

ಬೆಂಗಳೂರು: ವರ್ಕ್ ಫ್ರಮ್ ಹೋಂನಲ್ಲಿ ಪ್ರಾಜೆಕ್ಟ್ ಇರುವುದಾಗಿ ಹೇಳಿ ವಂಚನೆ ಮಾಡುತ್ತಿದ್ದ 12 ಸೈಬರ್ ಕಳ್ಳರ ಗ್ಯಾಂಗ್ ಅನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಕಿಂಗ್‌ಪಿನ್ ಬಿ.ಟೆಕ್. ಪದವೀಧರ ಹರ್ಷವರ್ಧನ್ ಓಜಾ (25), ಲೇಬರ್ ಗುತ್ತಿಗೆದಾರ ಸೋನು (27) ಮತ್ತು ಜನರಿಗೆ ಕರೆ ಮಾಡಿ ವಂಚಿಸುತ್ತಿದ್ದ ಆಕಾಶ್‌ಕುಮಾರ್ (23), ಗೋರಖನಾಥ ಯಾದವ್ (20), ಸಂಜೀತ್ ಕುಮಾರ್ ಯಾದವ್ (25), ಆಕಾಶ್ ಕುಮಾರ್ ಸಿಂಗ್ (19), ಅಮಿತ್ ಯಾದವ್ (19), ಗೌರವ್ ಪ್ರತಾಪ್ ಸಿಂಗ್ (22), ಬ್ರಿಜೇಶ್ ಸಿಂಗ್ (20), ರಾಜ್ ಮಿಶ್ರಾ (21), ತುಷಾರ್ ಮಿಶ್ರಾ (22) ಮತ್ತು ಗೌತಮ್ ಶೈಲೇಶ್ (12) ಬಂಧಿತರು. ಆರೋಪಿಗಳಿಂದ 400 ಸಿಮ್ ಕಾರ್ಡ್, 140 ಎಟಿಎಂ ಕಾರ್ಡ್, 17 ಚೆಕ್‌ಬುಕ್, 27 ಮೊಬೈಲ್, 22 ವಿವಿಧ ಬ್ಯಾಂಕ್‌ಗಳ ಪಾಸ್‌ಬುಕ್ ಮತ್ತು 15 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಡುಗೋಡಿಯ ಎಲ್.ಆರ್. ನಗರದ ಮಹಿಳೆಗೆ ಜನವರಿಯಲ್ಲಿ ಮೊಬೈಲ್‌ಗೆ ಮನೆಯಿಂದಲೇ ಕೆಲಸ ಮಾಡುವುದಿದ್ದರೆ ಪ್ರಾಜೆಕ್ಟ್ ವರ್ಕ್ ಇರುವುದಾಗಿ ಸಂದೇಶ ಬಂದಿತ್ತು. ಇದನ್ನು ನಂಬಿದ ಮಹಿಳೆ, ಪ್ರಾಜೆಕ್ಟ್ ವರ್ಕ್ ಮುಗಿಸಿಕೊಟ್ಟು ವೇತನ ಕೇಳಿದ್ದರು. ಅದಕ್ಕೆ ಅಪರಿಚಿತ ವ್ಯಕ್ತಿ, ‘ಕ್ರೆಡಿಟ್ ಸ್ಕೋರ್ ಬ್ಯಾಲೆನ್ಸ್‌ಶಿಟ್‌ನಲ್ಲಿ ನೆಗೆಟಿವ್ ತೋರಿಸುತ್ತಿದೆ. ಹಣ ಡ್ರಾ ಮಾಡಲು ಸಾಧ್ಯವಾಗುತ್ತಿಲ್ಲ. ಮೊದಲು ನಮ್ಮಅಪ್ಲೀಕೇಷನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು’ ಎಂದು ಸಲಹೆ ಕೊಟ್ಟಿದ್ದ. ಇದನ್ನು ನಂಬಿದ ಮಹಿಳೆ, ನೋಂದಣಿ ಮಾಡಿಕೊಂಡಿದ್ದು, ಪ್ರತಿಯಾಗಿ 800 ರೂ. ಆಕೆಯ ಖಾತೆಗೆ ಜಮೆಯಾಗಿತ್ತು. ಉಳಿದ ಹಣ ವಿತ್‌ಡ್ರಾ ಮಾಡಲು 10 ಸಾವಿರ ರೂ. ೆನ್ ಪೇ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಲಿದೆ ಎಂದು ಆಮಿಷವೊಡ್ಡಿದ್ದ. ಮಹಿಳೆ 10 ಸಾವಿರ ರೂ. ೆನ್ ಪೇ ಮಾಡಿದಾಗ ಪ್ರತಿಯಾಗಿ 20 ಸಾವಿರ ರೂ. ಲಾಭಾಂಶ ಕೊಟ್ಟಿದ್ದರು. ಇದೇ ರೀತಿ ಮಹಿಳೆಗೆ ನಂಬಿಸಿ ಸ್ಕೋರ್ ಬ್ಯಾಲೆನ್ಸ್‌ಶೀಟ್‌ನಲ್ಲಿ 10,82,502 ರೂ. ತೋರಿಸಿದ್ದು, ವಿತ್‌ಡ್ರಾಗೆ 5 ಲಕ್ಷ ರೂ. ಪಾವತಿಸುವಂತೆ ಸೂಚಿಸಿದ್ದ.
ದುರಾಸೆಗೆ ಬಿದ್ದ ಮಹಿಳೆ, ಹಂತ ಹಂತವಾಗಿ ಅಪರಿಚಿತ ಹೇಳಿದ ಬ್ಯಾಂಕ್ ಖಾತೆಗಳಿಗೆ 5 ಲಕ್ಷ ರೂ. ಜಮೆ ಮಾಡಿದ್ದರು. ಇನ್ನೂ 3.24 ಲಕ್ಷ ರೂ. ಜಮಾ ಮಾಡಿದಾಗ ಮಾತ್ರ 10 ಲಕ್ಷ ರೂ. ವಾಪಸ್ ಬರಲಿದೆ ಎಂದು ಷರತ್ತು ವಿಧಿಸಿದ್ದರು. ಅನುಮಾನಗೊಂಡ ಮಹಿಳೆ, ಆಡುಗೋಡಿ ಠಾಣೆಗೆ ದೂರು ಸಲ್ಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಸಿ. ರವಿಕುಮಾರ್ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು. ಹಣ ವರ್ಗಾವಣೆ ಆಗಿದ್ದ ೆಡರಲ್ ಬ್ಯಾಂಕ್ ಖಾತೆ ವಿವರ ಪಡೆದಾಗ ಉತ್ತರ ಪ್ರದೇಶದ ಶಾಖೆಯದು ಎಂಬ ಸುಳಿವು ಲಭ್ಯವಾಗಿತ್ತು. ಈ ಜಾಡು ಹಿಡಿದು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆ ನಡೆಸಿ 12 ಆರೋಪಿಗಳನ್ನು ಬಂಧಿಸಿ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿ ಆನಂತರ ಕಸ್ಟಡಿಗೆ ಪಡೆದು ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೌಕರರ ಹೆಸರಿನಲ್ಲಿ ಖಾತೆ
ನೊಂದ ಮಹಿಳೆಯಿಂದ ಹಣ ವರ್ಗಾವಣೆ ಮಾಡಿಸಿಕೊಂಡಿದ್ದ ಖಾತೆ ವಿವರ ಪರಿಶೀಲನೆ ನಡೆಸಿದಾಗ ಉತ್ತರ ಪ್ರದೇಶದ ಬ್ಯಾಂಕ್ ವಿವರ ಲಭ್ಯವಾಗಿತ್ತು. ಖಾತೆದಾರರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಾಗ ಮುಂಬೈನಲ್ಲಿ ಇರುವ ಲೇಬರ್ ಗುತ್ತಿಗೆದಾರ ಸೋನು ಎಂಬಾತ ಬ್ಯಾಂಕ್ ಖಾತೆಗಳನ್ನು ತೆರೆಸಿ ಪಾಸ್‌ಬುಕ್, ಎಟಿಎಂ, ಸಿಮ್ ಕಾರ್ಡ್ ತೆಗೆದುಕೊಂಡು ಹೋಗಿದ್ದಾನೆ ಎಂದು ಹೇಳಿಕೆ ನೀಡಿದ್ದರು. ಮುಂಬೈಗೆ ತೆರಳಿದ ಪೊಲೀಸರು, ಸೋನುನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು. ಆತ ಕೆಲಸಕ್ಕೆ ಬರುತ್ತಿದ್ದ ನೌಕರರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಪಾಸ್‌ಬುಕ್, ಎಟಿಎಂ, ಸಿಮ್ ಕಾರ್ಡ್ ಪಡೆದು ಉತ್ತರ ಪ್ರದೇಶದ ಮೂವರು ವ್ಯಕ್ತಿಗಳಿಗೆ ನೀಡುತ್ತಿದ್ದ. ಪ್ರತಿಯಾಗಿ 1 ಖಾತೆಗೆ 1,500 ರೂ. ಕಮಿಷನ್ ಕೊಡುತ್ತಿದ್ದರು ಎಂದು ಬಾಯ್ಬಿಟ್ಟಿದ್ದ. ಈತ 22 ಖಾತೆಗಳ ವಿವರವನ್ನು ಕೊಟ್ಟಿದ್ದ.
20 ಸಾವಿರ ರೂ.ಗೆ ಸೇಲ್
ಮುಂಬೈನ ಲೇಬರ್ ಗುತ್ತಿಗೆದಾರ ಸೋನು ಕೊಟ್ಟ ಮಾಹಿತಿ ಮೇರೆಗೆ ಉತ್ತರ ಪ್ರದೇಶಕ್ಕೆ ತೆರಳಿದ ಪೊಲೀಸರು, ಓರ್ವ ಆರೋಪಿಯನ್ನು ವಶಕ್ಕೆ ಪಡೆದಾಗ ತಪ್ಪೊಪ್ಪಿಕೊಂಡಿದ್ದಾನೆ. ತನ್ನೊಂದಿಗೆ ಇತರ ಸ್ನೇಹಿತರು ಇದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಖಾತೆ ಓಪನ್ ಮಾಡಿಕೊಟ್ಟರೆ 18ರಿಂದ 20 ಸಾವಿರ ರೂ. ಮತ್ತು ಸ್ಥಳೀಯ ಬ್ಯಾಂಕ್ ಖಾತೆಗೆ 3 ಸಾವಿರ ರೂ. ಕಮಿಷನ್ ಕೊಡುತ್ತಿದ್ದರು ಎಂದು ಹೇಳಿಕೆ ನೀಡಿದ್ದಾನೆ. ಈತ ಕೊಟ್ಟ ಮಾಹಿತಿ ಮೇರೆಗೆ ಪ್ರಯಾಗ್‌ರಾಜ್‌ನ ಕಮಲಾನಗರದ ಬಾಡಿಗೆ ಮನೆ ಮೇಲೆ ದಾಳಿ ನಡೆಸಿದಾಗ, ಕಿಂಗ್‌ಪಿನ್ ಹರ್ಷವರ್ಧನ್ ಓಜಾ ಸೇರಿ 10 ಮಂದಿ ಸೆರೆಸಿಕ್ಕರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಲ್ ಸೆಂಟರ್ ಸ್ಥಾಪಿಸಿದ್ದ
ಕಿಂಗ್‌ಪಿನ್ ಹರ್ಷವರ್ಧನ್ ಪ್ರಯಾಗ್‌ರಾಜ್‌ನಲ್ಲಿ ಮನೆ ಬಾಡಿಗೆಗೆ ತೆಗೆದುಕೊಂಡು ಅದರಲ್ಲಿ ಕಾಲ್ ಸೆಂಟರ್ ಸ್ಥಾಪಿಸಿದ್ದ. ನಿರುದ್ಯೋಗ ಹುಡುಗರನ್ನು ಕೆಲಸಕ್ಕೆ ಇಟ್ಟುಕೊಂಡು ಅಮಾಯಕರಿಗೆ ಆನ್‌ಲೈನ್ ಮೂಲಕ ವಂಚನೆ ಮಾಡಿಸುತ್ತಿದ್ದ.