ಜನಧನ್ ಖಾತೆಗಳಿಗೆ ಕನ್ನ: 6 ಸಾವಿರ ಕೋಟಿ ರೂ. ಅಕ್ರಮ ವರ್ಗಾವಣೆ ಶಂಕೆ, ಎಚ್​ಡಿಕೆ ಅನುಮಾನ..

Jan Dhan
Published on

ಬೆಂಗಳೂರು: ಜನಧನ್ ಖಾತೆಗಳಿಂದ ತಲಾ 2 ರೂಪಾಯಿ ಲೆಕ್ಕದಲ್ಲಿ ಸುಮಾರು 6,000 ಕೋಟಿ ರೂ. ಅನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವ ಮಾಹಿತಿ ಇದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಜನತಾ ಪರ್ವ 2ನೇ ಹಂತದ ಕಾರ್ಯಗಾರ ‘ಜನತಾ ಸಂಗಮ’ದ 4ನೇ ದಿನ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮ ದವರೊಂದಿಗೆ ಎಚ್​ಡಿಕೆ ಮಾತನಾಡಿ, ಇಷ್ಟು ಹಣದ ಅಕ್ರಮ ವರ್ಗಾವಣೆ ಹಿಂದೆ ಯಾರು ಇದ್ದಾರೆ ಎನ್ನುವ ಮಾಹಿತಿ ಜನರಿಗೆ ಗೊತ್ತಾಗಬೇಕಿದೆ ಎಂದರು.

ಜಾಮೀನು ಸಿಕ್ಕಿದ್ದು ಹೇಗೆ?: ಬಿಟ್ ಕಾಯಿನ್ ಹಗರಣದ ಮುಖ್ಯ ಆರೋಪಿಗೆ ಜಾಮೀನು ಕೊಡಲು ಖಾತರಿ ಕೊಟ್ಟಿದ್ದು ಯಾರು? ಆತನ ಪರ ವಾದ ಮಂಡಿಸಿದ ವಕೀಲರು ಯಾರು? ಆರೋಪಿ ಜೈಲಿನಿಂದ ಹೊರಬಂದ ನಂತರ ಮಾಧ್ಯಮದವರ ಜತೆ ಮಾತನಾಡುತ್ತಾನೆ. ನಂತರ ಆಟೋ ಹತ್ತಿ ಹೋಗುತ್ತಾನೆ. ಇದೆಲ್ಲ ನೋಡಿದರೆ ಅದರ ಹಿಂದೆ ಯಾರೋ ಇರುವುದು ಸ್ಪಷ್ಟ ಎಂದ ಎಚ್​ಡಿಕೆ, ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಕಠಿಣ ಕ್ರಮ ಕೈಗೊಂಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಹೇಳಿದರು. ಪ್ರಧಾನ ಮಂತ್ರಿಯವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಅವರಿಗೆ ಮುಜುಗರ ಅಗಿರುವ ಕಾರಣಕ್ಕೆ ಇಡೀ ಪ್ರಕರಣವನ್ನು ಅವರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ ಎಂದರು.

ಕಾಂಗ್ರೆಸ್ ನಾಯಕರು ನಮ್ಮ ಚೀಲದಲ್ಲಿ ಹಾವಿದೆ. ಹೊರ ತೆಗೆಯುತ್ತೇವೆ ಎಂದು ಹಾರಿಕೆ ಮಾತನಾಡದೆ ಧೈರ್ಯದಿಂದ ಹೊರಗೆ ಬಿಡಲಿ, ಆಗ ಅದು ಯಾರನ್ನು ಕಚ್ಚುತ್ತದೆ ನೋಡೋಣ.

| ಆರಗ ಜ್ಞಾನೇಂದ್ರ ಗೃಹ ಸಚಿವ

ಪ್ರಭಾವಿಗಳಿದ್ದರೂ ಬಿಡೆವು

ದಾವಣಗೆರೆ: ಬಿಟ್ ಕಾಯಿನ್ ಹಗರಣದಲ್ಲಿ ಯಾರೇ ಪ್ರಭಾವಿಗಳಿದ್ದರೂ ತನಿಖೆ ಆಗಲಿದೆ. ತಪ್ಪಿತಸ್ಥರನ್ನು ಕೈಬಿಡುವ ಮಾತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಪ್ರಕರಣದಲ್ಲಿ ಬಿಜೆಪಿಯವರು ಭಾಗಿಯಾಗಿದ್ದಾರೆಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡರು ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ. ಕಾಂಗ್ರೆಸ್ಸಿಗರೇ ಹಗರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ನಮ್ಮ ಬಳಿಯೂ ದಾಖಲೆ ಇದೆ

ಬೆಂಗಳೂರು: ಹಳೇ ಪ್ರಕರಣ ಇಟ್ಟುಕೊಂಡು ಕಾಂಗ್ರೆಸ್ ನಾಯಕರ ಘನತೆ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ನಮ್ಮ ಬಳಿಯೂ ಬಿಟ್ ಕಾಯಿನ್​ಗೆ ಸಂಬಂಧಿಸಿದ ಕೆಲವು ಮಾಹಿತಿಗಳಿವೆ. ಸೂಕ್ತ ಸಮಯದಲ್ಲಿ ಮಾತನಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ತಮ್ಮ ನಾಯಕರ ಹೆಸರು ಮುಚ್ಚಿಟ್ಟು ಕಾಂಗ್ರೆಸ್ ನಾಯಕರ ಹೆಸರು ತಳುಕು ಹಾಕಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಮಕ್ಕಳು ಭಾಗಿಯಾಗಿದ್ದರೆ, ಅವರನ್ನು ಬಂಧಿಸಲು ತಡ ಮಾಡುತ್ತಿರುವುದೇಕೆ? ಕೂಡಲೇ ಬಂಧಿಸಲಿ. ಅವರು ಯಾವ ರೀತಿ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಿ. ಆರೋಪಿ ಸ್ನೇಹಿತನಾಗಿದ್ದ ಮಾತ್ರಕ್ಕೆ ಪ್ರಕರಣದಲ್ಲಿ ಸಿಲುಕಿಸಲು ಸಾಧ್ಯವಿಲ್ಲ ಎಂದರು.

ನನ್ನ ಮಗ ಆರೋಪಿಯಲ್ಲ

ರಾಣೆಬೆನ್ನೂರ: ದರ್ಶನ್ ಲಮಾಣಿ ನನ್ನ ಸ್ನೇಹಿತ ಎಂದು ಬಿಟ್ ಕಾಯಿನ್ ದಂಧೆಯ ಶ್ರೀಕಿ ಹೇಳಿಕೆ ನೀಡಿದ್ದಾನೆ. ಆದರೆ, ಆತನ ಸ್ನೇಹಿತ ಎಂದ ಮಾತ್ರಕ್ಕೆ ನನ್ನ ಮಗ ದರ್ಶನ್ ದಂಧೆಯಲ್ಲಿ ಇದ್ದಾನೆ ಎಂದರ್ಥವಲ್ಲ. ನನಗೂ, ನನ್ನ ಮಗನಿಗೂ ಬಿಟ್ ಕಾಯಿನ್ ಅಂದ್ರೇನೆ ಗೊತ್ತಿಲ್ಲ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು. ನನ್ನ ಮಗನ ಮೇಲೆ 2020ರಲ್ಲಿ ಮಾದಕ ದ್ರವ್ಯ ಮಾರಾಟದ ಕುರಿತು ಪ್ರಕರಣ ದಾಖಲಾಗಿತ್ತು. ಆಗ ಒಬ್ಬ ದರ್ಶನ್​ನನ್ನು ಗೋವಾಕ್ಕೆ ಕರೆದುಕೊಂಡು ಹೋಗಿದ್ದರು. ಈ ಸಮಯದಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದರು. ನಂತರ ಜಾಮೀನು ಪಡೆದು ಹೊರಬಂದಿದ್ದಾನೆ. ಆದರೆ, ಬಿಟ್ ಕಾಯಿನ್ ಬಗ್ಗೆ ಯಾರೂ ನಮ್ಮನ್ನು ಸಂರ್ಪಸಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net