'ಮಹಿಳೆ ಸಮಾನತೆಗಾಗಿ ಹೋರಾಟ ಮಾಡಬೇಕಾದ ದುಸ್ಥಿತಿ ಬಂದಿದೆ'

42
Published on

ಮೈಸೂರು: ಮನೆಯ ಮುಖ್ಯಸ್ಥೆಯ ಸ್ಥಾನಮಾನದಲ್ಲಿ ಮಹಿಳೆ ದಿನಕಳೆದಂತೆ ಸಮಾನತೆಗಾಗಿ ಹೋರಾಟ ಮಾಡಬೇಕಾದ ಸ್ಥಿತಿ ಬಂದಿದೆ ಎಂದು ಎ.ಕೆ.ಅಗ್ರಿ ಸಲ್ಯೂಷನ್ಸ್ ಸಂಸ್ಥಾಪಕಿಯಾದ ಪಿಎಂಎಫ್‌ಎಂಇ ಯೋಜನೆ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಕುಮುದಾ ಹೇಳಿದರು.
ಚುಂಚಶ್ರೀ ತಾಲೂಕು ಮಹಿಳಾ ಸಂಘದಿಂದ ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳೆಯರಿಗೆ ಆರೋಗ್ಯ, ಆರ್ಥಿಕ ಸೌಲಭ್ಯಗಳ ಕುರಿತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ಸಂಪ್ರದಾಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗಿತ್ತು. ಹೆಚ್ಚಿನ ಮನೆಗಳಲ್ಲಿ ಗೃಹಿಣಿಯರಿಗೆ ಮುಖ್ಯಸ್ಥೆ ಸ್ಥಾನಮಾನ, ಅಧಿಕಾರ ನೀಡಲಾಗಿತ್ತು. ದೇವರನ್ನು ನೆನೆಯುವಾಗಲೂ ಅವರವರ ಪತ್ನಿಯರ ಹೆಸರಿನಿಂದಲೇ ಕರೆಯಲಾಗುತ್ತಿದೆ, ಇವುಗಳಿಂದಲೇ ಭಾರತೀಯ ಸಂಪ್ರದಾಯದಲ್ಲಿ ಮಹಿಳೆಯರಿಗೆ ನೀಡಲಾಗಿರುವ ಸ್ಥಾನಮಾನ ಕುರಿತು ನಮಗೆ ಅರಿವಾಗುತ್ತದೆ ಎಂದರು.
ಆದರೆ ದಿನ ಕಳೆದಂತೆ ಹಲವು ಕಾರಣ, ಬದಲಾವಣೆಗಳಿಂದ ಹೆಣ್ಣು ಸಮಾನತೆಗೆ ಹೋರಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಸ್ತ್ರೀ ಸಮಾನತೆ, ಸಬಲೀಕರಣಗಳತ್ತ ಗಮನ ಹರಿಸುವಂತಾಗಿದೆ. ಹಾಗಾಗಿ ಮಹಿಳೆಯರು ತಮ್ಮ ಸ್ಥೈರ್ಯ, ದೃಢತೆಗಳನ್ನು ಕಳೆದುಕೊಳ್ಳದೆ, ಆಸಕ್ತಿಗನುಸಾರವಾಗಿ ಸಿಕ್ಕಿರುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಮುಂದುವರಿಯುವಂತೆ ಸಲಹೆ ನೀಡಿದರು.
ಸರ್ಕಾರದ ವಿವಿಧ ಇಲಾಖೆಗಳ ಮುಖಾಂತರ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಅವುಗಳ ಕುರಿತು ತಿಳಿದುಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು. ಸ್ತ್ರೀಯರ ಸಬಲೀಕರಣದತ್ತ ಸಾಗಲು ಇರುವ ಅವಕಾಶಗಳನ್ನು ತಮ್ಮ ಆಸಕ್ತಿಗನುಸಾರವಾಗಿ, ಸ್ಥಳೀಯ ಮಾರುಕಟ್ಟೆ, ಬೇಡಿಕೆಗೆ ಅನುಗುಣವಾಗಿ ಹಾಗೂ ಸುತ್ತಲೂ ಲಭ್ಯವಿರುವ ಕಚ್ಚಾ ವಸ್ತುಗಳನ್ನಾಧರಿಸಿ ಉದ್ಯಮಗಳನ್ನು ಪ್ರಾರಂಭಿಸುವಂತೆ ತಿಳಿಸಿದರು.
ಪ್ರಸ್ತುತ ಚಾಲ್ತಿಯಲ್ಲಿರುವ ಶೇ.50 ಸಬ್ಸಿಡಿ ಆಧರಿತ ಸಾಲ ಸೌಲಭ್ಯಗಳು ಇವೆ. ಉದ್ಯಮ ಆರಂಭಿಸಲು ಪ್ರಧಾನ ಮಂತ್ರಿ ಆಹಾರ ಕಿರು ಸಂಸ್ಕರಣೆ ಯೋಜನೆ, ಪ್ರಧಾನ ಮಂತ್ರಿ ಉದ್ಯೋಗ ಖಾತ್ರಿ ಯೋಜನೆ, ರಾಷ್ಟ್ರೀಯ ಪಶುಪಾಲನಾ ಮಿಷನ್, ಇನ್ನಿತರ ಯೋಜನೆಗಳು ಇವೆ. ಅವುಗಳ ಕುರಿತು ಮಾಹಿತಿ ಪಡೆದುಕೊಳ್ಳಿ. ಅಲ್ಲದೆ ಸಂಘ, ಸಂಸ್ಥೆಗಳಲ್ಲಿಯೂ ಗುರುತಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ತಿಳಿಸಿದರು.
ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಶೋಭಾ ಮಾತನಾಡಿ, ಮಹಿಳೆಯರು ಹೆಚ್ಚಿನದಾಗಿ ತಮ್ಮ ಆರೋಗ್ಯದ ಕಡೆ ಗಮನಹರಿಸುವುದು ಈ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಅಪೌಷ್ಟಿಕತೆಯ ಲಕ್ಷಣಗಳಿಂದ ಮುಟ್ಟಿನ ಸಮಸ್ಯೆಗಳು ಕ್ರಮೇಣ ಹೆಚ್ಚುತ್ತಿವೆ. ಆದ್ದರಿಂದ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸ್ತ್ರೀಯರು ಹೆಚ್ಚು ಪೌಷ್ಟಿಕಾಂಶಭರಿತ ಆಹಾರ ಸೇವನೆಯೊಂದಿಗೆ ತಮ್ಮ ದೈಹಿಕ ಬದಲಾವಣೆಗಳ ಕುರಿತು ಗಮನವಹಿಸಬೇಕು ಎಂದು ಸಲಹೆ ನೀಡಿದರು.
ಪ್ರಾರಂಭಿಕ ಹಂತಗಳಲ್ಲಿಯೇ ಕಂಡುಬರುವ ಬದಲಾವಣೆಗಳ ಕುರಿತು ವೈದ್ಯರೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಗುಪ್ತ ಸಮಸ್ಯೆಗಳನ್ನು ವೈದ್ಯರಲ್ಲಿ ಮುಕ್ತವಾಗಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದರು.
ಬೆಂಗಳೂರಿನ ಚುಂಚಶ್ರೀ ಮಹಿಳಾ ಪ್ರತಿಷ್ಠಾನದ ನಿರ್ದೇಶಕಿ ಭಾರತಿಗೌಡ ಮಾತನಾಡಿ, ಮನೆಯಲ್ಲಿಯೇ ಕಳೆದು ಹೋಗದೆ ಮಹಿಳೆಯರೂ ಯಾವುದಾದರೊಂದು ರೀತಿಯಲ್ಲಿ ಸಂಘ, ಸಂಸ್ಥೆಗಳ ಚಟುವಟಕೆಗಳಲ್ಲಿ ಭಾಗವಹಿಸಬೇಕು. ತಮಗೆ ಲಭ್ಯವಿರುವ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಸಮಾಜದಲ್ಲಿ ಸ್ಥಾನಮಾನಗಳನ್ನು ಪಡೆದು ಗೌರವವನ್ನು ಹೆಚ್ಚಿಸಿಕೊಳ್ಳಬೇಕು. ಅಲ್ಲದೆ ಈ ಸಾಧನೆಗಳಿಗೆ ಸಮಯ ಪಾಲನೆ ಅಡಿಪಾಯ, ಆದ್ದರಿಂದ ಸರಿಯಾದ ಸಮಯವನ್ನು ಅನುಸರಿಸುವುದನ್ನು ರೂಢಿಸಿಕೊಳ್ಳುವುದು ಅತೀ ಅಗತ್ಯ ಎಂದರು.
ತಾಲೂಕಿನಲ್ಲಿ ವಿಶೇಷ ಸಾಧನೆ ಮಾಡಿದ ಸಮಾಜ ಸೇವಕಿ ಶೋಭಾಗೌಡ, ತಾಲೂಕಿನ ಪ್ರಥಮ ಮಹಿಳಾ ಪೈಲಟ್ ಆದ ತನುಶ್ರೀ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಉಷಾಗಿರೀಶ್, ಉಪಾಧ್ಯಕ್ಷೆ ಕಲಾವತಿ, ಕಾರ್ಯದರ್ಶಿ ಸುಮಿತ್ರಾ, ನಿರ್ದೇಶಕರಾದ ಅನಿತಾ, ಸುಷ್ಮಾ, ನಮಿತಾ, ಲೀಲಾವತಿ ಮನು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net