

ಬೆಂಗಳೂರು: ಟ್ವಿಟರ್ ಖರೀದಿಸಿ ಬಹಳಷ್ಟು ಬದಲಾವಣೆ ಮಾಡಿ ಅದರ ಹೆಸರನ್ನು ಎಕ್ಸ್ ಎಂದು ಬದಲಾಯಿಸಿರುವ ಎಲಾನ್ ಮಸ್ಕ್ ಇದೀಗ ಬಳಕೆದಾರರಿಗೆ ಇನ್ನೊಂದು ಶಾಕ್ ನೀಡಿದ್ದಾರೆ. ಆ ಪ್ರಕಾರ ಎಕ್ಸ್ ಬಳಸುವವರು ವಾರ್ಷಿಕ ಚಂದಾ ನೀಡುವುದು ಅನಿವಾರ್ಯ ಆಗಲಿದೆ.
ಇತ್ತೀಚಿನ ಬದಲಾವಣೆ ಪ್ರಕಾರ ಎಕ್ಸ್ ಬಳಸಲು ವಾರ್ಷಿಕ ಒಂದು ಡಾಲರ್ ನೀಡಬೇಕಾಗುತ್ತದೆ. ಸಮಾಧಾನದ ಸಂಗತಿ ಎಂದರೆ ಇದನ್ನು ಎಲ್ಲರಿಗೂ ಅನ್ವಯಿಸಿಲ್ಲ. ಸದ್ಯ ಪ್ರಾಯೋಗಿಕವಾಗಿ ಫಿಲಿಪ್ಪೈನ್ಸ್ ಮತ್ತು ನ್ಯೂಜಿಲೆಂಡ್ನಲ್ಲಿ ಅದೂ ಹೊಸ ಬಳಕೆದಾರರಿಗೆ ಸೀಮಿತವಾಗಿ ಇದನ್ನು ಜಾರಿಗೆ ತರಲಾಗಿದೆ.
ಹೀಗಾಗಿ ಅಲ್ಲಿನ ಹೊಸ ಬಳಕೆದಾರರು ಪೋಸ್ಟ್, ರಿಪೋಸ್ಟ್, ಲೈಕ್, ಬುಕ್ಮಾರ್ಕ್ ಇತ್ಯಾದಿಗಳನ್ನು ಮಾಡಬೇಕು ಎಂದರೆ 1 ಡಾಲರ್ ನೀಡಿ ವಾರ್ಷಿಕ ಚಂದಾ ಪಡೆದಿರಬೇಕು. ಇದನ್ನು ಪಾವತಿ ಮಾಡದವರಿಗೆ ರೀಡ್ ಓನ್ಲಿ ಆಪ್ಷನ್ ಮಾತ್ರ ಲಭ್ಯವಿರಲಿದ್ದು, ಅವರು ಎಕ್ಸ್ ಪೋಸ್ಟ್ಗಳನ್ನು ನೋಡುವುದು ಮತ್ತು ಓದುವುದು ಮಾತ್ರ ಸಾಧ್ಯವಾಗಲಿದೆ. ಈಗಾಗಲೇ ಇರುವ ಬಳಕೆದಾರರಿಗೆ ಇದು ಅನ್ವಯಿಸುತ್ತಿಲ್ಲ.
ನಾನು ಫ್ರೀ ಸ್ಪೀಚ್ ಪರ ಎಂದು ಹೇಳುತ್ತಲೇ ಬಂದಿರುವ ಎಲಾನ್ ಮಸ್ಕ್ ಅವರ ಈ ನಡೆ ಫ್ರೀಡಂ ಆಫ್ ಸ್ಪೀಚ್ ಫ್ರೀ ಅಲ್ಲ ಎಂಬ ಸಂದೇಶ ರವಾನಿಸಿದಂತಿದೆ. ಕೆಲವು ದಿನಗಳ ಹಿಂದೆ ಮಾರ್ಕ್ ಜುಕರ್ಬರ್ಗ್ ಕೂಡ ಫೇಸ್ಬುಕ್-ಇನ್ಸ್ಟಾಗ್ರಾಂ ವಿಚಾರದಲ್ಲಿ ಇಂಥದ್ದೇ ಒಂದು ಕ್ರಮಕೈಗೊಂಡಿದ್ದರು.