ತಮ್ಮ ಆಸೆ ಪೂರೈಸಿಕೊಳ್ಳಲು ಹೆತ್ತವರು ಕಣ್ಣೀರಾಕುವಂತೆ ಮಾಡಿದ ನಾಲ್ವರು ಅಪ್ರಾಪ್ತರು!

WhatsApp-Image-2024-03-15-at-6.56.01-PM
Published on

ಉತ್ತರಪ್ರದೇಶ: ನಾಲ್ವರು ಅಪ್ರಾಪ್ತ ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತೇವೆ ಎಂದು ಮನೆಬಿಟ್ವವರು ತದನಂತರ ಶಾಲೆಗೂ ಹೋಗದೆ, ಮನೆಗೂ ಹಿಂತಿರುಗದೆ ನಾಪತ್ತೆಯಾದ ಘಟನೆ ಉತ್ತರಪ್ರದೇಶದ ಔರೈಯಾದಲ್ಲಿ ವರದಿಯಾಗಿದೆ. ಮಕ್ಕಳ ಕಾಣೆಯ ಹಿಂದಿರುವ ಕಾರಣ ಕೇಳಿ ಒಮ್ಮೆ ಪೊಲೀಸರು ಶಾಕ್ ಆಗಿದ್ದು, ಹೆತ್ತವರು ಕೂಡ ತಲೆಮೇಲೆ ಕೈಯಿಟ್ಟು ಕುಪಿತಗೊಂಡಿದ್ದಾರೆ.

ಘಟನೆಯ ವಿವರ: ಬಹುದಿನಗಳಿಂದ ಚೌಮೈನ್​ ಎಂದು ಕರೆಯಲ್ಪಡುವ ಆಹಾರವನ್ನು ತಿನ್ನಬೇಕು ಎಂಬ ಆಸೆಯಿಟ್ಟುಕೊಂಡಿದ್ದ ನಾಲ್ವರು ಅಪ್ರಾಪ್ತ ವಿದ್ಯಾರ್ಥಿಗಳು, ಹಲವು ದಿನಗಳಿಂದ ಹೋಗಬೇಕು ಎಂದು ಪ್ಲ್ಯಾನ್ ಮಾಡುತ್ತಿದ್ದರು. ಆದರೆ ಇದು ಯೋಜಿಸಿದಂತೆ ಈಡೇರುತ್ತಿರಲಿಲ್ಲ. ಇದೇ ಕಾರಣವನ್ನು ಬಲಪಡಿಸಿಕೊಂಡ ಅಪ್ರಾಪ್ತರು, ತಮ್ಮ ಶಾಲೆಯಿಂದ 150 ಕಿ.ಮೀ ದೂರದ ಫಿರೋಜಾಬಾದ್‌ನಲ್ಲಿರುವ ಚೌಮೈನ್ ತಿನ್ನಲು ಶಾಲೆಗೆ ಗೈರಾಗಿ, ಮನೆಯವರಿಗೆ ಹೇಳದೆ ಪ್ರಯಾಣಿಸಿದ್ದರು.

ವಿದ್ಯಾರ್ಥಿಗಳ ನಾಪತ್ತೆ ಅವರ ಕುಟುಂಬದವರಿಗೆ ಮತ್ತು ಶಾಲಾ ಅಧಿಕಾರಿಗಳನ್ನು ತೀವ್ರ ಚಿಂತೆಗೀಡಾಗುವಂತೆ ಮಾಡಿತ್ತು. ಮಕ್ಕಳು ಏನಾಗಿದ್ದಾರೆ? ಎಲ್ಲಿ ಹೋಗಿದ್ದಾರೆ ಎಂಬುದನ್ನು ತಿಳಿಯದೆ ತೀರ ಕಳವಳ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರನ್ನು ಕೂಡ ದಾಖಲಿಸಿದ್ದರು.

ಶಂಕರ್, ಅರುಣ್, ಹೃತಿಕ್ ಮತ್ತು ಅಭಿಷೇಕ್ ಎಂದು ಗುರುತಿಸಲಾದ ನಾಲ್ವರು ಅಪ್ರಾಪ್ತ ವಿದ್ಯಾರ್ಥಿಗಳು, ಸುಮಾರು 11 ವರ್ಷ ವಯಸ್ಸಿನವರು ಮತ್ತು 5ನೇ ತರಗತಿಯಲ್ಲಿ ಓದುತ್ತಿರುವವರು ಎಂದು ವರದಿ ತಿಳಿಸಿದೆ. ಮಾರ್ಚ್ 7ರಂದು ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳಿದ್ದು, ಆತಂಕಕ್ಕೊಳಗಾದ ಪೋಷಕರು ಮತ್ತು ಸ್ಥಳೀಯ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ತಾವು ಬಯಸಿದ ಚೌಮೈನ್ ತಿನ್ನಲು 150 ಕಿ.ಮೀ ದೂರ ಪ್ರಯಾಣಿಸಿದ ಬಾಲಕರು, ಯಾರಿಗೂ ಹೇಳದೆ ಹೋಗುವ ಮೂಲಕ ನಾಪತ್ತೆಯಾಗಿದ್ದರು. ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳು ಕಾಣೆಯಾಗಿರುವ ವಿಷಯ ತಿಳಿದು ಪೊಲೀಸರ ಮುಂದೆ ಕಣ್ಣೀರಾಕಿದ್ದರು. ಆದರೆ, ಇದೀಗ ಮಕ್ಕಳು ಸುರಕ್ಷಿತವಾಗಿ ಮನೆಗೆ ಹಿಂತಿರುಗಿದ್ದು, ಪೋಷಕರಲ್ಲಿ ಭಾರೀ ಸಂತಸ ತಂದಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net