

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿಗೆ ಹಲವು ತಿಂಗಳುಗಳಿಂದ ಖಾಲಿ ಇದ್ದ ಸ್ಥಾನಗಳಿಗೆ ನಾಲ್ವರನ್ನು ನಾಮನಿರ್ದೇಶನ ಮಾಡುವ ಮೂಲಕ ರಾಜ್ಯ ಸರ್ಕಾರ ಇಂದು (ಸೆ.07) ಅಧಿಕೃತ ಆದೇಶ ಹೊರಡಿಸಿದೆ. ಕರ್ನಾಟಕ ವಿಧಾನ ಪರಿಷತ್ತಿಗೆ ನಾಲ್ಕು ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವ ಮೂಲಕ ಸರ್ಕಾರ ಕಳುಹಿಸಿದ ಪಟ್ಟಿಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.
ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಪ್ರಕಾಶ್ ಕೆ. ರಾಥೋಡ್ ಮತ್ತು ಯು.ಬಿ. ವೆಂಕಟೇಶ್ ಹಾಗೂ ಜೆಡಿಎಸ್ನ ಕೆ.ಎ ತಿಪ್ಪೇಸ್ವಾಮಿ ಅವರ ಅವಧಿ ಮುಕ್ತಾಯಗೊಂಡಿತ್ತು. ಉಪ ಚುನಾವಣಾ ದೃಷ್ಟಿಯಿಂದ ಸಿ.ಪಿ. ಯೋಗೇಶ್ವರ್ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಖಾಲಿಯಿದ್ದ ಆ ಸ್ಥಾನಗಳಿಗೆ ಸರ್ಕಾರ ನಾಮ ನಿರ್ದೇಶನ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ಆರತಿ ಕೃಷ್ಣ, ರಮೇಶ್ ಬಾಬು, ಜಕ್ಕಪ್ಪ ಹಾಗೂ ಪತ್ರಕರ್ತ ಶಿವಕುಮಾರ್ ರನ್ನು ವಿಧಾನ ಪರಿಷತ್ಗೆ ನಾಮ ನಿರ್ದೇಶನ ಮಾಡುವುದಕ್ಕೆ ಕಾಂಗ್ರೆಸ್ ಒಪ್ಪಿಗೆ ನೀಡಿತ್ತು. ಇವರುಗಳ ಹೆಸರನ್ನು ರಾಜ್ಯ ಸರ್ಕಾರ, ರಾಜ್ಯಪಾಲರಿಗೆ ಹಸ್ತಾಂತರಿಸಿತ್ತು. ಇದೀಗ ಈ ಪಟ್ಟಿಗೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಜಕ್ಕಪ್ಪ ಮತ್ತು ಆರತಿ ಕೃಷ್ಣ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕೋಟಾದ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದರೆ, ರಮೇಶ್ ಬಾಬು ಮತ್ತು ಪತ್ರಕರ್ತ ಶಿವಕುಮಾರ್ ಸಿಎಂ ಕೋಟಾದಿಂದ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿದೆ.
(ಏಜೆನ್ಸೀಸ್)