ನೌಕ್ರಿ ಹೆಸರಲ್ಲಿ ಮಕ್ಮಲ್ ಟೋಪಿ: ಸರ್ಕಾರಿ ಕೆಲಸದ ಆಮಿಷ, ಲಕ್ಷ ಲಕ್ಷ ವಂಚನೆ; ತಿಂಗಳಿಗೆ 8 ಕೇಸ್..

Job
Published on

| ಅವಿನಾಶ ಮೂಡಂಬಿಕಾನ ಬೆಂಗಳೂರು

ಕರೊನಾ ಸಂಕಷ್ಟದ ಕಾಲದಲ್ಲಿ ಉದ್ಯೋಗ ಕಳೆದುಕೊಂಡ ಲಕ್ಷಾಂತರ ಜನರು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಸಂದರ್ಭದಲ್ಲೇ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಹಾಗೂ ಸರ್ಕಾರಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಅಮಾಯಕರಿಗೆ ಟೋಪಿ ಹಾಕುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಮಿತಿಮೀರಿವೆ. ಪ್ರತಿ ತಿಂಗಳು ಕನಿಷ್ಠ 8 ಪ್ರಕರಣಗಳು ಠಾಣೆ ಮೆಟ್ಟಿಲೇರುತ್ತಿರುವುದು ಖಾಕಿಪಡೆಗೂ ತಲೆಬೇನೆ ತರಿಸಿದೆ.

ಪೊಲೀಸ್ ಮೂಲಗಳ ಪ್ರಕಾರ ನೌಕರಿ ಹೆಸರಿನಲ್ಲಿ ಪ್ರತಿನಿತ್ಯ ನೂರಾರು ವಂಚನೆ ಪ್ರಕರಣಗಳು ನಡೆಯುತ್ತವೆಯಾದರೂ ಪೊಲೀಸ್ ತನಿಖೆ, ಹಣ ಪಡೆದವರ ಬೆದರಿಕೆ, ಕೋರ್ಟ್​ಗೆ ಅಲೆದಾಡ ಬೇಕೆಂಬ ಭಯದಲ್ಲಿ ಮೋಸ ಹೋದವರಲ್ಲಿ ಬಹುತೇಕರು ದೂರನ್ನೇ ದಾಖಲಿಸುವುದಿಲ್ಲ. ಇದು ವಂಚಕರಿಗೆ ವರದಾನವಾಗಿರುವುದರಿಂದಲೇ ಬೆರಳೆಣಿಕೆ ಕೇಸ್​ಗಳು ವರದಿ ಯಾಗುತ್ತಿವೆ. ಲೋಕೋಪಯೋಗಿ, ಇಂಧನ, ಸಿಬಿಐ, ಐಟಿ ಸೇರಿ ವಿವಿಧ ಸರ್ಕಾರಿ ಇಲಾಖೆಗಳ ನಕಲಿ ವೆಬ್​ಸೈಟ್​ಗಳನ್ನು ಸೃಷ್ಟಿಸಿ ವಂಚಿಸುತ್ತಿರುವ ದುಷ್ಕರ್ವಿುಗಳು, ಇತ್ತೀಚೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹೆಸರಿನಲ್ಲೂ ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಅವರು ಡಿಜಿಪಿ ಪ್ರವೀಣ್ ಸೂದ್​ಗೆ ದೂರು ನೀಡಿ, ಆರೋಪಿಗಳನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ. ಐಪಿಸಿ ಸೆಕ್ಷನ್ 420 ಪ್ರಕಾರ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾದರೆ 7 ವರ್ಷ ಜೈಲು ಹಾಗೂ ದಂಡ ವಿಧಿಸಲು ಅವಕಾಶವಿದೆ. ಇನ್​ಫರ್ವೆಶನ್ ಟೆಕ್ನಾಲಜಿ ಕಾಯ್ದೆ 2000- 66 (ಸಿ), 66 (ಡಿ) ಪ್ರಕಾರ 3 ವರ್ಷ ಜೈಲು, ಗರಿಷ್ಠ 1 ಲಕ್ಷ ರೂ. ದಂಡ ವಿಧಿಸಲು ಅವಕಾಶಗಳಿವೆ.

376 ನೌಕರಿ ವೆಬ್​ಸೈಟ್: ಅಂದಾಜಿನ ಪ್ರಕಾರ ದೇಶಾದ್ಯಂತ 376ಕ್ಕೂ ಅಧಿಕ ನೌಕರಿ ವೆಬ್​ಸೈಟ್​ಗಳಿವೆ. ಉದ್ಯೋಗಕ್ಕಾಗಿ ಸಲ್ಲಿಸುವ ಅರ್ಜಿಗಳಲ್ಲಿರುವ ವಿವರ ಕದಿಯುವ ವಂಚಕರು, ಅಭ್ಯರ್ಥಿಗಳಿಗೆ ಕರೆ ಮಾಡಿ ಉದ್ಯೋಗ ಕೊಡಿಸುವ ಆಸೆ ಹುಟ್ಟಿಸಿ, ಶುಲ್ಕದ ಹೆಸರಲ್ಲಿ ಹಣ ಕಟ್ಟಿಸಿಕೊಂಡು ಮೋಸ ಮಾಡುತ್ತಾರೆ.

ಈ ಬಗ್ಗೆ ಎಚ್ಚರವಿರಲಿ

  • ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮುನ್ನ ವೆಬ್​ಸೈಟ್ ಅಸಲಿಯೇ, ಕಂಪನಿ ಅಸಲಿಯೇ ಪರಿಶೀಲಿಸಿ
  • ಮೊಬೈಲ್ ಕರೆ ಮಾಡಿ ಅಥವಾ ಸಂದೇಶ ಕಳುಹಿಸಿ ಕೆಲಸದ ಆಫರ್ ಕೊಡುವವರ ಬಗ್ಗೆ ನಂಬಬೇಡಿ
  • ಸಾಮಾಜಿಕ ಜಾಲತಾಣ, ಇತರೆಡೆ ಬರುವ ಜಾಹೀರಾತಿನ ಸತ್ಯಾಸತ್ಯತೆ ಏನೆಂದು ಪರಿಶೀಲಿಸಿ
  • ಶುಲ್ಕದ ಹೆಸರಲ್ಲಿ ಯಾವ ಕಂಪನಿಯೂ ಹಣ ಕೇಳುವುದಿಲ್ಲ. ಹಣ ಕೇಳಿದರೆ ಅನುಮಾನವಿರಲಿ
  • ಸರ್ಕಾರಿ ಉದ್ಯೋಗದ ಬಗ್ಗೆ ಆಯಾ ಇಲಾಖೆಯ ಅಧಿಕೃತ ವೆಬ್​ಸೈಟ್​ನಲ್ಲೇ ಮಾಹಿತಿ ಇರುತ್ತದೆ
  • ಸರ್ಕಾರಿ ಕೆಲಸ ಕೊಡಿಸುವುದಾಗಿ ಯಾರಾದರೆ ಹೇಳಿದರೆ ನಂಬಬೇಡಿ, ಅಧಿಕಾರಿಗಳ ವಿಚಾರಿಸಿ

ಇತ್ತೀಚೆಗಿನ ವಂಚನೆ ಪ್ರಕರಣ

ಪಾರ್ಟ್ ಟೈಂ ಕೆಲಸಕ್ಕೆ 2.35 ಲಕ್ಷ!: ರಾಮಮೂರ್ತಿ ನಗರ ನಿವಾಸಿ ಕೋಮಲ ಎಂಬುವರಿಗೆ ಆ.18ರಂದು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಪಾರ್ಟ್ ಟೈಂ ಕೆಲಸ ಕೊಡಿಸುವುದಾಗಿ 2.35 ಲಕ್ಷ ರೂ. ಹಾಕಿಸಿಕೊಂಡು ವಂಚಿಸಿದ್ದಾರೆ.

2.5 ಕೋಟಿ ಮೋಸ: 2020 ನವೆಂಬರ್​ನಲ್ಲಿ ಚಿಕ್ಕಮಗಳೂರಿನಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಿರುದ್ಯೋಗಿಗಳನ್ನು ನಂಬಿಸಿ 2.5 ಕೋಟಿ ರೂ. ವಂಚಿಸಲಾಗಿತ್ತು. ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ ನಕಲಿ ಅಧಿಕಾರಿಯನ್ನು ಬಂಧಿಸಲಾಗಿದೆ.

ವಿಧಾನಸೌಧದಲ್ಲಿ ಕೆಲಸದ ಆಸೆ: ಸಚಿವ ಶ್ರೀರಾಮುಲು ಹೆಸರು ಹೇಳಿಕೊಂಡು ವಿಧಾನಸೌಧದಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಸ್ನೇಹಿತನಿಂದಲೇ ಲಕ್ಷಾಂತರ ರೂ. ಪಡೆದು ವಂಚಿಸಿದ್ದ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿತ್ತು.

ವಂಚನೆ ಹೇಗೆ?

  • ಉದ್ಯೋಗಾವಕಾಶ ಇರುವುದಾಗಿ ನಕಲಿ ವೆಬ್​ಸೈಟ್ ಸೃಷ್ಟಿಸಿ ಜಾಹೀರಾತು ಕೊಡುವುದು, ಐಟಿ, ಸಿಬಿಐ, ಪೊಲೀಸ್ ಸೇರಿ ಇಲಾಖೆ ಹೆಸರಲ್ಲಿ ವೆಬ್​ಸೈಟ್ ಸೃಷ್ಟಿ
  • ನೋಂದಣಿ, ಸಂದರ್ಶನ ಶುಲ್ಕವೆಂದು ಹಣ ಕಟ್ಟಿಸಿಕೊಂಡು ನಾಪತ್ತೆ
  • ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ತಾತ್ಕಾಲಿಕವಾಗಿ ಏಜೆನ್ಸಿ ಕಚೇರಿ ಸ್ಥಾಪನೆ
  • ಇಂಟರ್​ವ್ಯೂ ಹೆಸರಲ್ಲಿ ಅಭ್ಯರ್ಥಿ ಕರೆಸಿಕೊಂಡು, ಹಣ ಪಡೆದು ಪರಾರಿ
  • ಉದ್ಯೋಗಕ್ಕೆ ಹಾಕಿದ ಅರ್ಜಿ ವಿವರ ಪಡೆಯುವ ವಂಚಕರು, ಅಭ್ಯರ್ಥಿಗಳಿಗೆ
  • ಕರೆ ಮಾಡಿ ಆಮಿಷ
  • ಬ್ಯಾಂಕ್, ಸಾಫ್ಟ್​ವೇರ್ ಕಂಪನಿ, ಹೊರರಾಜ್ಯದ ದೊಡ್ಡ ಕಾರ್ಖಾನೆಗಳಲ್ಲಿ ಕೆಲಸಕೊಡಿಸುವ ನಕಲಿ ಭರವಸೆ
  • ವಿದೇಶದಲ್ಲಿ ಚಾಲಕ, ಹೋಟೆಲ್​ಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ದಾಖಲೆ ಪಡೆದು ಹಣಕ್ಕೆ ಬೇಡಿಕೆ

ಒಂದೇ ವರ್ಷ 4699 ಕೇಸ್: 2020ರಲ್ಲಿ ಕರ್ನಾಟಕದಲ್ಲಿ 4,699 ವಂಚನೆ (420) ಪ್ರಕರಣಗಳು ವರದಿಯಾಗಿವೆ. ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ 4,08,915 ವಂಚನೆ ಕೇಸ್​ಗಳು ದಾಖಲಾಗಿವೆ. ಇವುಗಳಲ್ಲಿ ಉದ್ಯೋಗದ ಆಮಿಷಕ್ಕೊಳಗಾಗಿ ಲಕ್ಷಾಂತರ ರೂ. ಹಣ ಕಳೆದುಕೊಂಡ ಪ್ರಕರಣಗಳೇ ಅಂದಾಜು ಶೇ.18ರಷ್ಟಿದೆ ಎಂಬುದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ (ಎನ್​ಸಿಆರ್​ಬಿ) ಅಂಕಿ-ಅಂಶಗಳಿಂದ ದೃಢಪಟ್ಟಿದೆ. ರಾಜ್ಯದಲ್ಲಿ 2018ರಲ್ಲಿ 6,691, 2019ರಲ್ಲಿ 6,321 ಹಾಗೂ 2020ರಲ್ಲಿ 4,699 ಸೇರಿ ಒಟ್ಟು 17,711 ವಂಚನೆ ಕೇಸ್​ಗಳು ದಾಖಲಾಗಿವೆ.

ಇತ್ತೀಚಿನ ಪ್ರಕರಣ

1. 1.15 ಲಕ್ಷ ರೂಪಾಯಿ ಕೊಟ್ಟ ಲೇಡಿ: ಕೋರಮಂಗಲ ನಿವಾಸಿ ಶ್ರೀಲಿಯಾಗೆ ಇತ್ತೀಚೆಗೆ ಕರೆ ಮಾಡಿದ್ದ ಅಪರಿಚಿತರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕೌಂಟೆಂಟ್ ಕೆಲಸಕ್ಕೆ ಆಯ್ಕೆ ಆಗಿರುವುದಾಗಿ ಹೇಳಿದ್ದರು. ರಿಜಿಸ್ಟ್ರೇಷನ್ ಚಾರ್ಜ್ ಸರ್ವೀಸ್ ಎಂದು ಹೇಳಿ 1.15 ಲಕ್ಷ ರೂ. ಪಡೆದು ಮೋಸ ಮಾಡಿದ್ದಾರೆ.

2. ಡಿ ದರ್ಜೆ ಕೆಲಸಕ್ಕೆ 2 ಲಕ್ಷ ರೂ.: ಹುಬ್ಬಳ್ಳಿಯ ಎಎಸ್​ಐ ಪುತ್ರನಿಗೆ ರೈಲ್ವೆ ಇಲಾಖೆಯಲ್ಲಿ ಡಿ ದರ್ಜೆ ನೌಕರಿ ಕೊಡುವುದಾಗಿ ನಂಬಿಸಿದ್ದ ವ್ಯಕ್ತಿಯೊಬ್ಬ 2 ಲಕ್ಷ ರೂ. ಪಡೆದು ವಂಚಿಸಿದ್ದ.

ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವಂಚನೆಗೆ ಒಳಗಾಗಿದ್ದರೆ ಧೈರ್ಯವಾಗಿ ದೂರು ದಾಖಲಿಸಿ.

| ಕಮಲ್ ಪಂತ್ ಬೆಂಗಳೂರು ಪೊಲೀಸ್ ಆಯುಕ್ತ

ಸ್ಕೌಟ್ಸ್ ಆಂಡ್ ಗೈಡ್ಸ್ ಹೆಸರಲ್ಲಿ ಧೋಖಾ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧಿಕೃತ ಮತ್ತು ನುರಿತ ತರಬೇತುದಾರರಿಂದ ರಾಜ್ಯದಲ್ಲಿ ಲಕ್ಷಾಂತರ ಜನ ಕಬ್ಸ್-ಬುಲ್ಸ್/ಸ್ಕೌಟ್ಸ್-ಗೈಡ್ಸ್/ರೋವರ್ಸ್-ರೇಂಜರ್ಸ್ ತರಬೇತಿ ಪಡೆದಿದ್ದಾರೆ. ಇಂಥಹವರಿಗೆ ರಾಜ್ಯಪಾಲರಿಂದ ರಾಜ್ಯ ಪುರಸ್ಕಾರ ಹೆಸರಿನಲ್ಲಿ ಪ್ರಮಾಣ ಪತ್ರ ವಿತರಿಸಲಾಗುತ್ತದೆ. ಸರ್ಕಾರಿ ಉದ್ಯೋಗ, ಉನ್ನತ ವ್ಯಾಸಂಗ ಪ್ರವೇಶಾತಿಯಲ್ಲಿ ಈ ಪ್ರಮಾಣ ಪತ್ರಗಳಿಗೆ ಮಾನ್ಯತೆ ಸಿಗುತ್ತದೆ. ಇದನ್ನು ದುರುಪಯೋಗಪಡಿಸಿಕೊಂಡಿರುವ ವಂಚಕರು, ಬೆಳಗಾವಿ, ಬಾಗಲಕೋಟೆ, ಹಾವೇರಿ, ಶಿರಸಿ, ಕಾರವಾರ, ಶಿವಮೊಗ್ಗ ಮತ್ತಿತರರ ಕಡೆ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಸಂಸ್ಥೆಯ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಆಮಿಷ ಒಡ್ಡಿದ್ದರು.

ನ್ಯಾಷನಲ್ ಸ್ಕೌಟ್ಸ್ ಆಂಡ್ ಗೈಡ್ಸ್ ಆರ್ಗನೈಸೇಶನ್ ಮತ್ತು ಇತರೆ ಸಂಸ್ಥೆಗಳ ಹೆಸರಿನಲ್ಲಿ ಸುಳ್ಳು ಜಾಹೀರಾತು ನೀಡುತ್ತಿದ್ದಾರೆ. ಉದ್ಯೋಗ ಕೊಡಿಸಲು ವಿವಿಧ ರೀತಿಯ ಶುಲ್ಕದ ಹೆಸರಿನಲ್ಲಿ ಲಕ್ಷಾಂತರ ರೂ. ವಸೂಲಿ ಮಾಡುತ್ತಿದ್ದಾರೆ. ಸ್ಕೌಟ್ ಮಾಸ್ಟರ್ ಹುದ್ದೆಗೆ ತಿಂಗಳಿಗೆ 35 ಸಾವಿರ ರೂ., ಅಸಿಸ್ಟೆಂಟ್ ಸ್ಕೌಟ್ ಮಾಸ್ಟರ್ ಹುದ್ದೆಗೆ 28 ಸಾವಿರ ರೂ. ಕೊಡುವುದಾಗಿ ಜಾಹೀರಾತಿನಲ್ಲಿ ನಂಬಿಸಿದ್ದಾರೆ.

ವಂಚಕರ ಜಾಹೀರಾತಿಗೆ ಮರುಳಾಗಿ ಇಬ್ಬರು ಅಭ್ಯರ್ಥಿಗಳು ತಲಾ 1 ಲಕ್ಷ ರೂ. ಕಳೆದುಕೊಂಡಿರುವುದು ಗಮನಕ್ಕೆ ಬಂದಿದೆ. ನಮ್ಮ ಸಂಸ್ಥೆಯಿಂದ ಇಂತಹ ಹುದ್ದೆಗಳಿಗೆ ಜಾಹೀರಾತು ಆಹ್ವಾನಿಸಿರುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದೇನೆ.

| ಪಿ.ಜಿ.ಆರ್.ಸಿಂಧ್ಯ , ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net