

India: ಕತಾರ್ ರಾಜಧಾನಿ ದೋಹಾದ ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದೋಹಾ ವಾಯುದಾಳಿಗಳ ಬಗ್ಗೆ ಭಾರತ ಮಂಗಳವಾರ (ಸೆಪ್ಟೆಂಬರ್,10) ಕಳವಳ ವ್ಯಕ್ತಪಡಿಸಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ಸಚಿವಾಲಯವು, ದೋಹಾದ ಮೇಲೆ ಇಸ್ರೇಲಿ ದಾಳಿಗಳ ಬಗ್ಗೆ ಇಂದು ಮುಂಜಾನೆ ವರದಿಗಳನ್ನು ನಾವು ನೋಡಿದ್ದೇವೆ. ಈ ಬೆಳವಣಿಗೆ ಮತ್ತು ಈ ಪ್ರದೇಶದ ಭದ್ರತಾ ಪರಿಸ್ಥಿತಿಯ ಮೇಲೆ ಬೀರುವ ಪರಿಣಾಮದ ಬಗ್ಗೆ ನಾವು ತೀವ್ರ ಕಳವಳಗೊಂಡಿದ್ದೇವೆ ಎಂದು MEA ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಲ್ಲದೆ, ಈ ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಭದ್ರತೆಗೆ ಅಪಾಯವಾಗದಂತೆ ಸಂಯಮ ಮತ್ತು ರಾಜತಾಂತ್ರಿಕತೆಯನ್ನು ಕಾಪಡಿಕೊಳ್ಲುವಂತೆ ಸಚಿವಾಲಯ ಬಲವಾಗಿ ಒತ್ತಾಯಿಸಿದೆ.
ಈ ದಾಳಿಗಳು ಗಾಜಾ ಪಟ್ಟಿಯ ಇಚೆಗೆ ಹಮಾಸ್ ವಿರುದ್ಧ ಇಸ್ರೇಲ್ ಮಿಲಿಟರಿ ನಡೆಸಿದ ದಾಳಿಯಾಗಿದೆ. ದೋಹಾದಲ್ಲಿ ನಡೆಯಬೇಕಿದ್ದ ಕದನ ವಿರಾಮದ ಕುರಿತಾದ ಮಾತುಕತೆಗಳು ಸ್ಥಗಿತಗೊಂಡಿವೆ. ಹಮಾಸ್‌ನ ರಾಜಕೀಯ ನಾಯಕತ್ವವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಈ ಕಾರ್ಯಾಚರಣೆ ಹೊಂದಿದೆ ಎಂದು ಇಸ್ರೇಲ್ ತಿಳಿಸಿದ್ದಾರೆ.
ಈ ದಾಳಿಯನ್ನು ಕತಾರ್ ತೀವ್ರವಾಗಿ ಖಂಡಿಸಿದ್ದು, ಇದನ್ನು ತನ್ನ ರಾಜಧಾನಿಯಲ್ಲಿರುವ ಹಮಾಸ್‌ನ ರಾಜಕೀಯ ಪ್ರಧಾನ ಕಚೇರಿಯ ಮೇಲೆ ಹೇಡಿತನದ ಇಸ್ರೇಲ್ ದಾಳಿ ಎಂದು ಹೇಳಿದೆ. ಈ ದಾಳಿಯು ಎಲ್ಲಾ ಅಂತರರಾಷ್ಟ್ರೀಯ ಕಾನೂನುಗಳು ಮತ್ತು ಮಾನದಂಡಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕತಾರ್ನ ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್-ಅನ್ಸಾರಿ ಖಂಡಿಸಿದ್ದಾರೆ. (ಏಜೆನ್ಸೀಸ್)