

ನವದೆಹಲಿ : ಸೆಲೆಬ್ರಿಟಿ ಅಮ್ಮಂದಿರು ಅವರ ಮಕ್ಕಳನ್ನು ಹೇಗೆ ಬೆಳೆಸುತ್ತಾರೆ ಎಂದು ಎಲ್ಲರಿಗೂ ಕುತೂಹಲ. ಎಲ್ಲಕ್ಕೂ ಕೆಲಸದವರನ್ನಿಟ್ಟುಕೊಂಡು ಸುಲಭವಾಗಿ ತಮ್ಮ ಜೀವನ ನಡೆಸುತ್ತಾರೆ ಎಂಬ ಕಲ್ಪನೆಯೂ ಉಂಟು. ಆದರೆ, ಮಕ್ಕಳೊಂದಿಗೆ ಸಮಯ ಕಳೆಯುವ ವಿಶಿಷ್ಟ ಕ್ಷಣಗಳನ್ನು ಅವರೂ ಹುಡುಕುತ್ತಾರೆ, ನೋಡಿ.
ಬಾಲಿವುಡ್ ನಟಿ ಹಾಗೂ ಮಾಜಿ ಮಿಸ್ ಯೂನಿವರ್ಸ್ ಆಗಿರುವ ಸುಷ್ಮಿತಾ ಸೇನ್ರ ಉದಾಹರಣೆ ತೆಗೆದುಕೊಳ್ಳೋಣ. ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ವೀಕೆಂಡ್ಅನ್ನು ಕಳೆಯುತ್ತಿರುವ ಸೇನ್, ಚಿಕ್ಕ ಮಗಳಿಗೆ ತಾವೇ ಹೇರ್ ಕಟ್ ಕೊಡುತ್ತಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ! ನಿನ್ನೆ ರಾತ್ರಿ ಇನ್ಸ್ಟಾಗ್ರಾಂನಲ್ಲಿ ಮಗಳು ಅಲಿಸಾಗೆ ಹೇರ್ಕಟ್ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.
"ನಾನು ಅವಳಿಗೆ ಮುಖ್ಯ ಎಂದು ತೋರಿಸುವ ವಿಶಿಷ್ಟ ರೀತಿಯನ್ನು ಅಲೀಸಾ ಹೊಂದಿದ್ದಾಳೆ. ಅವಳಿಗೆ 3 ವರ್ಷ ವಯಸ್ಸಾಗಿದ್ದಾಗಿನಿಂದ ನಾನೇ ಅವಳ ಅಫಿಷಿಯಲ್ ಹೇರ್ಡ್ರೆಸ್ಸರ್! ನಾನು ಅವಳ ಕೂದಲು ಕಟ್ ಮಾಡುವಾಗ ಫುಲ್ ಸ್ಟ್ರೆಸ್ನಲ್ಲಿದ್ದರೆ ಅವಳು ಮಾತ್ರ ಧ್ಯಾನ ಮಾಡುವಂತೆ ಕೂರುತ್ತಾಳೆ! ಅವಳ ವಿಶ್ವಾಸ ಮೆಚ್ಚುವಂಥದ್ದು" ಎಂದು ಸುಷ್ಮಿತಾ ಸೇನ್ ಈ ಚಿತ್ರಕ್ಕೆ ಟಿಪ್ಪಣಿ ಬರೆದಿದ್ದಾರೆ. ಜೊತೆಗೆ, ತಮ್ಮ ದೊಡ್ಡ ಮಗಳು ರೀನೀ ಸೇನ್ ತೆಗೆದಿರುವ ಈ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿ, 'ಐ ಲವ್ ಯೂ ಗಯ್ಸ್' ಎಂದಿದ್ದಾರೆ. (ಏಜೆನ್ಸೀಸ್)