

ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂ. ಪಡೆದು ವಂಚಿಸಿದ್ದಾಳೆ ಎಂಬ ಆರೋಪದ ಮೇಲೆ ಸಿಕ್ಕಿಬಿದ್ದಿರುವ ಚೈತ್ರ ಕುಂದಾಪುರ ಮತ್ತೆ ಮತ್ತೆ ಕಣ್ಣೀರು ಹಾಕಿದ್ದಾಳೆ. ಪೊಲೀಸರ ಬಳಿ ಅತ್ತಿರುವ ಚೈತ್ರಾ, ಬಳಿಕ ನ್ಯಾಯಾಧೀಶರ ಮುಂದೆಯೂ ಅತ್ತು ಅಲವತ್ತುಕೊಂಡಿದ್ದಾಳೆ.
ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಚೈತ್ರಾ ಹಾಗೂ ಇತರ ಆರೋಪಿಗಳನ್ನು ಪ್ರಾಥಮಿಕ ತನಿಖೆಗೆ ಒಳಪಡಿಸಿದ ಬಳಿಕ ಇಂದು ಮೂರನೇ ಎಸಿಎಂಎಂ ಕೋರ್ಟ್ನಲ್ಲಿ ಸಿಸಿಬಿ ಪೊಲೀಸರು ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ನ್ಯಾಯಾಧೀಶರ ಮುಂದೆ ಚೈತ್ರಾ ಕಣ್ಣೀರು ಹಾಕಿದ್ದಾಳೆ.
ಉಡುಪಿ ಪೊಲೀಸರು ಸ್ವಲ್ಪ ತೊಂದರೆ ಕೊಟ್ಟಿದ್ದಾರೆ ಎಂದು ಆರೋಪಿಸಿರುವ ಚೈತ್ರಾ, ಪೊಲೀಸರು ಬಂಧನದ ಬಗ್ಗೆ ನಮ್ಮ ಮನೆಯವರಿಗೆ ಮಾಹಿತಿ ನೀಡಿರಲಿಲ್ಲ ಎಂದಿದ್ದಾಳೆ. ಫೋನ್ ನಂಬರ್ ಕೊಟ್ಟರೂ ಕರೆ ಮಾಡಿಲ್ಲ, ಉಡುಪಿ ಪೊಲೀಸರು ತೊಂದರೆ ಕೊಟ್ಟಿದ್ದಾರೆ, ಬೆಂಗಳೂರು ಪೊಲೀಸರು ತೊಂದರೆ ಮಾಡಿಲ್ಲ ಎಂದಿದ್ದಾಳೆ.
ದೂರು ಯಾರು ನೀಡಿದ್ದಾರೆ, ಏನು ದೂರು ಎಂಬುದು ಗೊತ್ತಿಲ್ಲ ಎಂದಿರುವ ಚೈತ್ರಾ, ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ್ದಾಳೆ. ಪೊಲೀಸರು ಬಂಧಿಸಲು ಹೋಗಿದ್ದಾಗ ಆಕ್ಷೇಪ ವ್ಯಕ್ತಪಡಿಸಿದ್ದ ಚೈತ್ರಾ, ಬಳಿಕ ಸಿಸಿಬಿ ಪೊಲೀಸರು ಕಚೇರಿಗೆ ಕರೆತಂದಾಗ ಅಲ್ಲಿಯೂ ಕಣ್ಣೀರು ಹಾಕಿದ್ದಾಳೆ. ನಾನೇನೂ ತಪ್ಪು ಮಾಡಿಲ್ಲ, ನಾನೊಬ್ಬಳೇ ಇದರಲ್ಲಿ ಭಾಗಿಯಾಗಿಲ್ಲ, ಇನ್ನೂ ಕೆಲವರು ಭಾಗಿಯಾಗಿದ್ದಾರೆ ಎಂದು ಕಣ್ಣೀರು ಹಾಕಿದ್ದಾಳೆ.