ಚಳಿಗಾಲದ ಈ ಚಳಿಯಲ್ಲಿ ಐಸ್​ನಲ್ಲಿ ಗಂಟೆಗಟ್ಟಲೆ ಕುಳಿತ ಭೂಪ! ಕಾರಣ ಕೇಳಿದರೆ ಶಹಬ್ಬಾಸ್​ ಎನ್ನುತ್ತೀರಿ!

ice
Published on

ಪ್ಯಾರಿಸ್​: ಈ ವರ್ಷ ಚಳಿ ಸ್ವಲ್ಪ ಹೆಚ್ಚಾಗೇ ಇದೆ. ಈ ಚಳಿಗೆ ಮನೆಯೊಳಗೆ ಬೆಚ್ಚಗೆ ಕುಳಿತು, ಬಿಸಿ ಬಿಸಿ ಚಹಾ ಕುಡಿಯೋಣ ಎನಿಸೋದ ಸಹಜ. ಆದರೆ ಇಲ್ಲೊಬ್ಬ ಮನುಷ್ಯ ಮಾತ್ರ ಇದೆಲ್ಲದರಿಂದ ವಿರುದ್ಧ ಹೋಗಿ, ಈ ಚಳಿಯಲ್ಲಿ ಐಸ್​ನೊಳಗೇ ಗಂಟೆಗಟ್ಟಲೆ ಕುಳಿತಿದ್ದಾನೆ. ಈತ ಹೀಗೆ ಮಾಡಿರುವುದರ ಹಿಂದಿನ ಉದ್ದೇಶವನ್ನು ಕೇಳಿದರೆ ನೀವು ಶಹಬ್ಬಾಸ್​ ಎನ್ನುವುದು ಗ್ಯಾರಂಟಿ.

ಫ್ರಾನ್ಸ್​ನ ರೋಮನ್ ವಂಡೆಂಡೋರ್ಪ್ಈ ರೀತಿ ಐಸ್​ ಒಳಗೆ ಕುಳಿತ ಮನುಷ್ಯ. 34 ವರ್ಷದ ರೋಮನ್​ ಬರೋಬ್ಬರಿ 2 ಗಂಟೆ, 35 ನಿಮಿಷ, 43 ಸೆಕೆಂಡ್​ಗಳ ಕಾಲ ಐಸ್​ನಲ್ಲೇ ಕುಳಿತಿದ್ದಾನೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ಹೆಚ್ಚು ಹೊತ್ತು ಐಸ್​ನಲ್ಲಿ ಕುಳಿತ ಮನುಷ್ಯ ಎನ್ನುವ ದಾಖಲೆ ಬರೆದಿದ್ದಾನೆ. ಈ ಹಿಂದಿನ ದಾಖಲೆ ಬರೆದಿದ್ದವ ಈತನಿಗಿಂತ 40 ನಿಮಿಷಗಳ ಕಾಲ ಕಡಿಮೆ ಸಮಯ ಐಸ್​ನಲ್ಲಿ ಕುಳಿತಿದ್ದನಂತೆ.

ಈ ರೀತಿ ರೋಮನ್​ ಐಸ್​ನಲ್ಲಿ ಕೂರುವ ಹಿಂದೆ ಒಂದು ಬಲವಾದ ಕಾರಣವಿದೆ. ಕೆಲ ವರ್ಷಗಳ ಹಿಂದೆ ಈತ ಅಗಸ್ಟೀನ್ ಹೆಸರಿನ ಬಾಲಕಿಯನ್ನು ಭೇಟಿಯಾಗಿದ್ದ. ಆ ಬಾಲಕಿ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಎರಡು ವರ್ಷಗಳ ಹಿಂದೆ ಮೃತಳಾಗಿದ್ದಾಳೆ. ಆ ಮಗುವಿನ ನೆನಪಿನಲ್ಲೇ ವಂಡರ್ ಅಗಸ್ಟೀನ್ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಕ್ಯಾನ್ಸರ್​ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡಲು ಈ ಸಂಸ್ಥೆ ನೆರವಾಗುತ್ತಿದೆ. ಈ ಸಂಸ್ಥೆಗೆ ನೆರವಾಗುವ ಸಲುವಾಗಿಯೇ ರೋಮನ್​ ಐಸ್​ನಲ್ಲಿ ಕುಳಿತಿದ್ದನಂತೆ. ರೆಕಾರ್ಡ್​ ಮಾಡಿದ್ದರಿಂದಾಗಿ ಬಂದ ಹಣವನ್ನು ಈ ಸಂಸ್ಥೆಗೆ ನೀಡುವುದಾಗಿ ಆತ ತಿಳಿಸಿದ್ದಾನೆ.

ರೋಮನ್​ ಐಸ್​ನಲ್ಲಿ ಅಷ್ಟು ಹೊತ್ತಿನ ಕಾಲ ಕೂರಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ನಿಮಗೆ ಬಂದಿರಬಹುದು. ಈ ರೀತಿ ಐಸ್​ನೊಳಗೆ ಕೂರಲೆಂದೇ ರೋಮನ್​ ತರಬೇತಿ ಪಡೆದಿದ್ದನಂತೆ. ಮಿದುಳನ್ನು ಯಾವ ರೀತಿ ಕಂಟ್ರೋಲ್​ ಮಾಡಬಹುದು, ದೇಹಕ್ಕಾಗುವ ನೋವನ್ನು ನಿಯಂತ್ರಿಸುವುದು ಹೇಗೆ ಎನ್ನುವುದರ ತರಬೇತಿ ಪಡೆದು ನಂತರ ಈ ಪ್ರಯತ್ನ ಮಾಡಿದ್ದಾನಂತೆ. ತರಬೇತಿ ಒಂದಿದ್ದರೆ, ಪ್ರಪಂಚದಲ್ಲಿ ಯಾವುದೂ ಕಷ್ಟವಲ್ಲ ಎನ್ನುತ್ತಾನೆ ದಾಖಲೆ ಬರೆದ ರೋಮನ್​. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net