ಭೂಗಳ್ಳರಿಗೆ ಸುಲಭ ಲಾಭ!; ನಕಲಿ ದಾಖಲೆ ಸೃಷ್ಟಿಸಿ ಒಂದೇ ಆಸ್ತಿ ಹಲವರಿಗೆ ಮಾರಾಟ

Front
Published on

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸುಲಭ ನೋಂದಣಿ (ಎನಿವೇರ್ ರಿಜಿಸ್ಟ್ರೇಷನ್) ಸೇವೆ ಭೂಗಳ್ಳರಿಗೆ ವರದಾನವಾಗಿದೆ. ಸ್ವತ್ತಿನ ಮೂಲ ಕಡತಕ್ಕೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಮೂಲಕ ಸ್ವಂತ ನಿವೇಶನ, ಮನೆಯ ಕನಸು ಕಂಡವರ ಹಣ, ನೆಮ್ಮದಿಯನ್ನು ಇವರು ಕಸಿದುಕೊಳ್ಳುತ್ತಿದ್ದಾರೆ.

ಏನಿದು ಯೋಜನೆ?: ಯಾವುದೇ ಆಸ್ತಿಯನ್ನು ಯಾವುದೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುವ ಸೇವೆಯೇ ‘ಸುಲಭ ನೋಂದಣಿ’ ಯೋಜನೆ. ಬೆಂಗಳೂರು ನಗರ ಜಿಲ್ಲಾ ನೋಂದಣಿ ಕಚೇರಿಯಲ್ಲಿ ಇದನ್ನು ಜಾರಿಗೆ ತರಲಾಗಿದ್ದು, ಇದನ್ನು ರಾಜ್ಯವ್ಯಾಪಿ ವಿಸ್ತರಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮುಂದಾಗಿದೆ.

ಅಕ್ರಮ ಹೇಗೆ?: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ನಗರ ಮತ್ತು ಪಟ್ಟಣ ಪ್ರಾದೇಶಗಳಲ್ಲಿ ಭೂಮಿ ಬೆಲೆ ಹೆಚ್ಚಾಗುತ್ತಿರುವ ಕಾರಣ ಕೃಷಿ ಭೂಮಿ ತುಂಡು ತುಂಡು ಮಾಡಿ ರೆವಿನ್ಯೂ ಲೇಔಟ್ ಸೃಷ್ಟಿಸುವ ಪ್ರಕ್ರಿಯೆ ಹೆಚ್ಚಾಗಿದೆ. ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುತ್ತಿಲ್ಲ. ಇ-ಖಾತಾ ಸಿಗುತ್ತಿಲ್ಲ. ಈ ದಾಖಲೆಗಳ ಗೊಂದಲಗಳೇ ಭೂಗಳ್ಳರಿಗೆ ಲಾಭವಾಗಿದೆ. ಒಂದು ಆಸ್ತಿಯನ್ನು ಒಮ್ಮೆ ಒಂದು ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಕೊಟ್ಟರೆ ಮತ್ತೊಮ್ಮೆ ಅದೇ ಆಸ್ತಿಯನ್ನು ಮತ್ತೊಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕ್ರಯಪತ್ರ ಮಾಡಿಕೊಡುತ್ತಿದ್ದಾರೆ. ಒಂದೊಮ್ಮೆ ಯಾವುದಾದರೂ ಕಚೇರಿಯಲ್ಲಿ ಈ ವಂಚಕರನ್ನು ಪತ್ತೆಹಚ್ಚಿದರೆ ಆ ಸಬ್ ರಿಜಿಸ್ಟ್ರಾರ್ ಬಿಟ್ಟು ಬೇರೆ ಅಧಿಕಾರಿಯ ಬಳಿ ನೋಂದಣಿ ಮಾಡಿಸುತ್ತಾರೆ. ತಮಗೆ ಬೇಕಾದ ರೀತಿಯಲ್ಲಿ ದಾಖಲೆ ಸೃಷ್ಟಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಅಥವಾ ಅಕ್ರಮಕ್ಕೆ ಸಹಕರಿಸುವ ಅಧಿಕಾರಿ, ಸಿಬ್ಬಂದಿ ಬಳಿಯೇ ಆಸ್ತಿ ಖರೀದಿದಾರರನ್ನು ಕರೆದೊಯ್ದು ಕ್ರಯಪತ್ರ ಮಾಡಿ ಕೊಡುತ್ತಿದ್ದಾರೆ.

ಯಾವುದೇ ಆಸ್ತಿಗೆ ಇಸಿ (ಎನ್​ಕಂಬರೆನ್ಸ್ ಸರ್ಟಿಫಿಕೇಟ್) ಕೈಗನ್ನಡಿ. ಬೇರೆಯವರಿಗೆ ನೋಂದಣಿ, ಕೋರ್ಟ್ ಕೇಸ್, ಆಸ್ತಿ ಮೇಲೆ ಸಾಲ ಇನ್ನಿತರ ವ್ಯವಹಾರ ನಡೆದಿದ್ದರೆ ಇಸಿಯಲ್ಲಿ ಗೊತ್ತಾಗುತ್ತದೆ. ಆದರೆ, ಭೂಗಳ್ಳರು ನೋಂದಣಿ ಕಚೇರಿಗೆ ಸರ್ವೆ ನಂಬರ್ ಅಥವಾ ಖಾತೆ ನಂಬರ್ ಇದರಲ್ಲಿ ಒಂದರ ತಪು್ಪ ಮಾಹಿತಿ ಕೊಟ್ಟು ಇಸಿಯಲ್ಲಿ ಋಣಭಾರ ಇಲ್ಲ (ನಿಲ್) ಎಂದು ಪಡೆಯುತ್ತಾರೆ. ಇದರ ಆಧಾರದ ಮೇಲೆ ಮಾರಾಟ ಮಾಡುವವರ ಹಾವಳಿ ಹೆಚ್ಚಾಗಿದೆ.

ಡಿ ಗ್ರೂಪ್ ನೌಕರರ ಸಂಘದ ಲೇಔಟ್ ನಾಗರಬಾವಿ ಸಬ್ ರಿಜಿಸ್ಟ್ರಾರ್ ಕಚೇರಿ ವ್ಯಾಪ್ತಿಗೆ ಬರಲಿದ್ದು, ಇಲ್ಲೇ ಕ್ರಯಪತ್ರ ಮಾಡಿಸುವಂತೆ ಕೇಳಿದಾಗ ಸಂಘದ ಅಧ್ಯಕ್ಷ ನಟರಾಜ್, ಎಲ್ಲಿ ಬೇಕಾದರೂ ಮಾಡಿಸಬಹುದು ಎಂದು ಹೇಳಿ ಮಾದನಾಯಕನಹಳ್ಳಿ ಕಚೇರಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸಿ ವಂಚಿಸಿದ್ದಾರೆ.

| ಬಸವರಾಜು ವಂಚನೆಗೆ ಒಳಗಾದವರು

ನೈಜತೆ ಪರೀಕ್ಷಿಸುವ ಅಧಿಕಾರವಿಲ್ಲ: ನೋಂದಣಿ ನಿಯಮ-1965ರ ನಿಯಮ 73ರ ಪ್ರಕಾರ ನೋಂದಣಾಧಿಕಾರಿಗಳು ಸರ್ಕಾರ ನಿಗದಿ ಮಾಡಿರುವ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಪಡೆದು ಆಸ್ತಿ ನೋಂದಣಿ ಮಾಡಬೇಕಷ್ಟೇ. ದಾಖಲೆ ನೈಜತೆ ಪರೀಕ್ಷೆ ಮಾಡುವ ಅಧಿಕಾರವಿಲ್ಲ. ಇದನ್ನು ತಿಳಿದಿರುವ ಭೂಗಳ್ಳರು, ಸಬ್ ರಿಜಿಸ್ಟ್ರಾರ್​ಗಳ ಲೋಪ ಬಳಸಿಕೊಂಡು ಅಥವಾ ಲಂಚ ಕೊಟ್ಟು ಬ್ಲಾ್ಯಕ್​ವೆುೕಲ್ ಮಾಡಿ ಅಕ್ರಮಕ್ಕೆ ಎಳೆಯುತ್ತಾರೆ.

ಡಿ ಗ್ರೂಪ್ ಲೇಔಟ್​ನಲ್ಲಿ ಹೆಚ್ಚು

ಬೆಂಗಳೂರಿನ ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ನಟರಾಜ್, ನೂರಾರು ಮಂದಿ ಸರ್ಕಾರಿ ನೌಕರರಿಗೆ ಸೈಟ್ ಆಸೆ ತೋರಿಸಿ ಲಕ್ಷಾಂತರ ರೂ. ಪಡೆದು ಒಂದೇ ಸೈಟನ್ನು ಹಲವರಿಗೆ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅನ್ನಪೂರ್ಣೆಶ್ವರಿನಗರ ಪೊಲೀಸರು ತನಿಖೆ ಕೈಗೊಂಡಾಗ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇನ್ನೂ ದೂರುಗಳು ಬರುತ್ತಿವೆ. ಶ್ರೀಗಂಧ ಕಾವಲ್ ಮತ್ತು ಗಿಡದಕೊನೇನಹಳ್ಳಿ ಲೇಔಟ್ ನಿರ್ಮಾಣ ಮಾಡಲಾಗಿತ್ತು. ಇದು ನಾಗರಬಾವಿ ಸಬ್ ರಿಜಿಸ್ಟ್ರಾರ್ ಕಚೇರಿ ವ್ಯಾಪ್ತಿಗೆ ಬರುತ್ತಿತ್ತು. ಭೂಗಳ್ಳ ಎಂದು ಸಬ್ ರಿಜಿಸ್ಟ್ರಾರ್ ಪತ್ತೆಹಚ್ಚಿದ ಮೇಲೆ ಎನಿವೇರ್ ರಿಜಿಸ್ಟ್ರೇಷನ್ ತಿಳಿದ ನಟರಾಜ್, ಖದೀರಿದಾರರನ್ನು ಶ್ರೀರಾಂಪುರ, ಪೀಣ್ಯ, ಮಾದನಾಯಕನಹಳ್ಳಿ ಇನ್ನಿತ್ತರ ಕಚೇರಿಗೆ ಕರೆದೊಯ್ದು ನೋಂದಣಿ ಮಾಡಿಸಿದ್ದಾನೆ. ಈತ ‘ಸುಲಭ ನೋಂದಣಿ’ ವ್ಯವಸ್ಥೆ ಬಳಸಿಕೊಂಡೇ ಈ ಎಲ್ಲ ಅಕ್ರಮ ಎಸಗಿದ್ದಾನೆ.

ಕಾನೂನು ಇಲಾಖೆ ಆಕ್ಷೇಪ: 2015-16ರಲ್ಲಿ ರಾಜ್ಯ ಸರ್ಕಾರ ಸುಲಭ ನೋಂದಣಿ ಸೇವೆ ಘೋಷಣೆ ಮಾಡಿತ್ತು. ಈ ಬಗ್ಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು, ಕಾನೂನು ಇಲಾಖೆ ಅಭಿಪ್ರಾಯ ಕೇಳಿದಾಗ ನೋಂದಣಿ ಕಾಯ್ದೆ 1908ಕ್ಕೆ ಸೂಕ್ತ ತಿದ್ದುಪಡಿ ತಂದು ಆನಂತರ ಜಾರಿಗೆ ತರಬೇಕೆಂದು ಅಭಿಪ್ರಾಯ ನೀಡಿತ್ತು. ಆದರೂ ಬೆಂಗಳೂರು ನಗರದಲ್ಲಿ ಜಾರಿಗೆ ತರಲಾಯಿತು. ರಾಜ್ಯವ್ಯಾಪ್ತಿ ವಿಸ್ತರಿಸುವ ಚಿಂತನೆಯನ್ನು ಕಂದಾಯ ಇಲಾಖೆ ಮುಂದೂಡಿತು. ಇದೀಗ ಕಾನೂನಿಗೆ ತಿದ್ದುಪಡಿ ತರದೇ ರಾಜ್ಯವ್ಯಾಪ್ತಿ ವಿಸ್ತರಿಸಲು ಮುಂದಾಗಿದೆ.

ಬೇಕೇ ಬೇಕು ತಂತ್ರಜ್ಞಾನದ ನೆರವು: ಪ್ರತಿಯೊಂದು ಆಸ್ತಿಗೂ ಯೂನಿಕ್ ನಂಬರ್ ನೀಡಿ ಸ್ವತ್ತಿನ ಮಾಲೀಕರಿಗೆ ಎಟಿಎಂ ಕಾರ್ಡ್ ನೀಡಬೇಕು. ಆ ಕಾರ್ಡ್ ಸ್ಪೈಪ್ ಮಾಡಿದಾಗ ಆಸ್ತಿಯ ವಿವರ ಬರಬೇಕು. ಒಮ್ಮೆ ಆಸ್ತಿ ನೋಂದಣಿ ಆದರೆ ಆನ್​ಲೈನ್​ನಲ್ಲಿ ಮಾಹಿತಿ ಸುಲಭವಾಗಿ ಸಿಗುವಂತೆ ಆಗಬೇಕು. ಅಕ್ರಮದಲ್ಲಿ ಭಾಗಿಯಾಗುವ ಅಧಿಕಾರಿ, ಸಿಬ್ಬಂದಿ ಮತ್ತು ಭೂಗಳ್ಳರನ್ನು ಪತ್ತೆ ಮಾಡಿ ಕಠಿಣ ಕ್ರಮ ಜರುಗಿಸಬೇಕು ಅಂದಾಗ ಅಕ್ರಮ ತಡೆಗಟ್ಟಲು ಸಾಧ್ಯ ಎಂಬುದು ತಜ್ಞರ ಸಲಹೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net