ಚುನಾವಣೆ ಬಳಿಕ ಮೊದಲ ಬಾರಿ ಮೌನ ಮುರಿದ ಮಾಜಿ ಸಚಿವ ಮಾಧುಸ್ವಾಮಿ

madhuswamy
Published on

ಚಿಕ್ಕನಾಯಕನಹಳ್ಳಿ: ಇಡೀ ರಾಜ್ಯದಲ್ಲಿ ನನ್ನಂತೆ ಕೆಲಸ ಮಾಡಿದ ಹಲವು ನಾಯಕರು ಸೋತಿದ್ದಾರೆ ಎಂದು ಚುನಾವಣೆ ಬಳಿಕ ಮೊದಲ ಬಾರಿ ಮೌನ ಮುರಿದಿರುವ ಮಾಜಿ ಸಚಿವ ಮಾಧುಸ್ವಾಮಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಧುಸ್ವಾಮಿ, ಕೆಲಸ ಮಾಡಿದಕ್ಕೆ ಪ್ರತಿಫಲ ಸಿಗುತ್ತದೆ ಎಂದುಕೊಂಡಿದ್ದೆ ಆದರೆ ಜನ ಕಡೆಗಣಿಸಿದ್ದಾರೆ. ಕೆಲಸ ಮಾಡಿದಕ್ಕೆ ಪ್ರತಿಫಲ ಸಿಗದೇ ಇರೋದು ಕೇವಲ ಚಿಕ್ಕನಾಯಕನಹಳ್ಳಿಗೆ ಮಾತ್ರ ಸೀಮಿತವಲ್ಲ. ಇಡೀ ರಾಜ್ಯದಲ್ಲಿ ಕೆಲಸ ಮಾಡಿಯೂ ಹಲವಾರು ನಾಯಕರು ಸೋತಿದ್ದಾರೆ. ಜನರು ಊರಿನ ಕೆಲಸ, ಕ್ಷೇತ್ರದ ಕೆಲಸವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಕಾಂಗ್ರೆಸ್​​ನವರ ಅಕ್ಕಿ ಹಾಗೂ ಅವರು ಕೊಡುವ ದುಡ್ಡನ್ನೇ ಶ್ರೇಷ್ಠ ಪರಿಗಣಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಷ್ಟು ಕೋಟಿ ಬೇಕಾದ್ರು ಕೊಡ್ತೀನಿ ಬಾ…ಕೃತಿ ಶೆಟ್ಟಿಗೆ ಆಹ್ವಾನ ಕೊಟ್ಟ ಸ್ಟಾರ್ ನಟನ ಮಗ

ಕಾಂಗ್ರೆಸ್​ನವರ ಉಚಿತ ಭಾಗ್ಯದ ಮುಂದೆ ನಮ್ಮ ಎಲ್ಲಾ ಕೆಲಸಗಳು ಕೊಚ್ಚಿಕೊಂಡು ಹೋದವು. ನೀರು, ರಸ್ತೆ ಮೂಲಭೂತ ಸೌಕರ್ಯಗಳನ್ನು ನೀಡಿದ್ದನ್ನು ಜನರು ಮರೆತಿದ್ದಾರೆ. ಇದೇ ರೀತಿ ಉಚಿತ ಭಾಗ್ಯ ಮುಂದುವರೆದರೆ ಮುಂದೆ ಚುನಾವಣೆ ಮಾಡುವುದು ತುಂಬಾ ಕಷ್ಟವಾಗುತ್ತದೆ ಎಂದು ಮಾಜಿ ಸಚಿವರು ಹೇಳಿದ್ದಾರೆ.

ತೆರಿಗೆದಾರರ ದುಡ್ಡನ್ನು ಸರ್ಕಾರ ಇಷ್ಟ ಬಂದ ತರಹ ಮನೆಯಲ್ಲಿ ಕುಳಿತವರಿಗೆ ಹಂಚುತ್ತೇನೆ ಎಂದರೆ ರಾಜ್ಯದ ಪರಿಸ್ಥಿತಿ ಏನಾಗುತ್ತದೆ. ಕೆಲವು ವಿದ್ಯಾವಂತ ಉದ್ಯೋಗಸ್ಥ ಯುವಕರು ನನ್ನ ಬಳಿ ಬಂದು, ತೆರಿಗೆ ಕಟ್ಟುವವರು ಉಚಿತ ಭಾಗ್ಯದ ವಿರುದ್ಧ ಹೋರಾಟ ಮಾಡಿದರೆ ಮಾತ್ರ ಇದು ನಿಲ್ಲಬಹುದಾ ಎಂಬಿತ್ಯಾದಿ ವಿಷಯಗಳ ಚರ್ಚೆ ಮಾಡಿದ್ದಾರೆ ಎಂದು ಮಾಧುಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ: ಕುಡಿದ ಅಮಲಿನಲ್ಲಿ ವಾಹನ ಚಾಲನೆ; ರಸ್ತೆ ಬದಿ ನಿಂತಿದ್ದ ಪೊಲೀಸ್​ ಪೇದೆ ದುರ್ಮರಣ

ಕಾಂಗ್ರೆಸ್​ ಸರ್ಕಾರದವರು ತಾವು ಮಾಡಿರುವ ಪಾಪದ ಬಗ್ಗೆ ಮಾತನಾಡುವುದಿಲ್ಲ. ಸುಮ್ಮನೇ ಪ್ರಧಾನಿ ಮೋದಿ ಅಕ್ಕಿ ಕೊಟ್ಟಿಲ್ಲ ಎಂದು ಸುಮ್ಮನೆ ದೂಷಣೆ ಮಾಡುತ್ತಾರೆ. ನಮ್ಮ ಸರ್ಕಾರವಿದ್ದಾಗಲೂ ರಾಜ್ಯದಲ್ಲಿ ಕನಿಷ್ಠ 7 ಕೆ.ಜಿ.ಅಕ್ಕಿ ಕೊಡಬೇಕು ಎಂದು 10 ಬಾರಿ ಪ್ರಯತ್ನಪಟ್ಟಿದ್ದೆವೆ. ಆದರೆ ಹೆಚ್ಚುವರಿ ಅಕ್ಕಿ ಕೊಡಲು ಪ್ರಧಾನಿ ಮೋದಿ ಒಪ್ಪಿಲ್ಲ ಎಂದು ಮಾಜಿ ಸಚಿವರು ಹೇಳಿದ್ದಾರೆ.

ಬಿಜೆಪಿ ಆಡಳಿತದ ರಾಜ್ಯಕ್ಕೂ ಕೇಂದ್ರ ಸರ್ಕಾರವು ಯಾವುದೇ ರೀತಿಯ ಹೆಚ್ಚುವರಿ ಅಕ್ಕಿಯನ್ನು ನೀಡಿಲ್ಲ. ಆಹಾರ ಭದ್ರತಾ ಕಾಯಿದೆ ಪ್ರಕಾರ ಒಬ್ಬರಿಗೆ ದಿನಕ್ಕೆ 150 ರಿಂದ 200 ಗ್ರಾಂ ಅಕ್ಕಿ ಸಾಕು ಎಂದು ವೈಜ್ಞಾನಿಕವಾಗಿ ಅಂದಾಜಿಸಲಾಗಿದೆ. ಹಾಗಾಗಿ ತಿಂಗಳಿಗೆ 5 ಕೆ.ಜಿ. ಅಕ್ಕಿ ಕೊಡಲಾಗುತ್ತಿದೆ. ನಮ್ಮಲ್ಲಿ ದಾಸ್ತಾನು ಇರುವ ಅಕ್ಕಿಯನ್ನು ಬರಗಾಲ, ಅತಿವೃಷ್ಟಿ, ಪ್ರಾಕೃತಿ ವಿಕೋಪಗಳ ಕಾಲದಲ್ಲಿ ಕೊಡಲು ಬೇಕು. ಅಕ್ಕಿ ಇದೆ ಎಂದು ಬೇಕಾಬಿಟ್ಟಿ ಹಂಚುವುದಕ್ಕೆ ಆಗುವುದಿಲ್ಲ. ಕರ್ನಾಟಕಕ್ಕೆ ಅಂತಹ ಪರಿಸ್ಥಿತಿ ಬಂದರೇ ಪ್ರಧಾನಿಯವರು ಅಕ್ಕಿ ಕೊಟ್ಟೆಕೊಡುತ್ತಾರೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net