ಕರೊನಾ ಲಸಿಕೆ ಹಾಕೊಂಡಿದ್ರೆ ಇಲ್ಲಿ ಬಿಯರ್ ಫ್ರೀ!; ಮಹಿಳೆಯರಿಗೆ ಚಿನ್ನದ ಮೂಗುತಿ​, ಲಸಿಕೆ ಅಭಿಯಾನಕ್ಕೆ ಶುರುವಾದ್ವು ಆಫರ್ಸ್​.

Beer
Published on

ನವದೆಹಲಿ: ದೇಶಾದ್ಯಂತ ಕರೊನಾ ಸೋಂಕು ವ್ಯಾಪಿಸುತ್ತಿದ್ದು, ಕೆಲವೆಡೆ ಪರಿಸ್ಥಿತಿ ಕೈಮೀರಿ ಹೋಗುವ ಆತಂಕಗಳೂ ಕಾಡುತ್ತಿವೆ. ಈ ಮಧ್ಯೆ ಸೋಂಕು ತಡೆಗೆ ಲಸಿಕೆ ಹಾಕಿಸಿಕೊಳ್ಳುವುದೇ ಅತ್ಯುತ್ತಮ ಮಾರ್ಗವೆಂದು ಪರಿಣತರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಹೆಚ್ಚು ಹೆಚ್ಚು ಮಂದಿ ಲಸಿಕೆ ಹಾಕಿಸಿಕೊಳ್ಳುವಂತೆ ನಾನಾ ರೀತಿಯಲ್ಲಿ ಪ್ರೋತ್ಸಾಹಿಸಲಾಗುತ್ತಿದೆ. ಅದೇ ಹಿನ್ನೆಲೆಯಲ್ಲಿ ಕೆಲವೆಡೆ ಆಫರ್​​ಗಳನ್ನೂ ಕೊಡಲಾಗುತ್ತಿದೆ.

ದೊಡ್ಡ ಪ್ರಮಾಣದ ಜನತೆ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಲು ಈಗಾಗಲೇ ಹಲವೆಡೆ ಅಭಿಯಾನ ಆರಂಭಗೊಂಡಿದ್ದು, ಲಸಿಕೆ ಹಾಕಿಸಿಕೊಂಡ ಕೆಲವರಿಗಂತೂ ಭರ್ಜರಿ ಕೊಡುಗೆಗಳು ಸಿಗಲಾರಂಭಿಸಿವೆ. ಗುಜರಾತ್​ನ ರಾಜ್​ಕೋಟ್​ ಜಿಲ್ಲೆಯ ಜಾನ್​ ವಿಷನ್​ ಸಂಸ್ಥೆ ಲಸಿಕೆ ಹಾಕಿಸಿಕೊಂಡವರಿಗೆ ಉಚಿತವಾಗಿ ಆಹಾರ ನೀಡುತ್ತಿದೆ. ಅದರಲ್ಲೂ ರಾಜ್​ಕೋಟ್​ನ ಚಿನ್ನದ ವರ್ತಕರ ಸಮುದಾಯವು ಕಳೆದ ವಾರ ಲಸಿಕೆ ಹಾಕಿಸಿಕೊಂಡ ಮಹಿಳೆಯರಿಗೆ ಚಿನ್ನದ ಮೂಗುತಿಯನ್ನೇ ಕೊಟ್ಟಿದೆ.

ಹರ್ಯಾಣದ ಗುರುಗ್ರಾಮದ ಗೋಲ್ಡ್ ರಸ್ತೆಯಲ್ಲಿನ ಇಂಡಿಯನ್​ ಗ್ರಿಲ್​ ರೂಮ್​ನಲ್ಲಿ ಲಸಿಕೆ ಹಾಕಿಸಿಕೊಂಡಿದ್ದವರಿಗೆ ಉಚಿತವಾಗಿ ಬಿಯರ್ ನೀಡುವ ಆಫರ್ ಕೂಡ ಚಾಲ್ತಿಯಲ್ಲಿದೆ. ಗ್ರಾಹಕರು ಲಸಿಕೆ ಹಾಕಿಸಿಕೊಂಡ ಕುರಿತ ಕಾರ್ಡ್ ತೋರಿಸಿದರೆ ಅವರಿಗೆ ಒಂದು ಬಿಯರ್ ಉಚಿತವಾಗಿ ನೀಡಲಾಗುತ್ತಿದೆ. ಏ. 5ರಿಂದಲೇ ಆರಂಭವಾಗಿರುವ ಈ ಆಫರ್​ ಈ ವಾರವಿಡೀ ಚಾಲ್ತಿಯಲ್ಲಿದೆ. ಇನ್ನು ಈ ಥರದ ಆಫರ್​ ದೇಶದ ವಿವಿಧೆಡೆ ಆರಂಭವಾದರೂ ಅಚ್ಚರಿ ಏನಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net