ಮಾಲೀಕನೇ ಇಲ್ಲದ ಖಾರ ಬೂಂದಿ ಬ್ಯಾಗ್​ನಲ್ಲಿದ್ದ ಭರ್ಜರಿ ದುಡ್ಡು ಯಾರ ಪಾಲಾಯ್ತು?

Snaks
Published on

ಹೈದರಾಬಾದ್​: ಖಾರ ಬೂಂದಿ ತುಂಬಿದ ಪ್ಯಾಕೆಟ್​ನಲ್ಲಿ ಕದ್ದು ಸಾಗಿಸುತ್ತಿದ್ದ 54 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಅನ್ನು ರಾಜೀವ್​ ಗಾಂಧಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಖಚಿತ ಮಾಹಿತಿಮೇರೆಗೆ ವಿಮಾನ ನಂಬರ್​ ಇಕೆ-525 ಮೂಲಕ ದುಬೈಗೆ ಸಾಗಿಸುತ್ತಿದ್ದ ಖಾರಾ ಬೂಂದಿ ಪ್ಯಾಕೆಟ್​ ತುಂಬಿದ ಬ್ಯಾಗ್​ ಅನ್ನು ವಶಪಡಿಸಿಕೊಂಡು ಪರಿಶೀಲಿಸಿದಾಗ ಬೂಂದಿಯೊಳಗೆ ಸೇರಿಸಿದ್ದ 54 ಲಕ್ಷ ರೂ. ಮೌಲ್ಯದ ಹಣವನ್ನು ಅಧಿಕಾರಿಗಳು ಸೀಜ್​ ಮಾಡಿದ್ದಾರೆ.

ಪ್ರತಿ ಪ್ಯಾಕೆಟ್​ನಲ್ಲಿ ಹಣವನ್ನು ಕವರ್​ ಮಾಡಿ ತುಂಬಲಾಗಿತ್ತು. ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಬ್ಯಾಗ್​ನ ಮಾಲೀಕ ಯಾರೆಂಬುದು ಇನ್ನು ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಮಾನದಲ್ಲಿ ಕಳ್ಳಸಾಗಾಣೆ ಮಾಡುವ ಪ್ರಕರಣಗಳು ಹೊಸದೇನಲ್ಲ. ಈಗಾಗಲೇ ಆಹಾರ, ಬಟ್ಟೆ, ಬ್ಯಾಗ್​, ಬೆಲ್ಟ್​, ಶೂ ಸೇರಿದಂತೆ ಅನೇಕ ಪದಾರ್ಥಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಕೆಲವೊಮ್ಮೆ ವಿಶೇಷ ಪ್ರಾಣಿಗಳನ್ನು ಬಚ್ಚಿಟ್ಟು ಸಾಗಿಸುವಾಗ ಕಸ್ಟಮ್ಸ್​ ಅಧಿಕಾರಿಗಳ ಕೈಯಲ್ಲಿ ಸಿಲುಕಿಕೊಳ್ಳುವ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net