ಗೆಜೆಟಿಯರ್ ರಚನೆಗೆ ಗ್ರಹಣ; ಆಮೆಗತಿಯಲ್ಲಿ ಪ್ರಕ್ರಿಯೆ..

vidhana soudha
Published on

| ರಮೇಶ ಮೇಳಕುಂದಾ ಕಲಬುರಗಿ

ಸ್ಥಳೀಯ ಸಮಗ್ರ ಇತಿಹಾಸ, ಅಧಿಕೃತ ಮಾಹಿತಿ ನೀಡುವ ಜಿಲ್ಲಾ ಮತ್ತು ತಾಲೂಕು ಗೆಜೆಟಿಯರ್​ಗಳ ರಚನೆ ಕಾರ್ಯ ಆಮೆ ವೇಗದಲ್ಲಿ ಸಾಗುತ್ತಿದೆ. ಇದರಿಂದಾಗಿ ಅಧ್ಯಯನಕಾರರು, ಸಂಶೋಧಕರು, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಕನ್ನಡಿಗರಿಗೆ ಸಮಗ್ರ ಮಾಹಿತಿ ಪುಸ್ತಕಗಳು ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಇಡೀ ಜಿಲ್ಲೆಯ ಇತಿಹಾಸ, ಭೌಗೋಳಿಕ ವ್ಯಾಪ್ತಿ, ಆಡಳಿತ, ಅರಣ್ಯ, ವಿಭಾಗ, ಕಚೇರಿ, ತಾಲೂಕು ಸೇರಿ ವೈವಿಧ್ಯಮಯ ಮತ್ತು ಸಮಗ್ರ ಮಾಹಿತಿಯ ಗುಚ್ಛ ಹೊಂದಿರುವ ಗೆಜೆಟಿಯರ್ ರಚನೆ ವಿಷಯದಲ್ಲಿ ಸರ್ಕಾರ ಮತ್ತು ಸಂಬಂಧಿತ ಇಲಾಖೆ ನಿರಾಸಕ್ತಿ ವಹಿಸುತ್ತಿರುವುದೇ ವಿಳಂಬಕ್ಕೆ ಕಾರಣ ಎನ್ನಲಾಗಿದೆ.

ರಾಜ್ಯದ 31 ಜಿಲ್ಲೆಗಳ ಪೈಕಿ 20 ಜಿಲ್ಲೆಗಳ ಆಂಗ್ಲ ಗೆಜೆಟಿಯರ್​ಗಳು ಲಭ್ಯವಿವೆ. 11 ಜಿಲ್ಲೆಗಳ ಕನ್ನಡ ಗೆಜೆಟಿಯರ್ ರಚಿಸಲಾಗಿದ್ದು, ಉಳಿದ ಜಿಲ್ಲೆಗಳ ಸಂಬಂಧ ಕ್ರಿಯಾಯೋಜನೆ, ಸಂಪುಟ ಹೊರತರುವ ಪ್ರಕ್ರಿಯೆ ಹಂತದಲ್ಲೇ ಇದೆ. ಎರಡು ದಶಕವಾದರೂ ಪೂರಕ ಕಾರ್ಯಗಳು ವೇಗ ಪಡೆದುಕೊಳ್ಳದಿರುವುದು ಸಂಬಂಧಿತರ ನಿರಾಸಕ್ತಿ ತೋರಿಸುತ್ತದೆ. ಅತ್ಯಂತ ನಿಖರ, ಅಧಿಕೃತ ಮಾಹಿತಿಯುಳ್ಳ, ಅಂಕಿ-ಅಂಶ, ಜನಸಂಖ್ಯೆ, ಸಂಸ್ಕೃತಿ, ಇತಿಹಾಸ, ಹೋರಾಟ, ಆಡಳಿತ, ರಾಜಕಾರಣ ಸೇರಿ ವಿವಿಧ ವಿಷಯಗಳು ಇದರಲ್ಲಿ ಇರುವುದರಿಂದ ಲೇಖಕರು, ಇತಿಹಾಸಕಾರರು, ಸಂಶೋಧನಾ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಈ ಪುಸ್ತಕಗಳನ್ನು ಅವಲಂಬಿಸಿರುತ್ತಾರೆ. ಸಮಗ್ರ ಸಂಪುಟ ಇಲ್ಲದಿರುವುದರಿಂದ ತೊಂದರೆಯಾಗುತ್ತಿದೆ.

ಹೊಸತಿಲ್ಲ, ಹಳೆಯದೇ ಎಲ್ಲ: ಕಲಬುರಗಿ, ಬೀದರ್, ಕೊಡಗು, ಧಾರವಾಡ, ವಿಜಯಪುರ, ಮಂಡ್ಯ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ತುಮಕೂರು ಜಿಲ್ಲೆಗಳ ಗೆಜೆಟಿಯರ್​ಗಳಿವೆ. ಆದರೆ ಇವು ರಚನೆಯಾಗಿ ಸುಮಾರು 2 ದಶಕವಾಗಿದ್ದು, ಹೆಚ್ಚಿನ ಅಂಶಗಳನ್ನು ಸೇರಿಸಿ ಮರು ಮುದ್ರಣ ಮಾಡಬೇಕಿದೆ. ಹಳೆಯ 9 ಮತ್ತು 11 ಹೊಸ ಜಿಲ್ಲೆಗಳ ಗೆಜೆಟಿಯರ್ ರಚನೆಯೇ ಆಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net