

ಸಿಡ್ನಿ: ಪ್ರಾಣಿ ಪ್ರಪಂಚದಲ್ಲಿ ಜಿರಾಫೆ ಎಂದರೇನೇ ಅದರ ಎತ್ತರ ರೂಪ ಕಣ್ಣಮುಂದೆ ಬಂದು ನಿಲ್ಲುತ್ತದೆ. ಅಂಥದ್ರದಲ್ಲೂ ಗಿನ್ನೆಸ್ ದಾಖಲೆ ಎಂದರೆ ಆ ಜಿರಾಫೆ ಎಷ್ಟು ಎತ್ತರ ಇರಬಹುದು! ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನ ಮೃಗಾಲಯದಲ್ಲಿ ಇರುವ ಜಿರಾಫೆಯೊಂದು ಅದರ ಎತ್ತರದ ಕಾರಣಕ್ಕೇ ಗಿನ್ನೆಸ್ ದಾಖಲೆಗೆ ಭಾಜನವಾಗಿದೆ.
ಗಿನ್ನೆಸ್ ದಾಖಲೆ ನಿರ್ಮಿಸಿದ ಜಿರಾಫೆಯ ವಯಸ್ಸು 12. ಹೆಸರು ಫಾರೆಸ್ಟ್! ನ್ಯೂಜಿಲೆಂಡ್ನ ಆಕ್ಲಂಡ್ ಮೃಗಾಲಯದಲ್ಲಿ 2007ರಲ್ಲಿ ಜನಿಸಿದ ಫಾರೆಸ್ಟ್ ಎರಡು ವರ್ಷ ವಯಸ್ಸಿದ್ದಾಗ ಆಸ್ಟ್ರೇಲಿಯಾದ ಮೃಗಾಲಯಕ್ಕೆ ರವಾನೆಯಾಗಿದೆ. ಅದೀಗ 12 ಮರಿಗಳ ಅಪ್ಪ!
ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿರುವ ಈ ಜಿರಾಫೆಯ ಎತ್ತರ 18 ಅಡಿ 8 ಇಂಚು. ಇದುವರೆಗೆ ಅಳತೆ ಮಾಡಲಾದ ಜಿರಾಫೆಗಳ ಪೈಕಿ ಇದುವೇ ಅತಿ ಎತ್ತರದ್ದು ಎಂಬ ಕೀರ್ತಿಗೆ ಫಾರೆಸ್ಟ್ ಭಾಜನವಾಗಿದೆ. ಹೀಗಾಗಿ ಫಾರೆಸ್ಟ್ ಹೆಸರಿನಲ್ಲಿ ಗಿನ್ನೆಸ್ ದಾಖಲೆಯ ಪ್ರಮಾಣಪತ್ರವೂ ಮುದ್ರಿತವಾಗಿದೆ. ಅದನ್ನು ಮೃಗಾಲಯಕ್ಕೆ ಹಸ್ತಾಂತರಿಸಿದೆ ಗಿನ್ನೆಸ್ ಸಂಸ್ಥೆ. (ಏಜೆನ್ಸೀಸ್)