

ಬೆಂಗಳೂರು: ಬಾಲಮಂದಿರದಿಂದ (ರಿಮ್ಯಾಂಡ್ ಹೋಂ) ತಪ್ಪಿಸಿಕೊಂಡಿದ್ದ ನಾಲ್ವರು ಅಪ್ರಾಪ್ತರು ಮತ್ತೆ ಕಳ್ಳತನ ಕೃತ್ಯ ಎಸಗಿ ಪೀಣ್ಯ ಪೊಲೀಸರಿಗೆ ಸೆರೆಯಾಗಿದ್ದಾರೆ.
ಪೀಣ್ಯ ಸಮೀಪದ ಕೆಂಪಯ್ಯ ಗಾರ್ಡನ್ ಬಳಿ ಮಹಿಳೆಗೆ ಚಿನ್ನ ಸರ ಕಳವು ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಕಾನೂನು ಸಂಘರ್ಷಕ್ಕೊಳಗಾದವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಜು.9ರಂದು ದೇವನಹಳ್ಳಿ ಬಾಲಮಂದಿರದಿಂದ ಈ ನಾಲ್ವರು ತಪ್ಪಿಸಿಕೊಂಡಿದ್ದ ಸಂಗತಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಿಂದ 30 ಗ್ರಾಂ ಚಿನ್ನದ ಸರ, ಆಟೋ, 2 ಬೈಕ್‌ಗಳು ಸೇರಿದಂತೆ 4 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಬಾಲ ನ್ಯಾಯ ಮಂಡಳಿ ನ್ಯಾಯಾಧೀಶರ ಮುಂದೆ ಈ ಅಪ್ರಾಪ್ತರನ್ನು ಪೊಲೀಸರು ಹಾಜರುಪಡಿಸಿದ್ದರು.
ನ್ಯಾಯಾಧೀಶರ ಆದೇಶದ ಮೇರೆಗೆ ಬಾಲ ಮಂದಿರಕ್ಕೆ ಅಪ್ರಾಪ್ತರನ್ನು ಕಳುಹಿಸಲಾಗಿದೆ. ಕೆಲ ದಿನಗಳ ಹಿಂದೆ ಅಪರಾಧ ಪ್ರಕರಣದಲ್ಲಿ ಈ ನಾಲ್ವರನ್ನು ಬಂಧಿಸಿ ದೇವನಹಳ್ಳಿ ಬಾಲ ಮಂದಿರಕ್ಕೆ ಪೊಲೀಸರು ಕಳುಹಿಸಿದ್ದರು. ಜು.9ರಂದು ಬಾಲಮಂದಿರದ ಹಿಂಬಾಗಿಲ ಮೂಲಕ ತಪ್ಪಿಸಿಕೊಂಡು ಹೊರಬಂದ ಹಳೇ ಚಾಳಿ ಮುಂದುವರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಕರಿಗೂ ನೋಟಿಸ್
ಅಪ್ರಾಪ್ತ ಮಕ್ಕಳ ಪಾಲಕರಿಗೂ ಪೊಲೀಸರ ತನಿಖೆ ಬಿಸಿ ತಟ್ಟಿದೆ. ತಮ್ಮ ಮಕ್ಕಳು ಎಸಗಿದ ತಪ್ಪಿಗೆ ವಿಚಾರಣೆ ಬರುವಂತೆ ಪಾಲಕರಿಗೆ ಪೀಣ್ಯ ಪೊಲೀಸರು ನೋಟಿಸ್ ಜಾರಿಗೊಳಿಸಲು ಮುಂದಾಗಿದ್ದಾರೆ. ಮಕ್ಕಳ ಪಾಲನೆಯಲ್ಲಿ ನಿರ್ಲಕ್ಷ್ಯತನ ತೋರಿದ ಆರೋಪದ ಮೇರೆಗೆ ಪಾಲಕರಿಗೆ ಬಾಲ ಅಪರಾಧ ನ್ಯಾಯಿಕ ಕಾಯ್ದೆ (ಜೆ.ಜೆ.ಆಕ್ಟ್)ಯಡಿ ವಿಚಾರಣೆಗೆ ನೋಟಿಸ್ ಜಾರಿ ಮಾಡುವುದಾಗಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.