

| ನಿತ್ಯಾನಂದ ಶಿವಗಂಗೆ ಚಿಕ್ಕಮಗಳೂರು
ಶಕ್ತಿ ಯೋಜನೆಯಡಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತ ವಾಗಿ ಪ್ರಯಾಣಿಸುತ್ತಿರುವ ಮಹಿಳೆಯರು ಟಿಕೆಟ್ ಪಡೆದ ಊರಿನಲ್ಲಿ ಬಸ್ನಿಂದ ಇಳಿಯದೆ ಮಾರ್ಗ ಮಧ್ಯದಲ್ಲೇ ಇಳಿದು ಹೋಗುತ್ತಿದ್ದಾರೆ. ಮಹಿಳೆಯರ ಈ ನಡೆ ಕಂಡಕ್ಟರ್ಗಳ ಉದ್ಯೋಗಕ್ಕೆ ಕಂಟಕವಾಗಿ ಪರಿಣಮಿಸಿದ್ದು, ಮಾಡದ ತಪ್ಪಿಗೆ ಅಮಾನತು, ಮುಂಬಡ್ತಿ ತಡೆ, ವರ್ಗಾವಣೆ ಹೀಗೆ ನಾನಾ ಶಿಕ್ಷೆಗಳಿಗೆ ಗುರಿಯಾಗುತ್ತಿದ್ದಾರೆ.
ಯಾವ ಊರಿಗೆ ಹೋಗಬೇಕೆಂದು ಮಹಿಳೆಯರು ಟಿಕೆಟ್ ಪಡೆಯುತ್ತಾರೆಯೋ ಆ ಊರಿಗೆ ಹೋಗುವ ಮೊದಲೇ ಮಹಿಳೆಯರು ಬಸ್ನಿಂದ ಇಳಿದು ಹೋಗುತ್ತಿದ್ದಾರೆ. ಈ ವೇಳೆ ಚೆಕ್ಕಿಂಗ್ಗೆ ಬರುವ ಇನ್ಸ್ಪೆಕ್ಟರ್ಗಳು ಟಿಕೆಟ್ ವಿತರಣೆಯಾದಷ್ಟು ಜನ ಬಸ್ನಲ್ಲಿ ಇಲ್ಲ ಎಂದು ಕಂಡಕ್ಟರ್ಗಳಿಗೆ ಆಪಾದನಾ ಪತ್ರ ನೀಡುತ್ತಾರೆ. ಜತೆಗೆ ಕೆಎಸ್ಆರ್ಟಿಸಿ ಡಿಸಿಗಳಿಗೆ ವರದಿ ನೀಡುತ್ತಿದ್ದಾರೆ. ಈ ವರದಿಯನ್ನು ಆಧರಿಸಿ ಕೆಎಸ್ಆರ್ಟಿಸಿ ಡಿಸಿ ಕಂಡಕ್ಟರ್ಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಬಸ್ ಚೆಕ್ಕಿಂಗ್ ವೇಳೆ ಟಿಕೆಟ್ ನೀಡಿದಷ್ಟು ಪ್ರಯಾಣಿಕರು ಬಸ್ನಲ್ಲಿ ಇಲ್ಲದಿದ್ದರೆ ಕಂಡಕ್ಟರ್ ವಿರುದ್ಧ ಔಟ್ಸ್ಟ್ಯಾಂಡಿಂಗ್ ಕೇಸ್ ಹಾಗೂ ರೆಡ್ವಾರ್ಕ್ ಕೇಸ್ ದಾಖಲಾಗುತ್ತದೆ. 80 ರೂ. ಟಿಕೆಟ್ ಪಡೆದ ಮಹಿಳೆಯರು ಬಸ್ನಿಂದ ಇಳಿದು ಹೋಗಿದ್ದರೆ ಕಂಡಕ್ಟರ್ಗಳ ಮೇಲೆ ರೆಡ್ವಾರ್ಕ್ ಕೇಸ್ ದಾಖಲು ಮಾಡಲಾಗುತ್ತದೆ. 126 ರೂ. ಹಾಗೂ ಮೇಲ್ಪಟ್ಟ ಟಿಕೆಟ್ ಪಡೆದವರು ಬಸ್ನಿಂದ ಇಳಿದುಹೋಗಿದ್ದರೆ ಔಟ್ಸ್ಟ್ಯಾಂಡಿಂಗ್ ಕೇಸ್ ದಾಖಲಿಸಲಾಗುತ್ತದೆ.
ಔಟ್ಸ್ಟ್ಯಾಂಡಿಂಗ್ ಕೇಸ್ ದಾಖಲಾದ ಕಂಡಕ್ಟರ್ ಅನ್ನು ಆತ ಕಾರ್ಯನಿರ್ವಹಿಸುತ್ತಿದ್ದ ಡಿಪೋದಿಂದ ಬೇರೆ ಡಿಪೋಗೆ ವರ್ಗಾವಣೆ ಮಾಡಲಾಗುತ್ತದೆ. ಜತೆಗೆ ಇನ್ಕ್ರಿಮೆಂಟ್ ಕಟ್ ಹಾಗೂ ಅಮಾನತು ಶಿಕ್ಷೆಯೂ ಇದೆ. ರೆಡ್ವಾರ್ಕ್ ಕೇಸ್ ದಾಖಲಾದ ಕಂಡಕ್ಟರ್ಗಳಿಗೆ ಅವರೇ ಒಂದು ಮಾರ್ಗ ಆಯ್ಕೆಮಾಡಿಕೊಳ್ಳಲು ಅವಕಾಶ ಇರುವುದಿಲ್ಲ. ಬದಲಿಗೆ ಅಧಿಕಾರಿಗಳು ಹೇಳಿದ ಮಾರ್ಗಗಳಲ್ಲೇ ಕೆಲಸ ಮಾಡಬೇಕು. ಯಾವ ವೇಳೆಗೆ ಕೆಲಸಕ್ಕೆ ಕರೆದರೂ ಹೋಗಬೇಕು. ಇದರೊಂದಿಗೆ ಮುಂಬಡ್ತಿ ತಡೆ ಹಾಗೂ ವರ್ಗಾವಣೆ ಶಿಕ್ಷೆಯನ್ನೂ ಅನುಭವಿಸಬೇಕಿದೆ.
ಮಧ್ಯದಲ್ಲೇ ಇಳಿಯಲು ಕಾರಣ ಹಲವು: ಮಹಿಳೆಯರು ಮಧ್ಯದಲ್ಲೇ ಬಸ್ ಇಳಿಯುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಕೆಎಸ್ಆರ್ಟಿಸಿ ಸಿಬ್ಬಂದಿಗೆ ಕುತೂಹಲದ ಉತ್ತರಗಳು ಸಿಗುತ್ತಿವೆ. ಓರ್ವ ಮಹಿಳೆ ಒಂದು ಊರಿಗೆ ಹೊರಟಾಗ ಹಿಂದಿನ ಬಸ್ನಲ್ಲಿ ಆಕೆಯ ಸ್ನೇಹಿತೆಯೋ ಅಥವಾ ಸಂಬಂಧಿಯೋ ಬರುತ್ತಿರುವುದಾಗಿ ಫೋನ್ ಮಾಡಿದರೆ ತಕ್ಷಣ ಆ ಮಹಿಳೆ ಮುಂದಿನ ಬಸ್ ನಿಲ್ದಾಣದಲ್ಲಿಯೇ ಇಳಿಯುತ್ತಾರೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ತೀರ್ಥ ಕ್ಷೇತ್ರಗಳಿಗೆ ಟಿಕೆಟ್ ಪಡೆಯುವ ಮಹಿಳೆಯರು ಬಸ್ನಲ್ಲಿ ಯಾರಾದರೂ ಮಾರ್ಗಮಧ್ಯೆ ಇನ್ನೊಂದು ಪುಣ್ಯ ಕ್ಷೇತ್ರವಿದೆ ಎಂದು ಹೇಳಿದರೆ ಟಿಕೆಟ್ ಖರೀದಿಸಿದ ಕ್ಷೇತ್ರಕ್ಕೆ ತೆರಳದೆ ಮಾರ್ಗಮಧ್ಯವಿರುವ ಕ್ಷೇತ್ರದಲ್ಲಿ ಇಳಿದು ಅಲ್ಲಿಗೆ ಹೋಗಿ ಬಳಿಕ ಬೇರೆ ಬಸ್ನಲ್ಲಿ ಮುಂದಿನ ತೀರ್ಥ ಕ್ಷೇತ್ರಕ್ಕೆ ಸಾಗುತ್ತಿದ್ದಾರೆ.
ಇನ್ನು ತಾವೂ ಹತ್ತಿದ ಬಸ್ ವೇಗವಾಗಿ ಹೋಗುತ್ತಿಲ್ಲ ಎಂಬುದು ತಿಳಿದುಬಂದರೆ, ದೂರದ ಊರಿಗೆ ಸಂಚರಿಸುವ ಬಸ್ಗಳು ಊಟ, ತಿಂಡಿ, ಟೀ ಕುಡಿಯಲು ಮಾರ್ಗ ಮಧ್ಯೆ ಬಸ್ ನಿಲ್ಲಿಸಿದಾಗ ಕಾಲು ಗಂಟೆ, ಅರ್ಧ ಗಂಟೆ ಸಮಯ ವ್ಯರ್ಥ ಮಾಡುವುದು ಏಕೆಂದು ಭಾವಿಸುವ ಮಹಿಳೆಯರು ಬೇರೆ ಬಸ್ ಹತ್ತಿ ಹೋಗುತ್ತಿದ್ದಾರೆ.
ಅಮ್ಮ, ಅಕ್ಕ ದಯಮಾಡಿ ನೀವು ಎಲ್ಲಿಗೆ ಹೋಗಲು ಟಿಕೆಟ್ ಪಡೆದಿದ್ದೀರೋ ಅಲ್ಲೆ ಬಸ್ನಿಂದ ಇಳಿಯಿರಿ. ಮಾರ್ಗಮಧ್ಯೆ ಬಸ್ನಿಂದ ಇಳಿದು ನಮ್ಮ ಕೆಲಸಕ್ಕೆ ಕುತ್ತು ತರಬೇಡಿ ಎಂದು ಮಹಿಳೆಯರ ಬಳಿ ಬೇಡುವುದೇ ನಮ್ಮ ಕೆಲಸವಾಗಿದೆ. ಹೀಗೆ ಮನವಿ ಮಾಡಿದರೂ ಮಹಿಳೆಯರು ಮಧ್ಯದಲ್ಲೇ ಬಸ್ನಿಂದ ಇಳಿದು ಹೋಗುತ್ತಿದ್ದಾರೆ. ಇದನ್ನು ಮೇಲಾಧಿಕಾರಿಗಳಿಗೆ ಹೇಳಿದರೂ ಅವರಿಗೆ ವಾಸ್ತವ ಅರ್ಥವಾಗುತ್ತಿಲ್ಲ. | ಹೆಸರು ಹೇಳಲಿಚ್ಛಿಸದ ಕಂಡಕ್ಟರ್ ಒಂದು ವೇಳೆ ಮಹಿಳೆಯರು ಮಾರ್ಗಮಧ್ಯೆ ಬಸ್ನಿಂದ ಇಳಿದು ಹೋದರೂ ಕಂಡಕ್ಟರ್ಗಳು ಮುಂದಿನ ನಿಲ್ದಾಣದ ಕಂಟ್ರೋಲರ್ಗೆ ಮಾಹಿತಿ ನೀಡಿ ಒಪ್ಪಿಗೆ ಪಡೆಯಬೇಕು. ಈ ಕುರಿತು ಕಂಡಕ್ಟರ್ಗಳಿಗೆ ಸೂಕ್ತ ನಿರ್ದೇಶನ ನೀಡಿದ್ದೇವೆ. ಯಾವುದೇ ಅಕ್ರಮಗಳು ನಡೆಯಬಾರದು ಎಂಬ ಕಾರಣಕ್ಕೆ ಕೆಲ ಕಂಡಕ್ಟರ್ಗಳಿಗೆ ನೋಟಿಸ್ ನೀಡಲಾಗಿದೆ. ಆದರೆ ಇದುವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. | ವಿಜಯ್ ಕುಮಾರ್, ಶಿವಮೊಗ್ಗ ಕೆಎಸ್ಆರ್ಟಿಸಿ ಡಿಸಿ
ಕಂಟ್ರೋಲರ್ಗೆ ರಿಪೋರ್ಟ್ ಮಾಡಿ: ಬಸ್ ಹತ್ತುವ ಮಹಿಳೆಯರು ಮಾರ್ಗಮಧ್ಯೆ ಇಳಿದು ಹೋದರೆ ಎಷ್ಟು ಜನ ಇಳಿದು ಹೋಗಿದ್ದಾರೆ ಎಂಬುದು ಇಟಿಎಂ ಯಂತ್ರದಲ್ಲಿ ಗೊತ್ತಾಗುತ್ತದೆ. ಆಗ ಎಷ್ಟು ಮಂದಿ ಇಳಿದುಹೋದರು ಎಂಬುದನ್ನು ಎಂಟ್ರಿ ಶೀಟ್ನಲ್ಲಿ ದಾಖಲು ಮಾಡಿ ಮುಂದಿನ ಬಸ್ ನಿಲ್ದಾಣದ ಕಂಟ್ರೋಲರ್ ಬಳಿ ಅಪ್ರೂವಲ್ ಪಡೆಯಿರಿ ಎಂದು ಕಂಡೆಕ್ಟರ್ಗಳಿಗೆ ಸೂಚನೆ ನೀಡಲಾಗಿದೆ. ಆದರೆ ಮುಂದಿನ ನಿಲ್ದಾಣ ಬರುವ ಮೊದಲೇ ಚೆಕ್ಕಿಂಗ್ ಇನ್ಸ್ಪೆಕ್ಟರ್ಗಳು ಬಂದಾಗ ಕಂಡಕ್ಟರ್ಗಳು ಬಲಿಪಶುವಾಗುತ್ತಿದ್ದಾರೆ.
ಭರ್ತಿಯಾಗುತ್ತಿವೆ ಬಸ್: ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಕೆಎಸ್ಆರ್ಟಿಸಿ ಬಸ್ಗಳು ಪ್ರಯಾಣಿಕರಿಂದ ಭರ್ತಿಯಾಗುತ್ತಿವೆ. 54 ಪ್ರಯಾಣಿಕರ ಸಾಮರ್ಥ್ಯದ ಬಸ್ಗಳಲ್ಲಿ ಬರೋಬ್ಬರಿ 100 ಮಂದಿ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದಾಗಿ ಒಂದು ಸ್ಟೇಜ್ನಿಂದ ಇನ್ನೊಂದು ಸ್ಟೇಜ್ ತಲುಪುವ ಮುನ್ನವೇ ಟಿಕೆಟ್ ವಿತರಣೆ ಮಾಡುವುದು ಕಂಡಕ್ಟರ್ಗಳಿಗೆ ಕಷ್ಟ ಸಾಧ್ಯವಾಗಿದೆ. ಇದರ ಮಧ್ಯೆ ಮಹಿಳೆಯರು ಮಾರ್ಗ ಮಧ್ಯದಲ್ಲಿ ಇಳಿಯದಂತೆ ತಡೆಯುವುದೂ ಸವಾಲಿನ ಕೆಲಸವಾಗಿದೆ. ತುಂಬಿರುವ ಬಸ್ಗಳಲ್ಲಿ ಯಾರು ಎಲ್ಲಿ ಇಳಿದರು ಎಂಬುದೇ ಗೊತ್ತಾಗಲ್ಲ ಎನ್ನುತ್ತಾರೆ ಕೆಎಸ್ಆರ್ಟಿಸಿ ಕಂಡಕ್ಟರ್ಗಳು.