

ಲಂಡನ್: ಯುನೈಟೆಡ್ ಕಿಂಗ್ಡಮ್ನ ರಾಣಿ ಎಲಿಜಬೆತ್ II ಅವರ ಅಂತಿಮಸಂಸ್ಕಾರ ಲಂಡನ್ನ ವೆಸ್ಟ್ಮಿನಿಸ್ಟರ್ ಅಬೆನಲ್ಲಿ ಇಂದು ನಡೆಯುತ್ತಿದ್ದು, ಇದರಲ್ಲಿ ದೇಶ-ವಿದೇಶದ 2000ಕ್ಕೂ ಅಧಿಕ ಗಣ್ಯರು ಪಾಲ್ಗೊಂಡಿದ್ದಾರೆ.
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಸೇರಿ ದೇಶ-ವಿದೇಶದ 2 ಸಾವಿರಕ್ಕೂ ಅಧಿಕ ಗಣ್ಯರು ಇದಕ್ಕೆ ಸಾಕ್ಷಿಯಾಗಿದ್ದು, ಈ ಮೂಲಕ 11 ದಿನಗಳ ಶೋಕಾಚರಣೆ ಇದರೊಂದಿಗೆ ಅಂತ್ಯಗೊಳ್ಳಲಿದೆ. ಬ್ರಿಟನ್ನ ಪ್ರಥಮ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಅವರ ಅಂತ್ಯಸಂಸ್ಕಾರ 1965ರಲ್ಲಿ ಜಾಗತಿಕ ಗಮನ ಸೆಳೆದು ಅದ್ಧೂರಿಯಾಗಿ ನಡೆದಿತ್ತು. ಆ ಬಳಿಕ ನಡೆಯುತ್ತಿರುವ ಮತ್ತೊಂದು ಅದ್ಧೂರಿ ಅಂತಿಮಸಂಸ್ಕಾರ ಇದಾಗಿದೆ.
ರಾಣಿಯ ಹಿರಿಯ ಪುತ್ರ, ಉತ್ತರಾಧಿಕಾರಿ ಕಿಂಗ್ ಚಾರ್ಲ್ಸ್ III ಸಂಪ್ರದಾಯದಂತೆ ಉಡುಪು ತೊಟ್ಟು ಇದರಲ್ಲಿ ಭಾಗವಹಿಸಿದ್ದು, ಬಕಿಂಗ್ಹ್ಯಾಂ ಅರಮನೆಯಿಂದ ಬೆಳಗ್ಗೆಯೇ ಪಾರ್ಥಿವ ಶರೀರದ ಮೆರವಣಿಗೆ ಸಾಗಿದ್ದು, 1953ರಲ್ಲಿ ರಾಣಿ ಕಿರೀಟ ತೊಟ್ಟ ವೆಸ್ಟ್ಮಿನಿಸ್ಟರ್ ಅಬೆನಲ್ಲಿ ಈ ಅಂತಿಮ ಸಂಸ್ಕಾರ ನಡೆಯುತ್ತಿದೆ.