ಬ್ರಿಟನ್​ ಜತೆ ಮುಕ್ತ ವ್ಯಾಪಾರ ಒಪ್ಪಂದ; ಭಾರತಕ್ಕೇನು ಲಾಭ? ಇಲ್ಲಿದೆ ಪೂರ್ಣ ಮಾಹಿತಿ

ವಿಜಯವಾಣಿ (2)
Published on

ನವದೆಹಲಿ:  ಗುರುವಾರ ಭಾರತ ಮತ್ತು ಬ್ರಿಟನ್ ಪಾಲಿಗೆ ಐತಿಹಾಸಿಕ ದಿನ. ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕುವ ಮೂಲಕ, ವ್ಯಾಪಾರೋದ್ಯಮದಲ್ಲಿ ಸಹಕಾರದ ಹೊಸ ಪರ್ವ ಆರಂಭಗೊಂಡಿತು. ಎಫ್​ಟಿಎಯಿಂದ ಭಾರತಕ್ಕೆ, ಭಾರತೀಯರಿಗೆ ಆಗುವ ಲಾಭಗಳೇನು ಎಂಬುದರ ಮಾಹಿತಿ ಇಲ್ಲಿದೆ.

ಟೆಕ್ಸ್​ಟೈಲ್ ವಲಯ: ಯುಕೆಯಲ್ಲಿ ಭಾರತದ ಟೆಕ್ಸ್​ಟೈಲ್​ಗಳ ಮೇಲೆ ಶೇಕಡ 8ರಿಂದ 12ರವರೆಗೆ ಸುಂಕ ವಿಧಿಸಲಾಗುತ್ತಿತ್ತು. ಹೊಸ ಒಪ್ಪಂದದ ಮೂಲಕ ಇದು ಶೂನ್ಯಕ್ಕೆ ಬರಲಿರುವುದರಿಂದ, ಟೆಕ್ಸ್​ಟೈಲ್ ವಲಯಕ್ಕೆ ಶುಕ್ರದೆಸೆ. ಬಾಂಗ್ಲಾದೇಶ ಮತ್ತು ವಿಯೆಟ್ನಾಂಗಿಂತ ಕಡಿಮೆ ಬೆಲೆಗೆ ಗುಣಮಟ್ಟದ ಟೆಕ್ಸ್​ಟೈಲ್ ಒದಗಿಸುವುದರಿಂದ ಭಾರತ ಈ ರಂಗದಲ್ಲಿ ಇತರ ರಾಷ್ಟ್ರಗಳಿಗೆ ಪ್ರಬಲ ಸ್ಪರ್ಧೆವೊಡ್ಡಲಿದೆ. ಸೂರತ್, ಲೂಧಿಯಾನದಂಥ ಎಕ್ಸ್​ಪೋರ್ಟ್ ಹಬ್​ಗಳು ಮುಂದಿನ ಮೂರು ವರ್ಷಗಳಲ್ಲಿ ಶೇ.40ರಷ್ಟು ಬೆಳವಣಿಗೆ ಕಾಣುವ ಸಾಧ್ಯತೆ ಇದೆ.

ಆಭರಣಗಳು ಮತ್ತು ಚಮೋತ್ಪನ್ನಗಳು: ಭಾರತದಿಂದ ಯುಕೆಗೆ ರಫ್ತಾಗುವ ಆಭರಣಗಳು, ಚಮೋತ್ಪನ್ನಗಳ (ಬ್ಯಾಗ್, ಶೂ) ಮೇಲೆ ಇನ್ಮುಂದೆ ಯಾವುದೇ ಸುಂಕ ಇರುವುದಿಲ್ಲ. ಇದರಿಂದ ಎಂಎಸ್​ಎಂಇ ವಲಯ ಹಾಗೂ ಲಗ್ಝರಿ ಬ್ರಾ್ಯಂಡ್ ವಲಯಕ್ಕೆ ಲಾಭವಾಗಲಿದೆ. ಮಾತ್ರವಲ್ಲ ಬ್ರಿಟನ್ ಮಾರ್ಗದ ಮೂಲಕ ಯುರೋಪ್ ವಲಯದಲ್ಲಿ ಭಾರತದ ವರ್ಚಸ್ಸು ಹೆಚ್ಚಲಿದೆ.

ಔಷಧ ಮತ್ತು ವೈದ್ಯಕೀಯ ಉಪಕರಣಗಳು: ಯುಕೆಯಲ್ಲಿ ಜೆನರಿಕ್ ಔಷಧಕ್ಕಾಗಿ ಭಾರತೀಯ ಫಾರ್ವ ಕಂಪನಿಗಳಿಗೆ ಸುಲಭ ನೋಂದಣಿ ಪ್ರಕ್ರಿಯೆ ಈಗ ಸಾಧ್ಯವಾಗಲಿದೆ. ವೈದ್ಯಕೀಯ ಉಪಕರಣಗಳ ತಯಾರಿಕಾ ವಲಯವೂ ಬೆಳವಣಿಗೆ ಕಾಣಲಿದೆ.

ಆಹಾರೋತ್ಪನ್ನ: ಬಾಸ್ಮತಿ ಅಕ್ಕಿ, ಪ್ರೀಮಿಯಂ ಚಹಾ ಪುಡಿ, ಸಮುದ್ರೋತ್ಪನ್ನ ಸೇರಿದಂತೆ ವಿವಿಧ ಆಹಾರೋತ್ಪನ್ನಗಳಿಗೆ ಇನ್ಮುಂದೆ ಬ್ರಿಟನ್​ನ ಸುಂಕ ಇರುವುದಿಲ್ಲ. ಇದರಿಂದ ಅಸ್ಸಾಂ, ಗುಜರಾತ್, ಕೇರಳ ಮತ್ತು ಪಶ್ಚಿಮ ಬಂಗಾಳದಂಥ ರಾಜ್ಯಗಳ ರಫ್ತು ವಲಯ ಭಾರಿ ಬೆಳವಣಿಗೆಗೆ ಸಾಕ್ಷಿಯಾಗಲಿದೆ.

ಏನೇನು ಪ್ರಯೋಜನ?

ಬ್ರಿಟನ್ ಜತೆಗಿನ ಒಪ್ಪಂದದಿಂದಾಗಿ ಭಾರತದ ಜವಳಿ ಕ್ಷೇತ್ರದಿಂದ ಹಿಡಿದು ಇಂಜಿನಿಯರಿಂಗ್, ವೈದ್ಯಕೀಯ, ಖಾದ್ಯ ಪದಾರ್ಥ, ಸಮುದ್ರ ಉತ್ಪನ್ನಗಳ ಕ್ಷೇತ್ರಗಳಿಗೆ ಲಾಭವಾಗಲಿದೆ.

ಭಾರತದ ಎಫ್​ಟಿಎ

ಭಾರತವು ಶ್ರೀಲಂಕಾ, ಭೂತಾನ್, ಥಾಯ್ಲೆಂಡ್, ಸಿಂಗಾಪುರ, ಮಲೇಷ್ಯಾ, ದಕ್ಷಿಣ ಕೊರಿಯಾ, ಜಪಾನ್, ಆಸ್ಟ್ರೇಲಿಯಾ, ಯುಎಇ, ಮಾರಿಷಸ್, 10 ರಾಷ್ಟ್ರಗಳ ಆಸಿಯನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ಒಕ್ಕೂಟ ಮತ್ತು ನಾಲ್ಕು ಯುರೋಪಿಯನ್ ರಾಷ್ಟ್ರಗಳ ಒಕ್ಕೂಟ ಎಎಫ್​ಟಿಎ (ಐಸ್​ಲ್ಯಾಂಡ್, ನಾರ್ವೆ, ಸ್ವಿಜೆರ್ಲೆಂಡ್) ನೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. ರಾಜಕೀಯ ಕಾರಣದಿಂದಾಗಿ ಕೆನಡಾ ಜತೆಗಿನ ಎಫ್​ಟಿಎ ಸ್ಥಗಿತಗೊಂಡಿದೆ.

ಅಗ್ಗವಾಗಲಿದೆ ಬ್ರಿಟಿಷ್ ವಿಸ್ಕಿ, ಜಿನ್: ಬ್ರಿಟನ್​ನಿಂದ ಆಮದಾಗುವ ಸ್ಕಾಚ್ ವಿಸ್ಕಿ ಮತ್ತು ಜಿನ್ ಮೇಲೆ ಭಾರತದ ಸುಂಕ 150%ರಿಂದ 75%ಕ್ಕೆ ತಗ್ಗಲಿದೆ. ಒಪ್ಪಂದದ 10ನೇ ವರ್ಷದ ಹೊತ್ತಿಗೆ ಇದು 40%ಕ್ಕೆ ಇಳಿಯಲಿದೆ. ಉದಾಹರಣಗೆ, 5 ಸಾವಿರ ರೂ. ಮೌಲ್ಯದ ಸ್ಕಾಚ್ ವಿಸ್ಕಿ ಬಾಟಲ್ 3500 ರೂ.ಗೆ ಸಿಗಲಿದೆ.

ಐಷಾರಾಮಿ ಕಾರುಗಳು: ಬ್ರಿಟನ್​ನಲ್ಲಿ ನಿರ್ವಣವಾಗುವ ಐಷಾರಾಮಿ ಕಾರುಗಳ (ಉದಾಹರಣೆಗೆ: ಲ್ಯಾಂಡ್ ರೋವರ್, ರೋಲ್ಸ್ ರಾಯಲ್ಸ್, ಜಾಗ್ವಾರ್) ಮೇಲೆ ಭಾರತ ವಿಧಿಸುವ ಸುಂಕ ಶೇ.100ರಿಂದ ಹಂತಹಂತವಾಗಿ ಕಡಿಮೆಯಾಗುತ್ತ ಶೇ.10ಕ್ಕೆ ತಗ್ಗಲಿದೆ. ಇದರಿಂದ ಐಷಾರಾಮಿ ಕಾರುಗಳ ಬೆಲೆ 20-30%ರಷ್ಟು ಅಗ್ಗವಾಗುವ ಸಾಧ್ಯತೆ ಇದೆ.

ಸಾಫ್ಟ್ ಡ್ರಿಂಕ್ಸ್, ಚಾಕೊಲೇಟ್, ಬಿಸ್ಕೆಟ್: ಯುಕೆಯಿಂದ ಆಮದಾಗುವ ಸಾಫ್ಟ್ ಡ್ರಿಂಕ್ಸ್, ಚಾಕೊಲೇಟ್, ಬಿಸ್ಕೆಟ್ ಮೇಲಿನ ಸುಂಕ ಕಡಿಮೆಯಾಗಲಿದ್ದು, ಇದರ ಬೆಲೆಗಳು ಶೇ.15ರಷ್ಟು ತಗ್ಗಲಿವೆ ಎಂಬುದು ತಜ್ಞರ ಅಂದಾಜು.

ಸೌಂದರ್ಯವರ್ಧಕ ಮತ್ತು ವೈದ್ಯಕೀಯ ಉಪಕರಣಗಳು: ಬ್ರಿಟನ್​ನಿಂದ ಬರುವ ಸೌಮದರ್ಯವರ್ಧಕ ಉತ್ಪನ್ನಗಳು, ವೈದ್ಯಕೀಯ ಉಪಕರಣಗಳು, ಏರೋಸ್ಪೆಸ್ ಬಿಡಿಭಾಗಗಳ ಮೇಲಿನ ಸುಂಕ ಶೇ.15ರಿಂದ ಶೇ.3ಕ್ಕೆ ತಗ್ಗಲಿರುವುದರಿಂದ ಈ ಉತ್ಪನ್ನಗಳು ಕೂಡ ಸುಲಭವಾಗಿ ಜನರ ಕೈಗೆಟುಕಲಿವೆ.

ಬ್ರ್ಯಾಂಡೆಡ್​ ಬಟ್ಟೆ: ಯುಕೆಯಿಂದ ಭಾರತಕ್ಕೆ ಆಮದಾಗುವ ಬ್ರ್ಯಾಂಡೆಡ್ ಬಟ್ಟೆಗಳು, ಫ್ಯಾಷನ್ ಉತ್ಪನ್ನಗಳು ಕಡಿಮೆ ಬೆಲೆಗೆ ಲಭ್ಯವಾಗಲಿವೆ. ಅಲ್ಲದೆ, ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ ಉಪಕರಣಗಳ ಬೆಲೆಯೂ ಕಡಿಮೆ ಆಗಲಿದೆ.

ಹಲವು ಅನುಕೂಲ

  • ಈ ಒಪ್ಪಂದದ ಅನ್ವಯ ಪಾಲುದಾರ ರಾಷ್ಟ್ರಗಳ ಮಾರುಕಟ್ಟೆಗಳಲ್ಲಿ ಶೂನ್ಯ ಸುಂಕದ ಪ್ರವೇಶ ಸಿಗುತ್ತದೆ. ರಫ್ತು ಮಾರುಕಟ್ಟೆಗಳಲ್ಲಿ ವೈವಿಧ್ಯಕರಣ ಮತ್ತು ವಿಸ್ತರಣೆಗೆ ಸಹಾಯ ಮಾಡುತ್ತದೆ.
  • ಎಫ್​ಟಿಎಗೆ ಒಳಪಡದ ದೇಶಗಳ ಜೊತೆಗಿನ ವಹಿವಾಟಿಗೆ ಹೋಲಿಸಿದರೆ ಎಫ್​ಟಿಎ ಒಪ್ಪಂದ ಮಾಡಿಕೊಂಡ ಪಾಲುದಾರ ದೇಶದ ಜತೆಗಿನ ವಹಿವಾಟು ಮುಕ್ತವಾಗಿರುತ್ತದೆ.
  • ಇಂತಹ ಒಪ್ಪಂದಗಳು ದೇಶೀಯ ಉತ್ಪಾದನೆ ಯನ್ನು ಉತ್ತೇಜಿಸಲು ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತದೆ. ಮೌಲ್ಯವರ್ಧಿತ ಉತ್ಪಾದನೆಗಾಗಿ ಕಚ್ಚಾ ವಸ್ತುಗಳು ಮತ್ತು ಬಂಡವಾಳ ಸರಕುಗಳಿಗೆ ಪ್ರವೇಶವನ್ನು ಅನುಮತಿಸುತ್ತವೆ.
  • ದೀರ್ಘಕಾಲೀನ ದಕ್ಷತೆ ಮತ್ತು ಗ್ರಾಹಕ ಕಲ್ಯಾಣ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

ಏನಿದು ಎಫ್​ಟಿಎ?

ಮುಕ್ತ ವ್ಯಾಪಾರ ಒಪ್ಪಂದವು ಎರಡು ಅಥವಾ ಹೆಚ್ಚಿನ ದೇಶಗಳ ನಡುವಿನ ಒಂದು ವ್ಯವಸ್ಥೆ. ಅಲ್ಲಿ ಅವರು ತಮ್ಮ ನಡುವೆ ವ್ಯಾಪಾರದ ಗರಿಷ್ಠ ಸಂಖ್ಯೆಯ ಸರಕುಗಳ ಮೇಲಿನ ಕಸ್ಟಮ್್ಸ ಸುಂಕವನ್ನು ಸಂಪೂರ್ಣ ತೆಗೆದುಹಾಕಲು ಅಥವಾ ಕಡಿಮೆ ಮಾಡಲು ಒಪ್ಪಂದ ಮಾಡಿಕೊಂಡಿರುತ್ತಾರೆ. ಜೊತೆಗೆ ಪಾಲುದಾರ ದೇಶಗಳಿಂದ ಆಮದುಗಳ ಗಮನಾರ್ಹ ಮೌಲ್ಯದ ಮೇಲಿನ ವ್ಯಾಪಾರೇತರ ಅಡೆತಡೆಗಳನ್ನು ಕಡಿತಗೊಳಿಸುತ್ತಾರೆ. ಸರಕು ಸೇವೆಗಳ ರಫ್ತು ಮತ್ತು ದ್ವಿಪಕ್ಷೀಯ ಹೂಡಿಕೆಗಳನ್ನು ಉತ್ತೇಜಿಸಲು ಮಾನದಂಡಗಳನ್ನು ಸಡಿಲಗೊಳಿಸುತ್ತಾರೆ.

ಮಾತುಕತೆ ಪ್ರಗತಿಯಲ್ಲಿ

ಭಾರತ ಹಲವು ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳೊಂದಿಗೆ ವ್ಯಾಪಾರ ಒಪ್ಪಂದ ಅಂತಿಮಗೊಳಿಸಲು ಮಾತುಕತೆ ನಡೆಸುತ್ತಿದೆ. ಅಮೆರಿಕ, ಓಮನ್, ಯುರೋಪಿಯನ್ ಯೂನಿಯನ್, ಪೆರು ಮತ್ತು ಇಸ್ರೇಲ್ ಜತೆ ಮಾತುಕತೆ ಪ್ರಗತಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net