ಸಿಹಿಮೊಗ್ಗೆ ವಶಕ್ಕೆ ಮಾಜಿ ಸಿಎಂ ಮಕ್ಕಳ ಕಾಳಗ?

Shivamogga
Published on

ಅರವಿಂದ ಅಕ್ಲಾಪುರ ಶಿವಮೊಗ್ಗ
ರಾಜ್ಯ ರಾಜಕೀಯದ ಶಕ್ತಿ ಕೇಂದ್ರ ಎಂದೇ ಗುರುತಿಸಲ್ಪಡುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ-ಕಾಂಗ್ರೆಸ್ ನಡುವೆ ಹೋರಾಟ ನಡೆಯಲಿದೆ. 10 ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಮಾಜಿ ಮುಖ್ಯಮಂತ್ರಿಗಳ ಕುಟುಂಬದವರಿಬ್ಬರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಬಿಜೆಪಿಯಿಂದ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರೇ ಸ್ಪರ್ಧಿ ಎಂಬುದರಲ್ಲಿ ಅನುಮಾನವಿಲ್ಲ. ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೂ ಮಾಜಿ ಸಿಎಂ ಎಸ್. ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್​ಕುಮಾರ್ ಸ್ಪರ್ಧಿಸುವ ಸಾಧ್ಯತೆಗಳೇ ಹೆಚ್ಚು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸ್ಪರ್ಧೆ ಮಾಡಲಿ ಎಂದು ಕೆಲ ಕಾಂಗ್ರೆಸ್ ನಾಯಕರು ಬಯಸುತ್ತಿದ್ದಾರೆ. ಆದರೆ, ಮಧು ದಕ್ಷಿಣಕನ್ನಡ ಜಿಲ್ಲೆಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವುದರಿಂದ ಸ್ಪರ್ಧೆಗಿಳಿಯುವುದು ದೂರದ ಮಾತು. ಹೀಗಾಗಿ ಸಹೋದರಿ ಗೀತಾ ಹೆಸರನ್ನು ಸ್ವತಃ ಮಧು ಮುನ್ನೆಲೆಗೆ ತಂದಿದ್ದಾರೆ. ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಕ್ಷೇತ್ರದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ನೇರ ಕಾಳಗ ಏರ್ಪಡಲಿದೆ. 15 ವರ್ಷಗಳ ಹಿಂದಿನ ಚುನಾವಣಾ ಇತಿಹಾಸ ಗಮನಿಸಿದರೆ ಈ ಚುನಾವಣೆಯಲ್ಲೂ ಬಿಜೆಪಿಯೇ ಫೇವರಿಟ್.

ವೈಯಕ್ತಿಕ ವರ್ಚಸ್ಸು: ಮೂರು ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿ ಕೇಂದ್ರದ ಹಲವಾರು ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾಗಿರುವ ಬಿ.ವೈ.ರಾಘವೇಂದ್ರ ವೈಯಕ್ತಿಕ ವರ್ಚಸ್ಸು ಕೂಡ ಹೊಂದಿದ್ದಾರೆ. ಕಡಿಮೆ ಅವಧಿಯಲ್ಲೇ ತಂದೆ ಬಿ.ಎಸ್.ಯಡಿಯೂರಪ್ಪ ನೆರಳಿನಿಂದ ಹೊರಬಂದು ಸ್ವಂತ ಛಾಪು ಮೂಡಿಸಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಬಲವೂ ಸೇರಿಕೊಳ್ಳಲಿದೆ. ಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕ, ಸದಾ ಸಿಗುವ ಸಂಸದ ಎಂದೂ ಗುರುತಿಸಿಕೊಂಡಿದ್ದಾರೆ. ಇವರೇ ಅಭ್ಯರ್ಥಿಯಾಗುವುದು ನಿಶ್ಚಿತವಾಗಿರುವುದರಿಂದ ಬಿಜೆಪಿಯಲ್ಲಿ ಚುನಾವಣೆ ಸಿದ್ಧತೆ ಭರದಿಂದ ನಡೆಯುತ್ತಿವೆ.

ಕೈ ಗ್ಯಾರಂಟಿ ಜಪ: ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಗ್ಯಾರಂಟಿ ಘೊಷಣೆಗಳಿಂದಲೇ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರೇ ಹೇಳುತ್ತಿದ್ದು, ಇದು ಚುನಾವಣೆ ಗೆಲುವಿಗೆ ಸಹಕಾರಿಯಾಗಬಹುದೆಂಬ ಲೆಕ್ಕಾಚಾರ ಕೈ ಪಡೆಯದು. ಜತೆಗೆ ಕೇಂದ್ರ ಸರ್ಕಾರ ಅನುದಾನದ ವಿಷಯ ಎಂಪಿಎಂ, ವಿಐಎಸ್​ಎಲ್ ಕಾರ್ಖಾನೆಗಳು, ಶರಾವತಿ ಸಂತ್ರಸ್ತರು, ಬಗರ್​ಹುಕುಂ ಸಾಗುವಳಿದಾರರ ಸಮಸ್ಯೆಯೂ ಕಾಂಗ್ರೆಸ್ ಹಾಗೂ ಬಿಜೆಪಿ ಚುನಾವಣಾ ಪ್ರಚಾರದ ಸರಕಾಗುವುದು ನಿಶ್ಚಿತ.

ಎರಡು ಬಾರಿ ಮುಖಾಮುಖಿ: ಮಧು ಬಂಗಾರಪ್ಪ 2018ರ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿ 52,148 ಮತಗಳ ಅಂತರದಿಂದ ಬಿ.ವೈ.ರಾಘವೇಂದ್ರ ವಿರುದ್ಧ ಸೋಲು ಕಂಡಿದ್ದರು. 2019ರ ಚುನಾವಣೆಯಲ್ಲೂ ಪರಾಭವಗೊಂಡರು. ಸತತ ಎರಡು ಸೋಲುಂಡ ಮಧು ಬಂಗಾರಪ್ಪ ಈ ಬಾರಿ ಕಾಂಗ್ರೆಸ್ಸನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದಾರೆ.

Smg

ಗೀತಾಗೂ ಸೋಲಿನ ಕಹಿ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ 2014ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಕಣದಲ್ಲಿ ಕಾಣಿಸಿಕೊಂಡಿದ್ದ ಗೀತಾ ಶಿವರಾಜ್​ಕುಮಾರ್ ಪ್ರಚಾರದಲ್ಲಿ ಮುಂದಿದ್ದರು. ಫಲಿತಾಂಶ ಪ್ರಕಟವಾದಾಗ ಗೀತಾ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಕಳೆದ ಚುನಾವಣೆ ಮತ ಲೆಕ್ಕಾಚಾರ: 2019ರಲ್ಲಿ ನಡೆದ ಚುನಾವಣೆಯಲ್ಲಿ 12 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 16,75,975 ಮತದಾರರು ಹಕ್ಕು ಚಲಾಯಿಸುವ ಅವಕಾಶ ಪಡೆದಿದ್ದರು. ಈ ಪೈಕಿ 12,80,363 ಜನರು ಮತ ಚಲಾವಣೆ ಮಾಡಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ವೈ.ರಾಘವೇಂದ್ರ 7,29,872(ಶೇ.55.16), ಕಾಂಗ್ರೆಸ್​ನ ಮಧು ಬಂಗಾರಪ್ಪ- 5,06,512 (ಶೇ.41.41) ಮತ ಪಡೆದಿದ್ದರು 2,23,360 ಮತಗಳ ಅಂತರದ ಗೆಲುವು ಬಿಜೆಪಿಯದ್ದಾಗಿತ್ತು.

ಕಾಂಗ್ರೆಸ್ ಏಳುಬೀಳು: ಇದುವರೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಡೆದಿರುವ ಎರಡು ಉಪಚುನಾವಣೆ ಸೇರಿ 19 ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 9 ಬಾರಿ ಗೆಲುವು ಸಾಧಿಸಿದೆ. 90ರ ದಶಕದ ಮಧ್ಯಭಾಗದಲ್ಲಿ ಮಾಜಿ ಸಿಎಂ ಬಂಗಾರಪ್ಪ ಕಾಂಗ್ರೆಸ್ ತೊರೆಯುವುದರೊಂದಿಗೆ ಆ ಪಕ್ಷದ ಹಿನ್ನಡೆ ಆರಂಭವಾಯಿತು. 2009ರ ಚುನಾವಣೆಯಲ್ಲಿ ಬಂಗಾರಪ್ಪ ಕಾಂಗ್ರೆಸ್​ಗೆ ಮರಳಿ ಸ್ಪರ್ಧಿಸಿದರೂ ಗೆಲುವಿನ ದಡ ಸೇರಲಿಲ್ಲ. ಅಲ್ಲಿಂದ ಕಾಂಗ್ರೆಸ್ ಕೋಟೆ ಬಿಜೆಪಿ ವಶವಾಯಿತು.

ಡಿಕೆಶಿ ಆಫರ್ ನಿರಾಕರಿಸಿದ ಶಿವರಾಜ್​ಕುಮಾರ್: ಕೆಲ ತಿಂಗಳ ಹಿಂದೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದಿದ್ದ ಈಡಿಗರ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹಿರಂಗವಾಗಿ ನಟ ಶಿವರಾಜ್​ಕುಮಾರ್​ಗೆ ಸ್ಪರ್ಧೆ ಮಾಡುವಂತೆ ಆಫರ್ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಶಿವರಾಜ್​ಕುಮಾರ್, ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ. ಪತ್ನಿ ಗೀತಾ ಆಸಕ್ತಿ ಹೊಂದಿದ್ದಾರೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಅಭ್ಯಂತರವಿಲ್ಲ ಎಂದಿದ್ದರು. ಈ ಮೂಲಕ ಶಿವರಾಜ್​ಕುಮಾರ್ ಗೀತಾ ಸ್ಪರ್ಧೆ ದಾಳ ಉರುಳಿಸಿದ್ದಂತೂ ಸುಳ್ಳಲ್ಲ.

ಸಂಸದರ ನಿಧಿ ಬಳಕೆ ದೇಶಕ್ಕೆ 2ನೇ ಸ್ಥಾನ: ಕೇಂದ್ರದ ಇಲಾಖೆಗಳಿಂದ ಕ್ಷೇತ್ರಕ್ಕೆ ಯಾವ್ಯಾವ ಯೋಜನೆ ದೊರೆಯಬಹುದು? ಎಷ್ಟು ಅನುದಾನ ಸಿಗುತ್ತದೆ? ಯೋಜನೆ ಅನುಷ್ಠಾನ ಹೇಗೆ? ಇತ್ಯಾದಿಯನ್ನು ನಿರಂತರ ಫಾಲೋಅಪ್ ಮಾಡುವುದು ಬಿ.ವೈ.ರಾಘವೇಂದ್ರ ಕಾರ್ಯವೈಖರಿ. ರೈಲ್ವೆ, ಏರ್​ವೇ, ಹೈವೆಗೆ ಇವರ ಪ್ರಾಶಸ್ಱ ತುಸು ಹೆಚ್ಚೇ. ಶರಾವತಿ ಸಂತ್ರಸ್ತರ ಭೂಮಿ ಡಿನೋಟಿಫಿಕೇಷನ್ ವಿಚಾರದಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ ಅವರಿಗೆ ಸಮಸ್ಯೆಯ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಂಸದರ ನಿಧಿ ಬಳಕೆಯಲ್ಲಿ ಬಿ.ವೈ.ರಾಘವೇಂದ್ರ ಕಳೆದ ವರ್ಷ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದರು.ಐದು ವರ್ಷಗಳಲ್ಲಿ ತಮ್ಮ ಪಾಲಿನ 17 ಕೋಟಿ ರೂ.ಗಳನ್ನೂ ವಿವಿಧ ಕಾಮಗಾರಿಗಳಿಗೆ ಬಳಕೆ ಮಾಡಿದ್ದಾರೆ. ಸಿಗಂದೂರು ಸೇತುವೆ, ವಿಮಾನ ನಿಲ್ದಾಣ, ಶಿವಮೊಗ್ಗದಲ್ಲಿ ಇಎಸ್​ಐ ಆಸ್ಪತ್ರೆ, ಜೋಗ ಅಭಿವೃದ್ಧಿ, ರೈಲುಗಳ ಸಂಖ್ಯೆ 28ಕ್ಕೆ ಏರಿಕೆ, ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಮಾರ್ಗ ವಿದ್ಯುದ್ದೀಕರಣ ಹೀಗೆ ಕ್ಷೇತ್ರಕ್ಕೆ ಕಾಮಗಾರಿಗಳ ಪಟ್ಟಿ ಬೆಳೆಯುತ್ತದೆ.

ಸದನದಲ್ಲಿ ಹಾಜರಾತಿ: 5 ವರ್ಷಗಳಲ್ಲಿ 101 ದಿನ ಸಂಸತ್ ಅಧಿವೇಶನದಲ್ಲಿ ಭಾಗವಹಿಸಿದ ರಾಘವೇಂದ್ರ 220 ಪ್ರಶ್ನೆ ಕೇಳಿದ್ದಾರೆ. ಶೂನ್ಯ ವೇಳೆಯಲ್ಲಿ ಆರು ಬಾರಿ ವಿವಿಧ ವಿಷಯಗಳ ಬಗ್ಗೆ ಸದನದ ಗಮನ ಸೆಳೆದಿದ್ದಾರೆ. ಅಡಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದು ಜನರ ಸಮಸ್ಯೆಗೆ ಇವರು ಸ್ಪಂದಿಸುವ ರೀತಿಗೆ ಉದಾಹರಣೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net