

ಬೆಂಗಳೂರು: ಬಟ್ಟೆ ವ್ಯಾಪಾರದಲ್ಲಿ ನಷ್ಟ ಉಂಟಾಗಿದ್ದರಿಂದ ಅಡ್ಡದಾರಿಯಲ್ಲಿ ಹಣ ಸಂಪಾದಿಸುವ ಸಲುವಾಗಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಐವರಿ ಕೋಸ್ಟ್ ಮೂಲದ ಐಸಿ ಕ್ರಿಸ್ಟೋಫರ್ (34) ಬಂಧಿತ. ಈತನಿಂದ 6 ಕೋಟಿ ರೂ. ಮೌಲ್ಯದ 4 ಕೆ.ಜಿ. ಎಂಡಿಎಂಎ ಕ್ರಿಸ್ಟೆಲ್ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಎಲೆಕ್ಟ್ರಾನಿಕ್ಸ್ ಸಿಟಿಯ ಬೆಟ್ಟದಾಸನಪುರದ ಮನೆಯಲ್ಲಿ ವಿದೇಶಿ ಪ್ರಜೆ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕಾರ್ಯಾಚರಣೆ ನಡೆಸಲಾಯಿತು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಬಿಜಿನೆಸ್ ವೀಸಾದಡಿ ಕೆಲ ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಕ್ರಿಸ್ಟೋಫರ್ ತಮಿಳುನಾಡಿನ ಕೊಯಮತ್ತೂರಿನಲ್ಲಿ ನೆಲೆಸಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ. ವ್ಯಾಪಾರದಲ್ಲಿ ನಷ್ಟ ಉಂಟಾದ ಹಿನ್ನೆಲೆ 4 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ವಿದೇಶಿ ಪ್ರಜೆಗಳ ಸಂಪರ್ಕ ಸಾಧಿಸಿ ಡ್ರಗ್ಸ್ ದಂಧೆ ಶುರು ಮಾಡಿದ್ದ. ಮುಂಬೈನಲ್ಲಿರುವ ಸ್ನೇಹಿತರಿಂದ ಕಡಿಮೆ ಬೆಲೆಗೆ ಎಂಡಿಎಂಎ ಕ್ರಿಸ್ಟೆಲ್ ಖರೀದಿಸುತ್ತಿದ್ದ.
ಅಲ್ಲಿಂದ ಮಕ್ಕಳು ಸೇವಿಸುವ ಸೆರೆಲ್ಯಾಕ್ ಪುಡಿಯ ಪೊಟ್ಟಣ, ಸೌಂದರ್ಯವರ್ಧಕ ವಸ್ತುಗಳ ಬಾಕ್ಸ್‌ಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ಬೆಂಗಳೂರಿಗೆ ತರುತ್ತಿದ್ದ. ಬಳಿಕ ಐಟಿ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಪರಿಚಿತರಿಗೆ 1 ಗ್ರಾಂಗೆ 12 ಸಾವಿರ ರೂ. ನಿಂದ 15 ಸಾವಿರ ರೂ.ವರೆಗೆ ಮಾರಾಟ ಮಾಡುತ್ತಿದ್ದ.