ಉಚಿತ ಯೋಜನೆಗಳು ಬಡವರಿಗೆ ಆಸರೆ

guarenty
ಸಾಗರದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಬಿ.ಆರ್. ಜಯಂತ್ ಅವರನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಸನ್ಮಾನಿಸಿದರು. ಕಾಗೋಡು ತಿಮ್ಮಪ್ಪ, ಚಂದ್ರ ಭೂಪಾಲ್, ತಾರಾ ಮೂರ್ತಿ, ನಂದಾ ಗೊಜನೂರ್ ಇತರರಿದ್ದರು.
Published on

ಸಾಗರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರಿಗೆ ಆಸರೆಯಾಗಿವೆ. ವಿಪಕ್ಷಗಳು ವಿನಾಕಾರಣ ಟೀಕೆ ಮಾಡುತ್ತಿವೆ. ಆದರೆ ವಾಸ್ತವದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಸಾಕಷ್ಟು ಕುಟುಂಬಗಳು ಭರವಸೆಯಲ್ಲಿ ಬದುಕು ಕಟ್ಟಿಕೊಂಡಿವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರ ತಾಲೂಕು ಕಚೇರಿಯಲ್ಲಿ ಗುರುವಾರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿವರ್ಷ ರಾಜ್ಯದಲ್ಲಿ ಐದು ಗ್ಯಾರಂಟಿಗಾಗಿ 54 ಸಾವಿರ ಕೋಟಿ ರೂ. ವಿನಿಯೋಗ ಮಾಡಲಾಗುತ್ತಿದೆ. ಈ ಮೊತ್ತ ಗೋವಾ ರಾಜ್ಯದ ಬಜೆಟ್‌ನಷ್ಟು ದೊಡ್ಡದು ಎಂದರೂ ಅಚ್ಚರಿಯಿಲ್ಲ. ರಾಜ್ಯದ ಆರು ಕೋಟಿ ಜನರಿಗೆ ಒಂದಿಲ್ಲೊಂದು ಹಂತದಲ್ಲಿ ಮನೆಗೊಬ್ಬರಿಗಾದರೂ ಯೋಜನೆ ತಲುಪುತ್ತಿದೆ ಎಂದರು.
ಗ್ಯಾರಂಟಿ ಯೋಜನೆಯನ್ನು ಬೋಗಸ್ ಎಂದು ಬಿಜೆಪಿ ಹೇಳಿಕೆಯಲ್ಲಿ ಹುರುಳಿಲ್ಲ. ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಪಾವತಿಯಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವುದು ಮುಖ್ಯ ಉದ್ದೇಶ. ಸರ್ಕಾರದ ಮುಖ್ಯವಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಸಮಿತಿ ಅಧ್ಯಕ್ಷರಾಗಿ ಬಿ.ಆರ್.ಜಯಂತ್ ಯಶಸ್ವಿಯಾಗಿ ಮುನ್ನಡೆಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ರಾಜ್ಯದಲ್ಲಿ ಸಂಪನ್ಮೂಲ ಮತ್ತು ಸಂಪತ್ತನ್ನು ಬಡಜನರಿಗೆ ಹಂಚುವುದೇ ಗ್ಯಾರಂಟಿ ಯೋಜನೆ ಉದ್ದೇಶ. ಬಡವರ ಕೈನಲ್ಲಿ ಹಣ ಚಲಾವಣೆ ಆಗುತ್ತಿರುವ ವಿಶೇಷ ಯೋಜನೆ ರಾಜ್ಯ ಸರ್ಕಾರ ಜಾರಿಗೆ ತರುವ ಮೂಲಕ ಜನರ ಮೆಚ್ಚುಗೆ ಗಳಿಸಿದೆ. ನೂತನ ಕಚೇರಿ ಮೂಲಕ ಸೌಲಭ್ಯ ಸಿಗದವರಿಗೆ ಸೌಲಭ್ಯ ಕಲ್ಪಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರ ಭೂಪಾಲ್, ಪ್ರಮುಖರಾದ ಕಲಸೆ ಚಂದ್ರಪ್ಪ, ಗುರುಕೃಷ್ಣ ಶೆಣೈ, ಚಂದ್ರಶೇಖರ್, ಎಚ್.ಕೆ.ನಾಗಪ್ಪ ಮೈಕಲ್ ಡಿಸೋಜ, ಸಿರಿ ಜಹಾನ್, ಮಹಾಬಲ ಕೌತಿ, ತಾರಾ ಮೂರ್ತಿ, ನಂದಾ ಗೊಜನೂರ್, ಮಕ್ಬುಲ್ ಅಹಮ್ಮದ್, ಸೈಯದ್ ತಾಹೀರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net