ನನ್ನ ಕೊಲ್ಲಲು ಜೈಲಿನಲ್ಲಿ ಇರೋರಿಗೆ ಶಾಸಕ ಗೌರಿಶಂಕರ್ ಸುಪಾರಿ ಕೊಟ್ಟಿದ್ದಾರೆ: ಸುರೇಶ್​ ಗೌಡ ಸ್ಫೋಟಕ ಹೇಳಿಕೆ

sureshgowda gowrishankar
Published on

ತುಮಕೂರು: ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಅವರು ನನ್ನ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ಮಾಜಿ ಶಾಸಕ ಸುರೇಶ್​ ಗೌಡ ಗಂಭೀರ ಆರೋಪ ಮಾಡಿದ್ದು, ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ

ತುಮಕೂರು ಗ್ರಾಮಾಂತರ ಕ್ಷೇತ್ರದ ಅರೆಯೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಸುರೇಶ್ ಗೌಡ, ಗೌರಿಶಂಕರ್​ ವಿರುದ್ಧ ವಾಗ್ಧಾಳಿ ನಡೆಸುತ್ತಲೇ ಸ್ಫೋಟಕ ಹೇಳಿಕೆ ನೀಡಿದ್ದಾರೆ. 'ಕೊಲೆ ಅಲ್ಲ, ತಾಕತ್ ಇದ್ರೆ ನನ್ನ ಒಂದು ಕೂದಲು ಕಿತ್ತುಕೋ ನೋಡೋಣ. ನಿನ್ನ ಒಂದೊಂದು ಆಟವೂ ನನಗೆ ಗೊತ್ತಿದೆ. ನನ್ನ ಕೊಲೆ ಮಾಡಿಸೋದಿಕ್ಕೆ ನೀನು ಸಜ್ಜಾಗಿದ್ದೀಯಾ. ನನ್ನನ್ನು ಕೊಲ್ಲಲು ಜೈಲಲ್ಲಿ ಇರೋರಿಗೆ ಸುಪಾರಿ ಕೊಡ್ತೀಯಾ...' ಎಂದು ಆಕ್ರೋಶ ಹೊರಹಾಕಿದರು.

'ನಿನ್ನ ನಾಟಕ ಎಲ್ಲ ಬಂದ್ ಮಾಡು, ನಮ್ಮ ತಾಕತ್ ಏನು ಅನ್ನೋದನ್ನ ನಮ್ಮ ಕಾರ್ಯಕರ್ತರು ತೋರಿಸ್ತಾರೆ. ಒಂದೂವರೆ ತಿಂಗಳಿಂದ ನಮ್ಮ ಶಕ್ತಿ ಏನು ಅನ್ನೋದನ್ನ ಪ್ರತಿ ಊರಿನಲ್ಲೂ ತೊರಿಸಿದ್ದೀವಿ. ಜೈಲಲ್ಲಿ ಇರೋರಿಗೆ ನನ್ನನ್ನು ಕೊಲೆ ಮಾಡಲು ಸುಪಾರಿ ಕೊಡ್ತಿಯಾ... ಇದೆಲ್ಲಾ ನಡೆಯಲ್ಲಪ್ಪ ಮಿಸ್ಟರ್ ಗೌರಿಶಂಕರ್. ಮತದಾರರು, ನಮ್ಮ ಕಾರ್ಯಕರ್ತರು ಇರೋವರೆಗೂ ನನ್ನ ಒಂದು ಕೂದಲು ಮುಟ್ಟೋಕೆ ಆಗಲ್ಲ. ನಿನ್ಗೆ ಧಮ್ ಇದ್ರೆ ಸುಪಾರಿ ಕೊಡು ನೋಡೋಣಾ‌.. ನಾನೊಬ್ಬ ರೈತನ ಮಗ, ನಾನು ಬೆಳೆದಿರೋದು ರೈತನ ಹೊಟ್ಟೆಯಲ್ಲಿ‌. ನನ್ನ ಈ ಜನ ಇರೋವರೆಗೂ ನನ್ನ ಒಂದು ಕೂದಲೂ ಮುಟ್ಟೋಕು ನಿನ್ಗೆ ಆಗಲ್ಲ' ಎಂದು ಶಾಸಕ ಗೌರಿಶಂಕರ್​ಗೆ ಬಹಿರಂಗವಾಗಿಯೇ ಸುರೇಶ್ ಗೌಡ ಎಚ್ಚರಿಕೆ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net