

ಬೆಂಗಳೂರು/ಹಾಸನ: ರಾಜ್ಯ ಸರ್ಕಾರದ ನಡೆ ಬಗ್ಗೆ ಒಂದು ವರ್ಷ ಕಾಲ ಮೌನವಾಗಿದ್ದ ಜೆಡಿಎಸ್, ಈಗ ಮೈ ಕೊಡವಿ ಬೀದಿಗಿಳಿದಿದೆ. ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವ ಭೂ ಸುಧಾರಣೆ, ಕಾರ್ವಿುಕ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಜನ ವಿರೋಧಿಯಾಗಿವೆ ಎಂದು ಆರೋಪಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿರುವ ಜೆಡಿಎಸ್, ಹಾಸನದಲ್ಲಿ ಹೋರಾಟಕ್ಕೆ ಶುಕ್ರವಾರ ಚಾಲನೆ ನೀಡಿದೆ.
ಹಾಸನದಲ್ಲಿ ಪ್ರತಿಭಟನೆ ವೇಳೆ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಯಾವ ಕಾರಣಕ್ಕೂ ಭೂ ಸುಧಾರಣೆ ಕಾಯ್ದೆ ಅನುಷ್ಠಾನಗೊಳಿಸಬಾರದು. ಈ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ಜೆಡಿಎಸ್ ಶಾಸಕರಿಲ್ಲದ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಕರ್ತರೇ ಧರಣಿ ನಡೆಸುತ್ತಾರೆ ಎಂದರು.
15 ದಿನಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ ಆಯಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ನಂತರ ಮೊಮ್ಮಗ ಪ್ರಜ್ವಲ್ ಲೋಕಸಭೆ ಹಾಗೂ ನಾನು ರಾಜ್ಯಸಭೆಯಲ್ಲಿ ಕಾಯ್ದೆಯ ಅಡ್ಡ ಪರಿಣಾಮಗಳ ಕುರಿತು ಸರ್ಕಾರದ ಗಮನ ಸೆಳೆಯುತ್ತೇವೆ. | ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ
ಸಾವಿನ ಚಿಂತೆ ನನಗಿಲ್ಲ: ಈಗಾಗಲೇ 88 ವರ್ಷ ಪೂರೈಸಿರುವ ನನಗೆ ಕರೊನಾದಂತಹ ಸಂದಿಗ್ಧ ಸಂದರ್ಭದಲ್ಲಿ ಹೋರಾಟಗಳೆಲ್ಲ ಬೇಡವೆಂದು ಸಾಕಷ್ಟು ಜನರು ಸಲಹೆ ನೀಡಿದ್ದಾರೆ. ಆದರೆ, ನಮ್ಮ ಜನರು ತೊಂದರೆಗೆ ಸಿಲುಕಿರುವಾಗ ಸುಮ್ಮನೆ ಕೂರಲು ಮನಸ್ಸು ಒಪ್ಪಲಿಲ್ಲ. ಸಾವಿನ ಚಿಂತೆ ನನಗಿಲ್ಲ. ಯಾವ ಕಾರಣಕ್ಕೂ ಧೃತಿಗೆಡುವುದಿಲ್ಲ. ಸರ್ಕಾರದ ತಪ್ಪು ನಿರ್ಧಾರಗಳ ವಿರುದ್ಧ ಕೊನೇ ತನಕ ಹೋರಾಡುತ್ತೇನೆ ಎಂದು ದೇವೇಗೌಡ ಹೇಳಿದರು.
ಹೋರಾಟಕ್ಕೆ ಹಲವು ಮುಖ!: ಬಿಜೆಪಿ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಸಾಫ್ಟ್ಕಾರ್ನರ್ ಆಗಿದ್ದಾರೆ. ದೇವೇಗೌಡರು ರಾಜ್ಯಸಭೆ ಪ್ರವೇಶಕ್ಕೆ ಬಿಜೆಪಿ ಕೂಡ ಒಳಗೊಳಗೆ ಸಾಥ್ ಕೊಟ್ಟಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಸಮ್ಮಿಶ್ರ ಸರ್ಕಾರದಲ್ಲಿ ಆದ ಎಡವಟ್ಟುಗಳಿಂದಾಗಿ ಪಕ್ಷದ ಕಾರ್ಯಕರ್ತರಿಗೆ ಆದ ಅನ್ಯಾಯಕ್ಕೆ ಕ್ಷಮೆ ಕೋರಿ ದೇವೇಗೌಡರು ಇತ್ತೀಚೆಗೆ ಬಹಿರಂಗ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಯಾಗಿ ಪಕ್ಷದ ಕಾರ್ಯಕರ್ತ ಬಿ.ಎಚ್.ಚಂದ್ರಶೇಖರ್ ಬಹಿರಂಗ ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಕೂಡ ಬಹುದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಈ ಎಲ್ಲ ಬೆಳವಣಿಗೆಗಳು ಪಕ್ಷದ ಕಾರ್ಯಕರ್ತರನ್ನು ಇನ್ನೆಲ್ಲಿಗೋ ತೆಗೆದುಕೊಂಡು ಹೋಗಿ ಬಿಡಬಹುದೆಂದು ಲೆಕ್ಕಾಚಾರ ಹಾಕಿದ ದೇವೇಗೌಡರು, ಬಿಜೆಪಿ ಸರ್ಕಾರದ ವಿರುದ್ಧ ರಣಕಹಳೆ ಊದಿದ್ದಾರೆ ಎಂಬ ಮಾತುಗಳಿವೆ.