1984ರ ಸಿಖ್ ವಿರೋಧಿ ಗಲಭೆ ಪ್ರಕರಣ; ಸಜ್ಜನ್ ಕುಮಾರ್ ದೋಷಿ.. ರೋಸ್ ಅವೆನ್ಯೂ ನ್ಯಾಯಾಲಯ ತೀರ್ಪು | Sajjan Kumar

Untitled design (24)
Published on

ನವದೆಹಲಿ: 1984ರ ಸಿಖ್ ವಿರೋಧಿ ದಂಗೆಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್(Sajjan Kumar) ಅವರನ್ನು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ಈ ಪ್ರಕರಣವು 1984 ನವೆಂಬರ್ 1ರಂದು ಸರಸ್ವತಿ ವಿಹಾರ್ ಪ್ರದೇಶದಲ್ಲಿ ನಡೆದ ತಂದೆ-ಮಗನ ಕೊಲೆಗೆ ಸಂಬಂಧಿಸಿದೆ. ಸಜ್ಜನ್​​ ಕುಮಾರ್​ಗೆ ನೀಡುವ ಶಿಕ್ಷೆಯ ವಿಚಾರವನ್ನು ನ್ಯಾಯಾಲಯವು ಫೆಬ್ರವರಿ 18ರಂದು ಚರ್ಚಿಸಲಿದೆ.

ಈ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಅವರ ಮೇಲೆ ದಂಗೆ ನಡೆಸಿದ ಗುಂಪನ್ನು ಮುನ್ನಡೆಸುತ್ತಿದ್ದರು ಎಂಬ ಆರೋಪವಿದೆ. ಅವರ ಪ್ರಚೋದನೆಯ ಮೇರೆಗೆ ಗುಂಪೊಂದು ಇಬ್ಬರು ಸಿಖ್ಖರನ್ನು ಜೀವಂತವಾಗಿ ಸುಟ್ಟುಹಾಕಿತು ಎಂದು ಆರೋಪಿಸಲಾಗಿದೆ. ಇದಾದ ನಂತರ ಸಂತ್ರಸ್ತರ ಮನೆಯನ್ನು ಲೂಟಿ ಮಾಡಲಾಯಿತು ಮತ್ತು ಆ ಸಮಯದಲ್ಲಿ ಮನೆಯಲ್ಲಿದ್ದ ಇತರ ಜನರು ಗಾಯಗೊಂಡರು ಎನ್ನಲಾಗಿದೆ.

1984 ನವೆಂಬರ್ 1ರಂದು ಜಸ್ವಂತ್ ಸಿಂಗ್ ಮತ್ತು ಅವರ ಮಗ ತರುಣದೀಪ್ ಸಿಂಗ್ ಅವರನ್ನು ಹತ್ಯೆ ಮಾಡಲಾಯಿತು. ಈ ಪ್ರಕರಣವನ್ನು ಪಂಜಾಬಿ ಬಾಗ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಆದರೆ ನಂತರ ವಿಶೇಷ ತನಿಖಾ ತಂಡವು ತನಿಖೆಯನ್ನು ವಹಿಸಿಕೊಂಡಿತು. 2021 ಡಿಸೆಂಬರ್ 16ರಂದು ನ್ಯಾಯಾಲಯವು ಸಜ್ಜನ್ ಕುಮಾರ್ ವಿರುದ್ಧ ಆರೋಪಗಳನ್ನು ರೂಪಿಸಿತು. ಮತ್ತು ಅವರ ವಿರುದ್ಧ ಪ್ರಾಥಮಿಕ ಪ್ರಕರಣವು ಸಾಬೀತಾಗಿದೆ ಎಂದು ಕಂಡುಹಿಡಿದಿದೆ.

ಈ ಪ್ರಕರಣದ ವಿಚಾರಣೆಯ ಸಮಯದಲ್ಲಿ, ಜಸ್ವಂತ್ ಅವರ ಪತ್ನಿಯ ಮನೆಯ ಮೇಲೆ ಗುಂಪೊಂದು ದಾಳಿ ಮಾಡಿದೆ. ಆಕೆಯ ಪತಿ ಮತ್ತು ಮಗನನ್ನು ಕೊಲೆ ಮಾಡಿ ಆಕೆಯ ವಸ್ತುಗಳನ್ನು ಲೂಟಿ ಮಾಡಲಾಯಿತು. ಇದಾದ ನಂತರ ಅವರ ಮನೆಗೆ ಬೆಂಕಿ ಹಚ್ಚಲಾಯಿತು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ಸಜ್ಜನ್ ಕುಮಾರ್ ಪ್ರಸ್ತುತ ದೆಹಲಿ ಕಂಟೋನ್ಮೆಂಟ್‌ನಲ್ಲಿ ಮತ್ತೊಂದು ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ತೀರ್ಪನ್ನು ಪ್ರಕಟಿಸಲು ಸಜ್ಜನ್ ಕುಮಾರ್ ಅವರನ್ನು ತಿಹಾರ್ ಜೈಲಿನಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net