ವಿದೇಶದಿಂದ ಬಂದಿದ್ದಾನೆಂಬ ಕಾರಣಕ್ಕೆ ವ್ಯಕ್ತಿಯನ್ನು ಅಪಾರ್ಟ್ಮೆಂಟ್​ನಲ್ಲೇ ಕೂಡಿ ಹಾಕಿದ ನೆರೆ ಹೊರೆಯವರು

coronavirus-graphic-web-feature
Published on

ಹೈದರಾಬಾದ್​: ಕರೊನಾ ವೈರಸ್​ ವಿದೇಶಗಳಿಂದ ಭಾರತಕ್ಕೆ ಬಂದಿರುವ ಹಿನ್ನೆಲೆ ಜನರು ಬೇರೆ ದೇಶಗಳಿಂದ ಬಂದಿರುವವರನ್ನು ವೈರಿಗಳಂತೆ ನೋಡಲಾರಂಭಿಸಿದ್ದಾರೆ. ತಮ್ಮ ಅಪಾರ್ಟ್ಮೆಂಟ್​ನಲ್ಲಿರುವ ವ್ಯಕ್ತಿಯೊಬ್ಬ ವಿದೇಶದಿಂದ ಬಂದಿದ್ದಾನೆಂಬ ಕಾರಣಕ್ಕೆ ಆತನನ್ನು ಮನೆಯಲ್ಲೇ ಕೂಡಿ ಹಾಕಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಹೈದರಾಬಾದ್​ನ ಅಪಾರ್ಟ್ಮೆಂಟ್​ ಒಂದರ ನಿವಾಸಿಯಾಗಿರುವ ವ್ಯಕ್ತಿ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಪ್ರವಾಸ ಮುಗಿಸಿ ಬಂದಿದ್ದ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಸಲಹೆಯಂತೆ ಆತ 14 ದಿನಗಳ ಕಾಲ ಮನೆಯಲ್ಲಿಯೇ ಇರುವ ನಿರ್ಧಾರ ಮಾಡಿದ್ದು ಅಪಾರ್ಟ್ಮೆಂಟ್​ನಲ್ಲೇ ತಂಗಿದ್ದ. ಈ ಮಧ್ಯೆ ನೆರೆ ಮನೆಯವನೊಂದಿಗೆ ಆತನಿಗೆ ಜಗಳವಾಗಿದೆ. ಈ ವ್ಯಕ್ತಿ ಪ್ರತ್ಯೇಕವಾಗಿರಬೇಕಾದ ಸಮಯದಲ್ಲಿ ಹೊರಗೆ ಹೋಗುವ ಯೋಚನೆ ನಡೆಸುತ್ತಿದ್ದಾನೆ ಎಂದು ಊಹಿಸಿದ ನೆರೆ ಮನೆಯಾತ ಈತನೊಂದಿಗೆ ಜಗಳ ಆಡಿದ್ದಾನೆ. ಅದೇ ಕಾರಣದಿಂದಾಗಿ ಆತ ಅಪಾರ್ಟ್ಮೆಂಟ್​ನೊಳಗೆ ಇದ್ದಾಗಲೇ ಹೊರಗಿನಿಂದ ಚಿಲಕ ಹಾಕಿದ್ದಾನೆ.

ಹೊರಗಿನಿಂದ ಚಿಲಕ ಹಾಕಲಾಗಿದೆ ಎಂದು ತಿಳಿದ ತಕ್ಷಣ ಪ್ರತ್ಯೇಕ ವಾಸದಲ್ಲಿರುವ ವ್ಯಕ್ತಿ ಪೊಲೀಸರಿಗೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಈ ರೀತಿಯಲ್ಲಿ ನಡೆದುಕೊಳ್ಳಬೇಡಿ ಎಂದು ನೆರೆಹೊರೆಯವರಿಗೆ ಎಚ್ಚರಿಸಿ ಹೋಗಿದ್ದಾರೆ.

ರಾಜ್ಯದಲ್ಲಿ ವಿದೇಶದಿಂದ ಬಂದವರಿಗೆ 14 ದಿನಗಳ ಕಾಲ ಪ್ರತ್ಯೇಕವಾಗಿರಬೇಕು ಎಂದು ಸೂಚಿಸಲಾಗಿದ್ದರೂ ಅನೇಕರು ಆ ನಿಯಮವನ್ನು ಪಾಲಿಸುತ್ತಿಲ್ಲ. ಹಾಗಾಗಿ ತೆಲಂಗಾಣ ಪೊಲೀಸರು, ವೈದ್ಯರು ಮತ್ತು ಗ್ರಾಮ ಪಂಚಾಯಿತಿ ಮತ್ತು ವಾರ್ಡ್​ನ ಸದಸ್ಯರನ್ನೊಳಗೊಂಡ ತಂಡವು ವಿದೇಶದಿಂದ ಬಂದಿರುವವರ ಮನೆಗಳಿಗೆ ತೆರಳಿ ಅವರು ನಿಯಮವನ್ನು ಪಾಲನೆ ಮಾಡುತ್ತಿದ್ದಾರಾ ಎನ್ನುವುದರ ಪರಿಶೀಲನೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net