​ನಿಂದ ನಿರ್ವಿುತ ನಗರ) ಎಂದು ಬದಲಿಸಿದ್ದು, ಇತ್ತೀಚಿನ ವರ್ಷಗಳವರೆಗೂ ಹಾಗೇ ಪ್ರಚಲಿತದಲ್ಲಿತ್ತು. ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ 2018ರಲ್ಲಿ ಅಲಹಾಬಾದ್​ನ್ನು ಪ್ರಯಾಗರಾಜ್ ಆಗಿ ಮರುನಾಮಕರಣಗೊಳಿಸಿದೆ.

ಮರೆತುಹೋದ ಕರ್ಣಾವತಿ

ಅಹಮದಾಬಾದ್​ನ ಹಳೆಯ ಹೆಸರು ಕರ್ಣಾವತಿ. ಆದರೆ, 1411ರಲ್ಲಿ ಸುಲ್ತಾನ್ ಅಹ್ಮದ್ ಷಾ ಈ ನಗರವನ್ನು ಸ್ಥಾಪಿಸಿದ ಎಂದು, ನಗರಕ್ಕೆ ಆತನ ಹೆಸರಿಡಲಾಗಿದೆ. ಅಹಮದಾಬಾದ್​ಗೆ ಮತ್ತೆ ಕರ್ಣಾವತಿ ಎಂದು ಮರು ನಾಮಕರಣ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net