

ಬೆಂಗಳೂರು: ರಾಜಧಾನಿಯ ರಾಜಕಾರಣದಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಿಂದಾಗಿ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷವನ್ನು ತ್ಯಜಿಸಿ ಭಾರತೀಯ ಜನತಾ ಪಕ್ಷವನ್ನು ಸೇರಲಿರುವುದು ನಿಚ್ಚಳವಾಗಿದೆ.
ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕದ ಉಪಾಧ್ಯಕ್ಷ ಹಾಗೂ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿರುವ ಭಾಸ್ಕರ್ ರಾವ್ ನಾಳೆ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆ ಆಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಕುರಿತು ಭಾಸ್ಕರ್ ರಾವ್ ಅವರಿಂದ ಯಾವುದೇ ಹೇಳಿಕೆ ಇದುವರೆಗೆ ಹೊರಬೀಳದಿದ್ದರೂ, ಅವರು ಬಿಜೆಪಿ ಸೇರಲಿರುವುದನ್ನು ಮೂಲಗಳು ಖಚಿತಪಡಿಸಿವೆ.
ಇದೇ ವಿಚಾರವಾಗಿ ಭಾಸ್ಕರ್ ರಾವ್ ಇಂದು ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಸಚಿವ ಆರ್. ಅಶೋಕ್ ಅವರನ್ನು ಪದ್ಮನಾಭನಗರದಲ್ಲಿ ಭೇಟಿಯಾಗಿ ಅವರೊಂದಿಗೂ ಭಾಸ್ಕರ್ ರಾವ್ ಮಾತುಕತೆ ನಡೆಸಿದ್ದಾರೆ.
ಭಾಸ್ಕರ್ ರಾವ್ ಬಿಜೆಪಿ ಸೇರ್ಪಡೆ ಬಗ್ಗೆ ವರಿಷ್ಠರ ಗಮನಕ್ಕೂ ತರಲಾಗಿದ್ದು, ಅವರು ಕೂಡ ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ. ಅದರಲ್ಲೂ ನಾಳೆಯೇ ಭಾಸ್ಕರ್ ರಾವ್ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ.