

ಸಾಗರ: ಪಟ್ಟಣದ ಶ್ರೀನಗರದ 8ನೇ ವಾರ್ಡ್ ನಿವಾಸಿಗಳು ಓಡಾಡುವ ರಸ್ತೆಯನ್ನು ಒತ್ತುವರಿ ಮಾಡಿ ವ್ಯಕ್ತಿಯೊಬ್ಬರು ಶೌಚಗುಂಡಿ ನಿರ್ಮಿಸಿರುವುದನ್ನು ತೆರವುಗೊಳಿಸುವಂತೆ ಆಗ್ರಹಿಸಿ ನಿವಾಸಿಗಳು ನಗರಸಭೆ ಆಡಳಿತಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ವಾರ್ಡ್‌ನ 15 ಮನೆಗಳ ನಿವಾಸಿಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕು. ರಸ್ತೆ ನಡುವೆ ಶೌಚಗುಂಡಿ ನಿರ್ಮಿರುವುದು ಸಾರ್ವಜನಿಕರಿಗೆ ತೊಂದರೆಯಾಗಿದೆ. ನಗರಸಭೆಗೆ ಈ ಬಗ್ಗೆ ಅನೇಕ ಬಾರಿ ಮನವಿ ಕೊಟ್ಟಿದ್ದು, ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆಯಲ್ಲಿ ಶೌಚಗುಂಡಿ ನಿರ್ಮಿಸಲು ನಗರಸಭೆಯಿಂದ ಅನುಮತಿ ಪಡೆದಿಲ್ಲ. ಅನಧಿಕೃತವಾಗಿ ಕೆಲಸ ಮಾಡುತ್ತಿದ್ದು, ರಸ್ತೆ ಅಕ್ಕಪಕ್ಕ ಚರಂಡಿ ಹಾಕಿರುವ ಚಪ್ಪಡಿ ಕಲ್ಲು ತೆಗೆದಿರುತ್ತಾರೆ ಎಂದು ದೂರಿದರು.
ನಗರಸಭೆ ಅಧಿಕಾರಿಗಳು ರಸ್ತೆ ಅಳತೆ ಮಾಡಿ ಒತ್ತುವರಿ ತೆರವುಗೊಳಿಸಬೇಕು. ರಸ್ತೆ ಒತ್ತುವರಿ ಮಾಡಿ ನಿರ್ಮಿಸಿದ ಶೌಚಗುಂಡಿ ಮುಚ್ಚಿಸಿ ನಮಗೆ ಓಡಾಡಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
8ನೇ ವಾರ್ಡ್ ನಿವಾಸಿಗಳಾದ ಮಂಜುನಾಥ್, ಭಾರತಿ, ಗಜಾನನ ಹೆಗಡೆ, ಕುಮಾರಸ್ವಾಮಿ, ಕೃಷ್ಣ, ದಲಿತ ಸಂಘರ್ಷ ಸಮಿತಿಯ ಪರಮೇಶ್ವರ ದೂಗೂರು, ರವಿ ಕುಗ್ವೆ ಹಾಜರಿದ್ದರು.