ಕಾವೇರಿ ನೀರು ವಿವಾದ: ಸರ್ವಪಕ್ಷದ ಸಭೆಗೆ ಹಾಜರಾಗದ್ದಕ್ಕೆ ಮಾಜಿ ಸಿಎಂ ಬೊಮ್ಮಾಯಿ ನೀಡಿದ ಕಾರಣ ಇದು..

Basavaraj Bommai
Published on

ಹಾವೇರಿ: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ವಪಕ್ಷದ ಸಭೆ ನಡೆದಿದ್ದು, ಅದರಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಜರಾಗಿರಲಿಲ್ಲ. ಈ ಕುರಿತು ಅವರು ಇದೀಗ ಕಾರಣ ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದವರು ಸರ್ವಪಕ್ಷದ ಸಭೆ ಕರೆದಿದ್ದರು. ತಡರಾತ್ರಿ ಆಹ್ವಾನ ಬಂದಿದ್ದರಿಂದ ನನಗೆ ಸಭೆಗೆ ಹೋಗಲು ಆಗಿರಲಿಲ್ಲ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕಾವೇರಿ ನೀರಿನ ವಿಚಾರದಲ್ಲಿ ನಾವು ರಾಜ್ಯ ಸರ್ಕಾರದ ಜೊತೆಗಿದ್ದೇವೆ. ರಾಜ್ಯ ಸರ್ಕಾರ ರಾಜ್ಯದ ವಾಸ್ತವ ಸ್ಥಿತಿಯನ್ನು ಸುಪ್ರೀಂಕೋರ್ಟ್​ನಲ್ಲಿ ಗಟ್ಟಿಯಾಗಿ ಪ್ರತಿಪಾದಿಸಬೇಕು ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ನಮ್ಮ ನಿಲುವು ಸ್ಪಷ್ಟವಾಗಿದೆ, ನಾವು ಈಗಾಗಲೇ 16 ರಿಂದ 17 ಟಿಎಂಸಿ ನೀರು ಹರಿಸಿದ್ದೇವೆ. ಮತ್ತೆ ಐದು ಸಾವಿರ ಕ್ಯೂಸೆಕ್ಸ್ ನೀರು ಹರಿಸುವುದು ಸಾಧ್ಯವಿಲ್ಲದ ಮಾತು. ನಮಗೆ ಕುಡಿಯುವ ನೀರಿಗೂ ಕೊರತೆ ಇದೆ. ರಾಜ್ಯ ಸರ್ಕಾರ ಸೆ.12ರ ನಂತರ ನೀರು ಬಿಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್​​ಗೆ ಅಫಿಡವಿಟ್ ಕೊಟ್ಟಿದೆ. ಇದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿರಬೇಕು. ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿ ಗಟ್ಟಿಯಾಗಿ ಪ್ರತಿಪಾದಿಸಬೇಕು ಎಂದು ಅವರು ಹೇಳಿದರು.

ಇನ್ಮು ಮುಂದೆ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ಅಂದು ಹೇಳಿತ್ತು, ಆದರೂ ನೀರು ಬಿಟ್ಟಿದ್ದಾರೆ. ಇವತ್ತು ಸರ್ವಪಕ್ಷದ ಸಭೆ ಕರೆದಿದ್ದು ನೋಡಿದರೆ, ಅವರಿಗೆ ಸುಪ್ರೀಂ ಕೋರ್ಟ್​​ನಲ್ಲಿ ಪ್ರತಿಪಾದಿಸಲು ಸಾಧ್ಯವಾಗುತ್ತಿಲ್ಲ. ಮತ್ತೆ ಒತ್ತಡಕ್ಕೆ ಸಿಲುಕಿಕೊಂಡಿದ್ದಾರೆ. ನಾವು ಸರ್ಕಾರದ ಜೊತೆಗಿದ್ದೇವೆ, ಸರಕಾರ ತಮಿಳುನಾಡಿನ ಒತ್ತಡಕ್ಕೆ ಮಣಿಯಬಾರದು. ಈ ಸಂದರ್ಭದಲ್ಲಿ ರಾಜ್ಯದ ನಾಯಕತ್ವ ಎಷ್ಟು ಗಟ್ಟಿಯಾಗಿದೆ ಎಂದು ತೋರಿಸಿಕೊಡಬೇಕಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net