ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ನಿಧನ!

WhatsApp Image 2024-03-16 at 9.58.23 PM
Published on

ದಾವಣಗೆರೆ: ಮಾಜಿ ಸಚಿವೆ, ಸಮಾಜ ಸೇವಕಿ ನಾಗಮ್ಮ ಕೇಶವಮೂರ್ತಿ (89) ವಯೋಸಹಜ ಖಾಯಿಲೆಯಿಂದ ಇಂದು ತಮ್ಮ ನಿವಾಸದಲ್ಲಿ ನಿಧನರಾಗಿದ್ದು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ನಾಗಮ್ಮರವರು ನಗರದ ಪಿಜೆ ಬಡಾವಣೆಯ ನಿವಾಸದಲ್ಲಿ ಇಂದು ಕೊನೆಯುಸಿರೆಳೆದರು. ಅವರಿಗೆ ಓರ್ವ ಪುತ್ರ ಇದ್ದಾರೆ. ಇಲ್ಲಿನ ವೈಕುಂಠ ಧಾಮದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ನಾಗಮ್ಮ ಕೇಶವಮೂರ್ತಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ (1979-82 ಮತ್ತು 1993-95), ಭಾರೀ ಮತ್ತು ಮಧ್ಯಮ ಕೈಗಾರಿಕಾ ಮಂತ್ರಿಯಾಗಿ (1992), ವಿಧಾನಸಭೆಯ ಉಪಾಧ್ಯಕ್ಷರಾಗಿ (1989-1992) ಸೇವೆ ಸಲ್ಲಿಸಿದ್ದರು.

ದಾವಣಗೆರೆ ವಿಧಾನಸಭಾ ಕ್ಷೇತ್ರವನ್ನು ಒಂದು ಬಾರಿ, ಮಾಯಕೊಂಡ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರು. 1968ರಿಂದ 72ರವರೆಗೆ ದಾವಣಗೆರೆ ನಗರಸಭೆ ಸದಸ್ಯರಾಗಿದ್ದರು. ರಾಜಕಾರಣದಲ್ಲಿ ಸಕ್ರಿಯರಾಗಿದ್ದಾಗ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರಿಗೆ ಪರಿಚಿತರಾಗಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ, ದೇವರಾಜ ಅರಸು, ಆರ್. ಗುಂಡೂರಾವ್ ಮುಂತಾದ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ಸಮಾಜ ಸೇವೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ನಾಗಮ್ಮ ಅವರು ದಾವಣಗೆರೆಯಲ್ಲಿ ವನಿತಾ ಸಮಾಜವನ್ನು ಕಟ್ಟಿ ಬೆಳೆಸಿದರು. ಆ ಸಂಸ್ಥೆ ಈಗ 53 ಅಂಗ ಸಂಸ್ಥೆಗಳನ್ನು ಹೊಂದಿದೆ. ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿ ಹಲವಾರು ಪ್ರಸಸ್ತಿ ಪುರಸ್ಕಾರಗಳು ಲಭಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net