

ಪ್ಯಾರಿಸ್: ಫ್ರಾನ್ಸ್ನಲ್ಲಿ ಇಂದು (ಸೆ.10) ಹಿಂಸಾಚಾರ ಭುಗಿಲೆದ್ದಿದ್ದು, ಪ್ರತಿಭಟನಾಕಾರರು ರಸ್ತೆಗಳನ್ನು ತಡೆದು ಬೆಂಕಿ ಹಚ್ಚಿ ತಮ್ಮ ನೂತನ ಪ್ರಧಾನಿಗೆ ಅಗ್ನಿಸ್ಪರ್ಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ 200 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಫ್ರಾನ್ಸ್ನ ಆಂತರಿಕ ಸಚಿವರು ಮಾಹಿತಿ ನೀಡಿದ್ದಾರೆ.
ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೇವಲ 24 ಗಂಟೆಗಳ ಹಿಂದೆ ದೇಶದ ಹೊಸ ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ಅವರನ್ನು ನೇಮಿಸಿದ ಸಮಯದಲ್ಲಿ ಈ ಹಿಂಸಾತ್ಮಕ ಚಳುವಳಿ ಆರಂಭವಾಗಿದೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ನಾಯಕತ್ವ ಮತ್ತು ಕಠಿಣ ನೀತಿಗಳ ಬಗ್ಗೆ ಕೋಪಗೊಂಡಿರುವ ಪ್ರತಿಭಟನಾಕಾರರು, ದೇಶಾದ್ಯಂತ ರೊಚ್ಚಿಗೆದ್ದಿದ್ದಾರೆ. 'ಬ್ಲಾಕ್ ಎವ್ರಿಥಿಂಗ್' ಎಂಬ ಹೆಸರಿನೊಂದಿಗೆ ಪ್ರಾರಂಭವಾದ ಈ ಅಭಿಯಾನವು ಇಡೀ ದೇಶದಲ್ಲಿ ಸಾರಿಗೆ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದೆ. ಪೊಲೀಸರು ಅವರನ್ನು ಚದುರಿಸಲು ಅಶ್ರುವಾಯು ಶೆಲ್ಗಳನ್ನು ಪ್ರಯೋಗಿಸಿದರು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
(ಏಜೆನ್ಸೀಸ್)
ಪಶ್ಚಿಮ ನಗರವಾದ ರೆನ್ನೆಸ್ನಲ್ಲಿ ಬಸ್ಗೆ ಬೆಂಕಿ ಹಚ್ಚಲಾಗಿದ್ದು, ನೈಋತ್ಯದಲ್ಲಿ ವಿದ್ಯುತ್ ತಂತಿಗೆ ಹಾನಿಯಾಗಿ ರೈಲುಗಳು ಸ್ಥಗಿತಗೊಂಡಿವೆ ಎಂದು ಆಂತರಿಕ ಸಚಿವ ಬ್ರೂನೋ ರಿಟೇಲಿಯು ಹೇಳಿದ್ದಾರೆ. ಪ್ರತಿಭಟನಾಕಾರರು ದಂಗೆಯ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.