

ನಾವೀನ್ಯತೆ ಮತ್ತು ಉದ್ಯಮಶೀಲತೆ ಪರಿಸರವನ್ನು ಬೆಂಗಳೂರಿನಾಚೆಗೂ ಸೃಷ್ಟಿಸಲು ಮುಂದಾಗಿರುವ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷ 200 ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಿದೆ. ಇದೊಂದು ಮಹತ್ವದ ಉಪಕ್ರಮ. ಎಲ್ಲವೂ ಬೆಂಗಳೂರು ಕೇಂದ್ರೀತವಾಗಿ ಬೆಳೆಯುತ್ತಿರುವುದರಿಂದ ಎರಡನೇ ಹಂತದ ನಗರಗಳ ಅಭಿವೃದ್ಧಿ ಯಾವಾಗ ಎಂಬ ಅಸಮಾಧಾನದ ಕೂಗು ಬಹುದಿನಗಳಿಂದ ಕೇಳಿಬರುತ್ತಿದೆ. ಬೇರೆ ಪ್ರದೇಶಗಳಲ್ಲಿ ಕೈಗಾರಿಕೆಗಳು, ನವೋದ್ಯಮಗಳು ಸ್ಥಾಪನೆಯಾಗುವುದರಿಂದ ಸ್ಥಳೀಯವಾಗಿ ಉದ್ಯೋಗಸೃಷ್ಟಿಗೆ ಉತ್ತೇಜನ ಸಿಗುತ್ತದೆ. ಅಲ್ಲದೆ, ಬೆಂಗಳೂರು ಸೇರಿದಂತೆ ಇತರ ಮಹಾನಗರಗಳಿಗೆ ವಲಸೆ ಹೋಗುವ ಪ್ರಮಾಣ ತಗ್ಗುತ್ತದೆ.
ರಾಜಧಾನಿ ಬೆಂಗಳೂರು ಈಗಾಗಲೇ ತನ್ನ ಧಾರಣಾಸಾಮರ್ಥ್ಯವನ್ನು ಮೀರಿ ಬೆಳೆದಿದೆ. ಅಕ್ಕಪಕ್ಕದ ಜಿಲ್ಲೆಗಳಿಗೂ ‘ಬೆಂಗಳೂರು’ ಎಂಬ ಹೆಸರು ಅಂಟಿಕೊಂಡಿದೆ. ಆದರೆ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದ ಪ್ರದೇಶಗಳು ಇಂದಿಗೂ ಪ್ರಾದೇಶಿಕ ಅಸಮತೋಲನದ ವ್ಯತಿರಿಕ್ತ ಪರಿಣಾಮವನ್ನು ಎದುರಿಸುತ್ತಿದ್ದು, ಯುವಕರು ಉದ್ಯೋಗಕ್ಕಾಗಿ ದೊಡ್ಡ ಶಹರಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಆಯಾ ಜಿಲ್ಲೆಗಳ ಸಂಪನ್ಮೂಲ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಸದುಪಯೋಗ ಪಡಿಸಿಕೊಂಡರೆ, ಸಮಗ್ರ ವಿಕಾಸದ ಆಶಯಕ್ಕೆ ಬಲ ಬರಬಹುದು. ಸ್ಥಳೀಯ ಆರ್ಥಿಕ ಆಕ್ಸಿಲರೇಟರ್ ಕಾರ್ಯಕ್ರಮ (ಲೀಪ್)ವನ್ನು ಮುಂಗಡಪತ್ರದಲ್ಲಿ ಘೋಷಣೆ ಮಾಡಿದ್ದ ಸರ್ಕಾರ, ಈಗ ಜಾರಿಗೆ ಮುಂದಾಗಿದೆ. ಲೀಪ್ ಯೋಜನೆಯನ್ನು ರಾಜ್ಯದ ಐದು ಪ್ರದೇಶದಲ್ಲಿ ಅಭಿವೃದ್ಧಿಪಡಿಸಲು ನೀಲಿನಕ್ಷೆ ಸಿದ್ಧಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಕೇಂದ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳದೆ, ಒಂದು ಪರಿಸರ ಪ್ರದೇಶವನ್ನು ಪರಿಗಣಿಸಲಾಗಿರುವುದು ಉತ್ತಮ ಅಂಶ. ಈ ಯೋಜನೆಯಡಿಯಲ್ಲಿ ಮೈಸೂರು, ಬೆಳಗಾವಿ, ಕಲಬುರಗಿ, ಮಂಗಳೂರು-ಉಡುಪಿ-ಮಣಿಪಾಲ ಮತ್ತು ಹುಬ್ಬಳ್ಳಿ- ಧಾರವಾಡ ಪ್ರದೇಶದಲ್ಲಿ ಇನ್ಕ್ಯುಬೇಟರ್ಗಳು, ಆಕ್ಸಿಲರೇಟರ್ಗಳು, ಉತ್ಕೃಷ್ಟತಾ ಕೇಂದ್ರ ಮತ್ತು ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಮುಖ್ಯವಾಗಿ, ನವೋದ್ಯಮ ಸ್ಥಾಪಿಸಲು ಬೆಂಗಳೂರಿಗೇ ಬರಬೇಕು ಎಂಬ ಅನಿವಾರ್ಯತೆಯನ್ನು ತಪ್ಪಿಸಲು ಇತರ ಪ್ರದೇಶದಲ್ಲೂ ಅಗತ್ಯ ಉದ್ಯಮಶೀಲತಾ ವಾತಾವರಣವನ್ನು ಸೃಷ್ಟಿಸುವ ಉದ್ದೇಶ ಸ್ವಾಗತಾರ್ಹವಾಗಿದೆ. ನವೀನ ಚಿಂತನೆಯ ನವೋದ್ಯಮಗಳ ಪ್ರಯೋಗಕ್ಕೂ ಸರ್ಕಾರ ಮನಸ್ಸು ಮಾಡಿದೆ. ಇದಕ್ಕಾಗಿ, ‘ಸ್ಯಾಂಡ್ಬಾಕ್ಸ್’ ವೇದಿಕೆಯಲ್ಲಿ ನೋಂದಣಿ ಮಾಡಿಕೊಂಡು, ಅನುಷ್ಠಾನಕ್ಕೆ ತರುವ ಅವಕಾಶ ಕಲ್ಪಿಸಲಾಗುತ್ತಿದೆ.
ಇಲ್ಲಿ ಕೆಲ ಪ್ರಾಯೋಗಿಕ ಅಂಶಗಳನ್ನೂ ಗಮನಿಸಬೇಕು. ಮಾಹಿತಿ-ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ಕಂಪನಿಗಳು ಸೇರಿದಂತೆ ಇತರ ವಲಯದ ಕೈಗಾರಿಕೆಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸ್ಥಾಪಿಸುವ ಪ್ರಯತ್ನ ಈ ಹಿಂದೆಯೂ ನಡೆದಿದೆ. ಆದರೆ, ಸ್ಥಳೀಯವಾಗಿ ಮೂಲಸೌಕರ್ಯಗಳ ಕೊರತೆ, ಅಧಿಕಾರಿಗಳ ಅಸಹಕಾರ, ಸರ್ಕಾರಿ ಮಂಜೂರಾತಿ ಪ್ರಕ್ರಿಯೆಯಲ್ಲಿನ ವಿಳಂಬ ನೀತಿಯಿಂದ ರೋಸಿಹೋಗಿ ಉದ್ಯಮಿಗಳು ಹಿಂದಡಿ ಇಟ್ಟದ್ದೂ ಇದೆ. ಈಗ ಮತ್ತೆ ಅಂಥ ಸ್ಥಿತಿ ಸೃಷ್ಟಿಯಾಗದಂತೆ ಕಾಳಜಿ ವಹಿಸಬೇಕಿದೆ. ಉದ್ಯಮಕ್ಕೆ ಬೇಕಾದ ಮೂಲಸೌಕರ್ಯ ಮತ್ತು ನವೀನ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಒದಗಿಸಿದರೆ ಮಾತ್ರ ಉದ್ಯಮಗಳು ಎರಡನೇ ಹಂತದ ನಗರಗಳತ್ತ ಮುಖ ಮಾಡಬಲ್ಲವು. ಹಾಗಾಗಿ, ಹಳೆಯ ತಪ್ಪುಗಳಿಂದ ಪಾಠ ಕಲಿತು ಸರ್ಕಾರ ವಿವೇಚನೆಯಿಂದ ಹೆಜ್ಜೆ ಇಡಲಿ. ಆಯಾ ಭಾಗವನ್ನು ಪ್ರತಿನಿಧಿಸುವ ಸಚಿವರು ಮತ್ತು ಶಾಸಕರು ಕೂಡ ಈ ವಿಷಯದಲ್ಲಿ ಕಾಳಜಿ ವಹಿಸಿ, ಉದ್ಯಮಶೀಲತೆಯ ವಾತಾವರಣ ವಿಸ್ತರಿಸಲು ಬದ್ಧತೆ ತೋರಬೇಕು.