

ಕಿರಣ್ ಹಿರೇಮಠ್ ಸಿನ್ಸಿನಾಟಿ
ಅಮೆರಿಕದ ಓಹಿಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿರುವ ಕನ್ನಡಿಗರು ಸಾಕಷ್ಟು ಸ್ವಚ್ಛತೆ ಹಾಗೂ ಸ್ಥಳೀಯ ಕಾನೂನನ್ನು ಗೌರವಿಸಿ, ಪಾಲಿಸುತ್ತಿದ್ದಾರೆ. ನ್ಯೂಯಾರ್ಕ್, ಕ್ಯಾಲಿಫೋರ್ನಿಯಾದಂತಹ ಹೆಚ್ಚಿನ ಜನಸಂದಣಿಯ, ಹೆಚ್ಚಿನ ಉದ್ಯಮ ವ್ಯವಹಾರದ ನಗರಗಳಲ್ಲಿ ಪ್ರಾರಂಬದಲ್ಲಿ ಅಗತ್ಯ ಕ್ರಮ ಕೈಗೊಳ್ಳದ ಕಾರಣಕ್ಕೆ ತುಸು ಹೆಚ್ಚು ಸಮಸ್ಯೆ ಆಗಿದೆ. ಆದರೆ ಎರಡನೇ, ಮೂರನೇ ಹಂತದ ನಗರಗಳಲ್ಲಿ ಆಮಟ್ಟಿನ ಸಮಸ್ಯೆ ಇಲ್ಲವಾದರೂ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ಈ ಪ್ರಮಾಣದ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಅಂದಾಜು ಎರಡು ವಾರಕ್ಕೆ ಮೊದಲು ಇರಲಿಲ್ಲ. ಅಲ್ಲೆಲ್ಲೊ ಚೀನಾದಲ್ಲಿ, ಇಟಲಿಯಲ್ಲಿನ ಸಮಸ್ಯೆ ಎಂದೇ ಭಾವಿಸಿದ್ದೆವು. ರಜಾ ದಿನಕ್ಕಿಂತಲೂ ಅತ್ಯಂತ ಕಡಿಮೆ ಜನಗಳ ಸಂಚಾರ ಕಾಣಿಸುತ್ತಿದೆ.
ವಾರಾಂತ್ಯದಲ್ಲಿ ಜನಜಂಗುಳಿಯಿರುತ್ತಿದ್ದ ಮಾಲ್, ಸೂಪರ್ವಾರ್ಕೆಟ್, ಥಿಯೇಟರ್ಗಳು ಸಂಪೂರ್ಣ ಮುಚ್ಚಿವೆ. ಮಕ್ಕಳಿಗೆ ಈಗಷ್ಟೆ ಸ್ಪ್ರಿಂಗ್ ಬ್ರೇಕ್(ರಜಾದಿನಗಳ) ಅವಧಿ ಆಗಮಿಸುತ್ತಿದೆ. ಆದರೆ ಮಕ್ಕಳು ಈಗಾಗಲೆ ಮನೆಯಲ್ಲಿದ್ದಾರೆ. ಸ್ಪ್ರಿಂಗ್ ಬ್ರೇಕ್ ನಂತರ ಈ ವರ್ಷದ ಶಾಲೆಗಳು ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಹಾಗಾಗಿ ಮಕ್ಕಳಿಗೆ ಆನ್ಲೈನ್ ತರಗತಿಗಳು, ತರಬೇತಿಗಳನ್ನು ಶಾಲೆಗಳಿಂದ ಆಯೋಜನೆ ಮಾಡಲಾಗುತ್ತಿದೆ. ಮುಂದಿನ ವರ್ಷದ ಶಿಕ್ಷಣಕ್ಕೆ ತೊಂದರೆಯಾಗದ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಮನೆಯಲ್ಲಿರುವ ದೊಡ್ಡವರು ಮನರಂಜನೆಗಾಗಿ ನೆಟ್ಫ್ಲಿಕ್ಸ್, ಅಮೇಜಾನ್ ಪ್ರೖೆಂ ಮೊರೆ ಹೋಗಿದ್ದಾರೆ. ಆದರೆ ಎಷ್ಟು ದಿನ ಅದರಿಂದ ಸಮಾಧಾನ ಸಿಗುತ್ತದೆ ಗೊತ್ತಿಲ್ಲ. ಯಾವಾಗಲೂ ಅವನ್ನೇ ನೋಡುತ್ತ ಕೂರಲೂ ಆಗುವುದಿಲ್ಲ. ಮುಂದಿನ ದಿನಗಳಲ್ಲೂ ಹೀಗೆಯೇ ಮುಂದುವರಿದರೆ ಪರಿಸ್ಥಿತಿ ಹೇಗೆ ತಿಳಿಯುತ್ತಿಲ್ಲ. ಉದ್ಯಮ ವ್ಯಾಪಾರದ ಮೇಲೆ ಅಪಾರ ಪರಿಣಾಮ ಆಗಲಿದೆ. ಅದರ ಪರಿಣಾಮ ಸ್ಥಳೀಯರಿಗೆ, ಹೊರಗಿನಿಂದ ಬಂದು ನೆಲೆಸಿದವರ ಮೇಲೆ ಯಾವ ರೀತಿ ಆಗುತ್ತದೆಯೋ ಕಾದುನೋಡಬೇಕು. ಮೊದಲಿಗೆ ಎಲ್ಲರೂ ನಿಯಮವನ್ನು ಪಾಲಿಸಿ ಜೀವ ಉಳಿಸಿಕೊಳ್ಳುವ ಆಲೋಚನೆಯಲ್ಲಿದ್ದಾರೆ.