

Death: ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯ ಗಂಗಾಪುರ ತಾಲೂಕಿನ ಲಿಂಬೆ ಜಲಗಾಂವ್ ಗ್ರಾಮದಲ್ಲಿ ನಾಲ್ವರು ಅಪ್ರಾಪ್ತ ಬಾಲಕರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಶುಕ್ರವಾರ(ಅ. 03) ವರದಿಯಾಗಿದೆ
ದಸರಾ ಹಬ್ಬದ ಸಂದರ್ಭದಲ್ಲಿ, ನಾಲ್ವರು ಮಕ್ಕಳು ಟ್ರ್ಯಾಕ್ಟರ್ ತೊಳೆಯಲು ಲಿಂಬೆ ಜಲಗಾಂವ್ ಕೆರೆಯ ಹಿನ್ನೀರಿಗೆ ಹೋಗಿದ್ದರು. ಟ್ರ್ಯಾಕ್ಟರ್ ತೊಳೆಯುವ ವೇಳೆ ನಾಲ್ವರಲ್ಲಿ ಒಬ್ಬರು ಮೊದಲು ಮುಳುಗಿದ್ದು, ಅವನನ್ನು ಕಾಪಾಡಲು ಒಬ್ಬರ ನಂತರ ಒಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೃತ ಬಾಲಕರನ್ನು ವೆಂಕಟೇಶ್ ದತ್ತಾತ್ರೇಯ ತಾರಕ್(11), ಇರ್ಫಾನ್ ಇಸಾಕ್ ಶೇಖ್ (17), ಇಮ್ರಾನ್ ಇಸಾಕ್ ಶೇಖ್ (12) ಹಾಗೂ ಜೈನ್ ಖಾನ್ ಹಯಾತ್ ಖಾನ್ ಪಠಾಣ್ (9) ಎಂದು ಗುರುತಿಸಲಾಗಿದೆ. ಮಾಹಿತಿ ತಿಳಿದ ತಕ್ಷಣ, ಪೊಲೀಸರು ಮತ್ತು ಬಾಲಕರ ಪೋಷಕರು ಸ್ಥಳಕ್ಕೆ ಧಾವಿಸಿದ್ದು, ಬಾಲಕರ ಶವ ಹೊರ ತೆಗೆಯಲು ಕಾರ್ಯಾಚರಣೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಸ್ಥಳೀಯ ಅಧಿಕಾರಿಗಳು, ದಸರಾ ಹಬ್ಬದ ದಿನದಂದು ನಡೆದ ಘಟನೆ ಅತ್ಯಂತ ದುರದೃಷ್ಟಕರ. ಇತ್ತೀಚಿನ ದಿನಗಳಲ್ಲಿ ಮರಾಠವಾಡದಲ್ಲಿ ಸುರಿದ ಭಾರೀ ಮಳೆಯಿಂದಾಗಿ ನದಿಗಳು, ಕಾಲುವೆಗಳು, ತೊರೆಗಳು ಮತ್ತು ಸರೋವರಗಳು ತುಂಬಿ ಹರಿಯುತ್ತಿವೆ. ಹರಿಯುವ ನೀರಿಗೆ ಇಳಿಯಬೇಡಿ ಅಥವಾ ಅದರ ಬಳಿ ಆಟವಾಡಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ ಎಂದಿದ್ದಾರೆ. (ಏಜೆನ್ಸೀಸ್)